ಕರಾವಳಿಯಲ್ಲಿ ಕುಲೆ ಎಂದರೆ ಸತ್ತವರ ಪ್ರೇತ ಎಂದರ್ಥ. ಇದು ಆಗಾಗ ಜೀವಂತ ಇರುವವರ ಮೈಮೇಲೆ ಬರುವುದುಂಟು. ವ್ಯಕ್ತಿಯೊಬ್ಬ ಏನೋ ತಪ್ಪು ಮಾಡಿದ ಬಳಿಕ ಆ ತಪ್ಪಿನಿಂದ ಪಾರಾಗಲು ಕುಲೆ (ಪ್ರೇತ) ಮೈಮೇಲೆ ಬಂದವನಂತೆ ಒಮ್ಮೆ ನಾಟಕವಾಡುತ್ತಾನೆ. ಆದರೆ, ಆತನ ಮೈಮೇಲೆ ನಿಜಕ್ಕೂ ಪ್ರೇತ ಬಂದಿದೆ ಎಂದು ಇಡೀ ಊರಿಗೆ ಊರೇ ನಂಬಲು ಶುರು ಮಾಡುತ್ತದೆ. ಸು ಫ್ರಮ್ ಸೋ (ಸುಲೋಚನ ಫ್ರಮ್ ಸೋಮೇಶ್ವರ) ಎಂಬ ಕನ್ನಡ ಸಿನಿಮಾದ ಕಥೆಯ ಸಾರವನ್ನು ಹೆಚ್ಚು ಬಿಚ್ಚಿಡಬಾರದು. ಏಕೆಂದರೆ, ಈ ಕಾಮಿಡಿ ಡ್ರಾಮದಲ್ಲಿ ಸರಳ ಕಥೆಯಿದೆ, ಪ್ರಬಲ ಚಿತ್ರಕಥೆ ಇದೆ. ಚಿತ್ರದ ಆರಂಭದಿಂದ ಕೊನೆಯ ತನಕ ಚಿತ್ರಮಂದಿರದ ಕತ್ತಲೆಯೊಳಗೆ ಕುಳಿತವರನ್ನು ನಗೆಗಡಲಿನಲ್ಲಿ ಮುಳುಗಿಸುತ್ತದೆ ಸು ಫ್ರಮ್ ಸೋ. ಇದು ಕನ್ನಡದಲ್ಲಿ ಇತ್ತೀಚೆಗೆ ಬಂದ ಅತ್ಯುತ್ತಮ ಹಾಸ್ಯ ಸಿನಿಮಾ (ಕಾಮಿಡಿ ಡ್ರಾಮಾ). ಹೀಗಾಗಿ, ಸು ಫ್ರಮ್ ಸೋ ಸಿನಿಮಾವನ್ನು “ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ” ಎನ್ನಲು ಅಡ್ಡಿಯಿಲ್ಲ.
ಸಿನಿಮಾ ಶುರುವಾಗುವಾಗ ಬಾಗಿಲ ಸಂದಿಯಲ್ಲಿ ಉದ್ದ ಉಗುರಿನ, ಬಿಳಿ ಬೆರಳುಗಳ ಪ್ರೇತದ ಕೈಗಳು ಕಾಣಿಸುತ್ತವೆ. ಯಬ್ಬಾ… ಇದು ಹಾರರ್ ಸಿನಿಮಾ, ಹಾರ್ಟ್ ಗಟ್ಟಿ ಮಾಡಿಕೊಳ್ಳಬೇಕು (ಹಾರ್ಟ್ ಅಟ್ಯಾಕ್ ಬೇರೆ ಜಾಸ್ತಿಯಾಗಿದೆ) ಎಂದುಕೊಂಡು ಕೆಲವು ಸೆಕೆಂಡುಗಳಲ್ಲಿಯೇ ಇದು ಕಾಮಿಡಿ ಜಾನರ್‌ಗೆ ಹೊರಳಿಕೊಳ್ಳುತ್ತದೆ. ಕರಾವಳಿ ಭಾಗದವರಿಗೆ ಸತ್ತವರ ಪ್ರೇತ, ಕುಲೆ ಎಲ್ಲಾ ಗೊತ್ತಿರುತ್ತದೆ. ಸತ್ತವರ ಪ್ರೇತ ಬದುಕಿದವರ ದೇಹಕ್ಕೆ ಬಂದು ಮಾತನಾಡುವಂತಹ ಘಟನೆಗಳನ್ನು ಸಾಕಷ್ಟು ಜನರು ನೋಡಿರುತ್ತಾರೆ.
ಇದು ರಾಜ್ ಬಿ ಶೆಟ್ಟಿ ಸಿನಿಮಾ. ಹಾಗಂತ, ಇಲ್ಲಿ ರಾಜ್ ಬಿ ಶೆಟ್ಟಿ ನಿಮಿತ್ತ ಮಾತ್ರ. ಅವರಿಗಿಂತ ಹೆಚ್ಚು ನಕ್ಕು ನಗಿಸುವ ಹಾಸ್ಯ ಕಲಾವಿದರ ದಂಡೇ ಇಲ್ಲಿದೆ. ಹಾಗಂತ, ಇಲ್ಲಿ ಹಾಸ್ಯವೆಂದರೆ ಹಾಸ್ಯ ಚಟಾಕಿಗಳ ಬಲವಂತದ ತುರುಕಾಟವಿಲ್ಲ. ಸಹಜ ಹಾಸ್ಯ. ನಗಬಾರದು ಎಂದು ಗಟ್ಟಿಮನಸ್ಸಿನಿಂದ ಕುಳಿತವರನ್ನೂ ಥಿಯೇಟರ್‌ನಲ್ಲಿ ನಗಿಸಿಬಿಡುತ್ತದೆ.
ಒಂದು ಊರು, ಹೆಸರು ಮರ್ಲೂರು. ಕರಾವಳಿಯ ಬಹುತೇಕ ಊರಿನಲ್ಲಿ ಕಾಣಿಸುವಂತಹ ಜನರು ಅಲ್ಲಿ ಇದ್ದಾರೆ. ಆನಂದಣ್ಣ, ರವಿಯಣ್ಣ… ಹೀಗೆ ಎಲ್ಲರೂ ಇದ್ದಾರೆ. ಊರಿನಲ್ಲಿ ಯಾರಾದರೂ ಸತ್ತಾಗ ಪ್ರೇತವಾಗುವುದು ಮುಂತಾದ ನಂಬಿಕೆಗಳೂ ಅಲ್ಲಿವೆ. ಅದೇ ನಂಬಿಕೆಯೊಂದು ಘಟನೆಯೊಂದಕ್ಕೆ ಥಳಕು ಹಾಕಿಕೊಂಡು ಕಾಮಿಡಿ ಡ್ರಾಮಾವಾಗಿದೆ. ಈ ಸಿನಿಮಾದ ಕಥೆಯ ಸಾರವನ್ನು ಒಂದೆರಡು ವಾಕ್ಯಗಳಲ್ಲಿ ಹೇಳಿಬಿಡಬಹುದು. ಆದರೆ, ಇಲ್ಲಿ ಕಥೆಗಿಂತ ಚಿತ್ರಕಥೆಯೇ ಹೆಚ್ಚು ಆಕರ್ಷಕ. ಪ್ರತಿದೃಶ್ಯಗಳಲ್ಲಿಯೂ ನಕ್ಕುನಗಿಸುವಂತಹ ಅಂಶಗಳ ರಸದೌತಣ.
ಹಾಸ್ಯವೆಂದರೆ ಡಬಲ್ ಮೀನಿಂಗ್ ಸಂಭಾಷಣೆಯಲ್ಲ. ಸಹಜವಾಗಿ ನಗೆ ಉಕ್ಕಿಸುವ ಅಭಿನಯಗಳು, ಸನ್ನಿವೇಶಗಳು ಪ್ರೇಕ್ಷಕರನ್ನು ರಂಜಿಸುತ್ತವೆ. ಒಂದು ಮಹಿಳೆಯ ಸಾವು, ಶ್ರಾದ್ಧ, ಕುಲೆಗೆ ಇಡುವುದು (ಪ್ರೇತಗಳಿಗೆ ಬಡಿಸುವುದು)… ಎಣ್ಣೆಪಾರ್ಟಿಯ ಭಾವ… ಸದಾ ತಿನ್ನುತ್ತಿರುವ ಆತನ ಪಾಪದ ಹೆಂಡತಿ… ಆರಂಭದ ಇಂತಹ ದೃಶ್ಯಗಳೊಂದಿಗೆ ಕಥೆಯ ಕೊನೆಯವರೆಗೂ ಪ್ರೇಕ್ಷಕರು ತಡೆದುಕೊಳ್ಳಲು ಸಾಧ್ಯವಾಗದೆ ನಗುತ್ತಲೇ ಇರಬೇಕು ಎಂದು ಚಿತ್ರ ನಿರ್ದೇಶಿಸಿದ್ದಾರೆ ಜೆಪಿ ತುಮಿನಾಡ್. ಈ ಊರಿನ ಒಂದು ಸಮಸ್ಯೆಗೆ ಸುಲೋಚನಾ ಕನೆಕ್ಟ್ ಆಗುತ್ತಾಳೆ.
ಈ ಚಿತ್ರದಲ್ಲಿ ಒಬ್ಬರು ಗುರೂಜಿ ಇದ್ದಾರೆ. ಈಗಾಗಲೇ ಇರುವ ರಿಯಲ್ ಗುರೂಜಿಯೊಬ್ಬರು ನೆನಪಿಗೆ ಬರಬಹುದು. ಸಿನಿಮಾ ಹೇಗಿದೆ ಎಂದು ಯಾರಾದರೂ ಕೇಳಿದರೆ ಸಖತ್ ಕಾಮಿಡಿ ಸಿನಿಮಾ ಎಂದು ಮುಚ್ಚುಮರೆಯಿಲ್ಲದೆ ಹೇಳಿಬಿಡಬಹುದಾದ ಸಿನಿಮಾವಿದು. ಮಂಗಳೂರಿನವರ ಸಿನಿಮಾವ? ನಮಗೆ ಅರ್ಥ ಆಗುತ್ತಾ? ಎಂದು ಕರ್ನಾಟಕದ ಇತರೆ ಜಿಲ್ಲೆಯವರು ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ, ಥಿಯೇಟರ್‌ನಲ್ಲಿ ನಮ್ಮ ಸುತ್ತಮುತ್ತ ಕುಳಿತಿದ್ದ ಬೆಂಗಳೂರಿಗರ ನಗುವೇ ಇದಕ್ಕೆ ಸಾಕ್ಷಿಯಾಗಿತ್ತು.
ಸಿನಿಮಾ ಎನ್ನುವುದು ನಿರ್ದೇಶಕರ ಸ್ವತ್ತು. ಅದು ಹೇಗಿರಬೇಕು ಎನ್ನುವುದನ್ನು ಅವರೇ ನಿರ್ಧರಿಸಬೇಕು. ಹೀಗಿದ್ದರೂ ನನಗೆ ವೈಯಕ್ತಿಕವಾಗಿ ಇದು ಇನ್ನೂ ಈ ಮುಂದಿನ ರೀತಿಯೆಲ್ಲ ಇರಬೇಕು ಎಂದೆನಿಸಿತ್ತು. ಚಿತ್ರದ ನಾಯಕಿಯನ್ನು ಅರ್ಧದಲ್ಲಿ ಕೈಬಿಡಬಾರದಿತ್ತು. ನಾಯಕನಿಗೂ ಆಕೆಗೂ ಕನೆಕ್ಟ್ ಮಾಡಬೇಕಿತ್ತು. ಈಗ ಸಿನಿಮಾಗಳಲ್ಲಿ ಗೋಸ್‌ಬಂಪ್ಸ್ ಅಥವಾ ರೋಮಾಂಚನ ಇದ್ದರೆ ಸಿನಿಮಾ ಇನ್ನೊಂದು ಲೆವೆಲ್‌ಗೆ ಹೋಗುತ್ತದೆ. ರಂಗಿತರಂಗದ ಹಾಗೆ, ಕಾಂತಾರದ ಹಾಗೆ ಇಲ್ಲಿ ಗೂಸ್‌ಬಂಪ್ಸ್ ಸೇರಿಸಬಹುದಿತ್ತು. ವಿಶೇಷವಾಗಿ ಸೀರೆಯುಟ್ಟು ಪ್ರೇತರೂಪಧಾರಿಯಾಗಿ ಬರುವ ಸಮಯವನ್ನು ಈ ರೀತಿಯ ಗೂಸ್‌ಬಂಪ್ಸ್ ಅವಕಾಶವಾಗಿ ಬಳಸಬಹುದಿತ್ತು.
ಈ ಸಿನಿಮಾದಲ್ಲಿ ಏನಾದರೂ ಸಂದೇಶ ಇದೆಯೇ? ಸಮಾಜಕ್ಕೆ ಏನಾದರೂ ಹೇಳಲು ಯತ್ನಿಸುತ್ತದೆಯೇ? ಹೌದು, ಹಾಸ್ಯದ ನಡುವೆಯೇ ಸಮಾಜದ ಕೆಲವೊಂದು ವಾಸ್ತವಗಳನ್ನು ಬಿಚ್ಚಿಡುತ್ತದೆ. ನಕಲಿ ಗುರೂಜಿಗಳ ಕುರಿತು ಎಚ್ಚರಿಸುತ್ತದೆ. ಸಮಾಜದ ಕೆಲವೊಂದು ಮೂಢ ನಂಬಿಕೆಗಳನ್ನು ಪ್ರಶ್ನಿಸದೆ ಇದ್ದರೂ, ಅಣಕಿಸುತ್ತದೆ. ಇದು ಮೂಢ ನಂಬಿಕೆಗೆ ಉತ್ತೇಜನ ನೀಡುವುದಿಲ್ಲ. ಮನುಷ್ಯನ ಒಳಗೆ ಇರುವ ಭಯದ ಕುರಿತು ಮಾತನಾಡುತ್ತದೆ. ಒಬ್ಬನೇ ರಾತ್ರಿ ಮನೆಯೊಳಗೆ ಇರುವಾಗ ನೇತಾಡುತ್ತಿರುವ ಬಟ್ಟೆಗಳು ಕೂಡ ನಮ್ಮ ಮನಸ್ಸಿಗೆ ದೆವ್ಚದಂತೆ ಕಂಡು ದಿಗಿಲು ಹುಟ್ಟಿಸುವುದು ಸಾಮಾನ್ಯ. ಇಂತಹ ಸಹಜ ಭಯಗಳ ಕುರಿತು ತನ್ನದೇ ಶೈಲಿಯಲ್ಲಿ ಅಲ್ಲಲ್ಲಿ ನೋಡುಗರನ್ನು ಎಚ್ಚರಿಸುತ್ತದೆ. ಮಹಿಳೆಯರ ಕುರಿತಾದ ಗೌರವ ಹೆಚ್ಚಿಸುತ್ತದೆ. ಒಟ್ಟಾರೆ ಒಟಿಟಿಗೆ ಬರುವ ತನಕ ಕಾಯುವ ಸಿನಿಮಾ ಇದಲ್ಲ. ಚಿತ್ರಮಂದಿರದಲ್ಲಿ ಕುಟುಂಬ ಸಮೇತ ನೋಡಬಹುದಾದ ನಕ್ಕುನಗಿಸುವ ಸುಂದರ ಸಿನಿಮಾವಿದು. “ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ”.
- ಪ್ರವೀಣ್ ಚಂದ್ರ ಪುತ್ತೂರು
ತಾರಾಗಣ: ಜೆಪಿ ತುಮಿನಾಡ್, ಶನೀಲ್ ಗೌತಮ್, ರಾಜ್ ಬಿ ಶೆಟ್ಟಿ ,ಪ್ರಕಾಶ್ ಕೆ ತುಮಿನಾಡ್, ದೀಪಕ್ ರೈ ,ಅರ್ಜುನ್ ಕಜೆ
ನಿರ್ದೇಶನ: ಜೆಪಿ ತುಮ್ಮಿನಾಡು
ಕರ್ನಾಟಕ ಬೆಸ್ಟ್ ಸ್ಟಾರ್ ರೇಟಿಂಗ್: ****











Got a Questions?
Find us on Socials or Contact Us and we’ll get back to you as soon as possible.