ಪುಸ್ತಕ ಪರಿಚಯ: ಸೇತುರಾಮ್ ಅವರ “ನಾವಲ್ಲ” ಕಥಾ ಸಂಕಲನ

By | 01/08/2018
navalla kananda book

ಇತ್ತೀಚೆಗೆ ನಾನು ಓದಿ ಮುಗಿಸಿದ ಪುಸ್ತಕ ಎಸ್.ಎನ್. ಸೇತುರಾಮ್ ರಚಿಸಿದ “ನಾವಲ್ಲ” ಎಂಬ ಕಥಾ ಸಂಕಲನ. ದೊಡ್ಡ ಪುಸ್ತಕವನ್ನು ಒಂದೆರಡೇ ದಿನದಲ್ಲಿ ಓದಿ ಮುಗಿಸುವ ನನಗೆ ಈ ಆರು ಕತೆಗಳ ಪುಸ್ತಕವನ್ನು ಓದಿ ಮುಗಿಸಲು ಭರ್ತಿ ಆರು ದಿನ ಬೇಕಾಯಿತು. ತಡವಾಗಿರುವುದಕ್ಕೆ ಕಾರಣ “ಇದರಲ್ಲಿರುವ ಒಂದೊಂದು ಕತೆಯೂ ಮನಸ್ಸಿನ ಮೇಲೆ ಬೀರುವ ಪರಿಣಾಮ, ಚಿಂತನೆಗೆ ಹಚ್ಚುವ ಪರಿ, ಮೂಡಿಸುವ ಭಾವ ಇತ್ಯಾದಿಗಳು”. ನಾನು ಓದಿದ ಅತ್ಯುತ್ತಮ ಕಥಸಂಕಲನವಿದು.

ಸೇತುರಾಮ್ ನಾಟಕಗಳು ನನಗಿಷ್ಟ. ಅವರ “ಅತೀತ” ನಾಟಕವನ್ನು ರಂಗಶಂಕರದಲ್ಲಿ ನೋಡಿದ್ದೆ. ಕೆಲವೇ ಪಾತ್ರಗಳಾದರೂ ಇಡೀ ನಾಟಕಕ್ಕೆ ಇವರೇ ಪ್ರಮುಖ ಸೂತ್ರದಾರಿ. ಮಾತಿನಲ್ಲಿಯೇ ಮನಸ್ಸು ಮುಟ್ಟುತ್ತಿದ್ದ ಅವರ ನಟನೆ ಇಷ್ಟವಾಗಿತ್ತು.

ಇವರ “ನಾವಲ್ಲ” ಪುಸ್ತಕ ಓದಲು ಕುಳಿತರೂ ನಾಟಕದಲ್ಲಿ ಅವರೇ ಮಾತನಾಡಿದಂತೆ ಆಗುತ್ತಿತ್ತು. ಅತೀತದಲ್ಲಿ ಅವರ ಮಾತಿನ ಶೈಲಿ ಹೇಗಿತ್ತೋ, ಅವರ ಬರವಣಿಗೆಯ ಶೈಲಿಯೂ ಹಾಗೆಯೇ ಇದೆ. ಇತರರ ಬರವಣಿಗೆ ಶೈಲಿ ಅನುಕರಣೆಯೇ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ತನ್ನ ಸ್ವಂತ ಬರವಣಿಗೆ ಶೈಲಿ ಮೂಲಕ ಸೇತುರಾಮ್ ಇಷ್ಟವಾಗುತ್ತಾರೆ.

ನಾನು ಈ ಪುಸ್ತಕವನ್ನು ಅಮೂಲಾಗ್ರವಾಗಿ ವಿಮರ್ಶೆ ಮಾಡುವುದಿಲ್ಲ. ಯಾಕೆಂದರೆ ನಾನು ವಿಮರ್ಶಕ ಅಲ್ಲ. ಓದಿ ಮುಗಿಸಿದ ಬಳಿಕ ಈ ಪುಸ್ತಕವನ್ನು ಇನ್ನಷ್ಟು ಜನ ಓದಿದರೆ ಚೆನ್ನಾಗಿತ್ತು ಎಂದೆನಿಸಿತ್ತು. ಖರೀದಿಸುವವರು ಖರೀದಿಸಲಿ ಎಂಬ ಕಾರಣದಿಂದ ಈ ಬ್ಲಾಗ್ ಬರಹ ಬರೆದಿದ್ದೇನೆ.

ಮೋಕ್ಷ ಎಂಬ ಕತೆಯಲ್ಲಿ ಒಂದು ಮಠ, ಮಠದ ಸ್ವಾಮೀಜಿಯೊಬ್ಬರ ಕತೆಯಿದೆ. ಮಠದ ಸುತ್ತಮತ್ತಲಿನ ರಾಜಕೀಯ ಸೇರಿದಂತೆ ಹಲವು ಸಂಗತಿಗಳನ್ನು ನಮ್ಮ ಮುಂದಿಡುತ್ತದೆ. ಮಗುವಾಗದೆ ಇರುವುದರಿಂದ ಕುಟುಂಬದವರ, ಗಂಡನ ತಾತ್ಸಾರಕ್ಕೆ ಈಡಾಗುವ ಮತ್ತು ಕೊನೆಗೆ ಮೌನಮುರಿದು ಬೆವರಿಳಿಸುವ “ಮೌನಿ” ಕತೆಯೂ ಹೃದಯತಟ್ಟುತ್ತದೆ.  ಸ್ಮಾರಕ ಎಂಬ ಕತೆಯಲ್ಲಿ ಅಪ್ಪನೇ ಮಕ್ಕಳಿಗೆ ಆದರ್ಶವಾಗುವುದು ಮತ್ತು ಅಮ್ಮ ಮಾಡಿದ ತ್ಯಾಗ ಯಾರಿಗೂ ತಿಳಿಯದೇ ಹೋಗುವ ಸಂಗತಿಯನ್ನು ಹೇಳಲಾಗಿದೆ. ಸಲಿಂಗಕಾಮಿ ಗಂಡ, ಮುಗ್ಧ ಪ್ರೇಮಿ, ವಿಶೇಷ ಚೇತನ ಮಗ ಹೀಗೆ ವಿವಿಧ ವಿಷಯಗಳೊಂದಿಗೆ ಬದುಕಲಾಗದೆ ಬದುಕುವ ಕ್ಯಾತ್ಯಾಯಿನಿ ಕತೆ ಇನ್ನೊಂದು ರೀತಿಯಲ್ಲಿ ಮನಸ್ಸು ತಟ್ಟುತ್ತದೆ. ನಾವಲ್ಲ ಎಂಬ ಕಿರು ಕತೆಯಲ್ಲಿ ಏನಿಲ್ಲ, ಬರೀ ಬೋದನೆ, ಆಲಾಪ ಎಂದುಕೊಂಡು ಸುಮ್ಮನೆ ಓದುತ್ತ ಹೋದರೆ ಕೊನೆಗೆ ಬೆಚ್ಚಿಬೀಳಿಸುತ್ತದೆ.

ಇವರು ಬರೆದ ಒಂದೊಂದು ಕತೆಯನ್ನು ಓದಿದಾಗಲೂ ರಂಗಶಂಕರದಲ್ಲಿ ಕುಳಿತು ಇವರದ್ದೇ ನಾಟಕ ನೋಡಿದ್ದಷ್ಟು ಖುಷಿಯಾಗುತ್ತದೆ

ನಾವಲ್ಲ ಪುಸ್ತಕವನ್ನು ಆನ್ ಲೈನ್ ನಲ್ಲಿ ಖರೀದಿಸಬಹುದು.

ಸೇತುರಾಮ್ ಬಗ್ಗೆ ಹೆಚ್ಚು ಗೊತ್ತಿಲ್ಲದವರು ಅವರ ನಾಟಕಗಳನ್ನು ಯೂಟ್ಯೂಬ್ ನಲ್ಲಿ ನೋಡಬಹುದು ಅಥವಾ ರಂಗಶಂಕರ ಮುಂತಾದೆಡೆ ಪ್ರದರ್ಶನಗಳು ಇದ್ದಾಗ ನೋಡಬಹುದು.

ಅತೀತ ನಾಟಕ ನೋಡಲು ಬಯಸುವವರು ಇಲ್ಲಿ ಕೆಳಗೆ ನೀಡಲಾದ ಯುಟ್ಯೂಬ್ ವಿಡಿಯೋ ನೋಡಬಹುದು.

ಸೇತುರಾಮ್ ಅವರ ಗತಿ ನಾಟಕ ಈ ಕೆಳಗೆ ಇದೆ.

Navalla Book Review

    Leave a Reply

    Your email address will not be published. Required fields are marked *