ಬಾಯಿ ತೆರೆದಿದೆ ಎಐ ತಿಮಿಂಗಿಲ, ಒಳ ಪ್ರವೇಶಿಸದೆ ಇರಲಾರಿರಿ; ರಿಲಯೆನ್ಸ್‌ ಜಿಯೋ ಆ ದಿನಗಳು ನೆನಪಿದೆಯೇ?

AI ತಂತ್ರಜ್ಞಾನ Freemium ಮಾದರಿ ಜಿಯೋ ಉದಾಹರಣೆ Freemium AI usage India ChatGPT Gemini Example
AI ತಂತ್ರಜ್ಞಾನ Freemium ಮಾದರಿ ಜಿಯೋ ಉದಾಹರಣೆ

ಈ ಜಗತ್ತಿನಲ್ಲಿ ವ್ಯಾಪಾರದಲ್ಲಿ Freemium Model ಅಥವಾ ಉಚಿತ ಸ್ಯಾಂಪಲ್‌ ಮಾದರಿಯನ್ನು ಬಳಸಲಾಗುತ್ತಿದೆ. ಮೊದಲಿಗೆ ಜನರಿಗೆ ಚಟ ಹತ್ತಿಸುವುದು, ಆಮೇಲೆ ಅದು ಅವರಿಗೆ ಅನಿವಾರ್ಯವಾದಗ ಹಣ ಪಾವತಿಸುವಂತೆ ಮಾಡುವುದು. ಕುಡಿತ ಅಭ್ಯಾಸ ಇಲ್ಲದವನಿಗೆ ಸ್ನೇಹಿತರು ಆರಂಭದಲ್ಲಿ ತಗೋ ಸ್ವಲ್ಪ ತಗೋ ಎಂದು ಉಚಿತವಾಗಿ ಕುಡಿಸಬಹುದು. ಸಿಗರೇಟು ಅಭ್ಯಾಸ ಇರುವವರಿಗೆ ಒಂದು ಧಮ್‌ ಎಳೆ ಏನಾಗೋಲ್ಲ ಎಂದು ಹೇಳಬಹುದು. ಬೇಡ ಬೇಡ ಎಂದು ತುಸುತುಸುವೇ ಇಂತಹ ಕೆಟ್ಟ ಅಭ್ಯಾಸಗಳ “ಟೇಸ್ಟ್‌ ನೋಡಿದವರಿಗೆ” ಮುಂದೆ ಅದು ಚಟವಾಗುತ್ತದೆ. ಬಿಸ್ನೆಸ್‌ಗಳಲ್ಲಿ ಶ್ಯಾಂಪೂ ಪ್ಯಾಕೇಟ್‌ಗಳನ್ನು ಉಚಿತವಾಗಿ ನೀಡುವ ಕಂಪನಿಗಳು ಇರಬಹುದು.

Freemium Model ಅನ್ನು ಭಾರತೀಯರಿಗೆ ಅರ್ಥ ಮಾಡಿಸಬೇಕಾದರೆ ಅದಕ್ಕೆ ಜಿಯೋಕ್ಕಿಂತ ಚೆನ್ನಾಗಿರುವ ಉದಾಹರಣೆ ದೊರಕದು. ತಿಂಗಳಿಗೆ ಒಂದೆರಡು ಜಿಬಿ ಇಂಟರ್‌ನೆಟ್‌ಗೆ ಪರಿತಪಿಸುತ್ತಿದ್ದ ಜನರಿಗೆ ಪ್ರತಿದಿನ ಜಿಬಿಗಟ್ಟಲೆ ಲೆಕ್ಕದಲ್ಲಿ ರಿಲಯೆನ್ಸ್‌ ಜಿಯೋ ನೀಡಿತ್ತು. ಉಚಿತ ಕಾಲ್‌, ಅನ್‌ಲಿಮಿಟೆಡ್‌ ಇಂಟರ್‌ನೆಟ್‌ ಸಿಕ್ಕಾಗ ಜನರು ನೆಟ್‌ ದಾಸರಾದರು. ಭಾರತ ವೇಗದ ಇಂಟರ್‌ನೆಟ್‌ ಜಗತ್ತಿಗೆ ಹೊರಳಿದ ಸಂದರ್ಭ ಇದಾಗಿತ್ತು. ಇದೇ ಸಮಯದಲ್ಲಿ ಜಿಯೋ ಅನುಸರಿಸಿದ ಮಾರುಕಟ್ಟೆ ತಂತ್ರ ಕೂಡ “ಉಚಿತ ಅಥವಾ ಕಡಿಮೆ ದರದ ಸ್ಯಾಂಪಲ್‌ ಮಾದರಿ. ಭಾರತದ ಹಳ್ಳಿಹಳ್ಳಿಗಳ ಜನರು, ನಗರಗಳ ಜನರು, ಜನಸಾಮಾನ್ಯರು, ಉದ್ಯೋಗಿಗಳು, ವಿದ್ಯಾರ್ಥಿಗಳು, ಮಕ್ಕಳು ಸೇರಿದಂತೆ ಎಲ್ಲರಿಗೂ ಇಂಟರ್‌ನೆಟ್‌ ಅನಿವಾರ್ಯವಾಗಿಬಿಟ್ಟದ್ದು ಇತಿಹಾಸ. ಈಗ ಜಿಯೋ ಇರಲಿ, ಏರ್‌ಟೆಲ್‌ ಇರಲಿ, ಪ್ರತಿತಿಂಗಳು ಕಡಿಮೆಯೆಂದರೂ ಇನ್ನೂರು ಮುನ್ನೂರು ರೂಪಾಯಿಯನ್ನು ಸಿಮ್‌ಗೆ ಹಾಕಬೇಕಾಗಿದೆ. ಐನೂರು ಆರುನೂರು ಎಂದು ಮೂರು ತಿಂಗಳ ಪ್ಯಾಕ್‌ ಹಾಕಿಕೊಳ್ಳುವುದು ಅನಿವಾರ್ಯವಾಗಿದೆ. ಮೊದಲು ಕೈಯಲ್ಲೊಂದು ಮೊಬೈಲ್‌ ಇತ್ತು. ತಿಂಗಳಿಗೆ ಐವತ್ತು ನೂರು ರೂಪಾಯಿ ಹಾಕಿದರೆ ಮುಗಿಯುತ್ತಿತ್ತು. ಈಗ ಮೊಬೈಲ್‌ ಇರುವವರು ವರ್ಷಕ್ಕೆ ಹಲವು ಸಾವಿರ ರೂಪಾಯಿ ಖರ್ಚುಮಾಡಬೇಕಾದದ್ದು ಅನಿವಾರ್ಯ. ಎರಡೆರಡು ಸಿಮ್‌ ಕಾರ್ಡ್‌ ಇರುವವರಂತೂ ರಿಚಾರ್ಜ್‌ ಸಮಯ ಬಂದಾಗ ಅಳುಮುಖ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇದನ್ನು ಜಾಸ್ತಿ ವಿವರಿಸುವುದಿಲ್ಲ. ಏಕೆಂದರೆ, ಜಿಯೋದ ಅಂದಿನ ಖರ್ಚು ಮತ್ತು ಇಂದಿನ ಖರ್ಚು ಬಹುತೇಕರಿಗೆ ಅನುಭವಕ್ಕೆ ಬಂದಿರಬಹುದು.

ಎಐ freeಮೀಯಂ ಮಾಡೆಲ್‌ ಗಮನಿಸಿದ್ದೀರಾ?

ಈಗ ಎಲ್ಲೆಡೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಇದೆ. ಜನ ಸಾಮಾನ್ಯರಿಂದ ಉದ್ಯಮಗಳವರೆಗೆ ಎಲ್ಲರೂ ಜೆಮಿನಿ, ಚಾಟ್‌ಜಿಪಿಟಿ, ಗ್ರೋಕ್‌ ಎಂದು ಬಳಸುತ್ತಿದ್ದಾರೆ. ಈಗ ಚಾಟ್‌ಜಿಪಿಟಿ, ಬಾರ್ಡ್, ಮೈಕ್ರೋಸಾಫ್ಟ್‌ ಕೋಪೈಲಟ್, ಜೆಮಿನಿ ಮುಂತಾದವನ್ನೂ ಉಚಿತ ಆವೃತ್ತಿಯಲ್ಲಿ ಬಳಸಬಹುದು. ಉಚಿತ ಸೇವೆಗಳನ್ನು ಜನರು ಆನಂದಿಸುತ್ತಿದ್ದಾರೆ. ವಿದ್ಯಾರ್ಥಿಗಳು ಅಸೈನ್‌ಮೆಂಟ್‌ ಸ್ವಂತ ಬರೆಯುವ ಬದಲು ಎಐ ಮೊರೆ ಹೋಗುತ್ತಿದ್ದಾರೆ. ಉದ್ಯೋಗಿಗಳು ಕೂಡ ಯಾವ ಕೆಲಸವನ್ನು ಎಐ ಬಳಿ ಮಾಡಿಸಬಹುದೋ ಅದನ್ನು ಮಾಡುತ್ತಿದ್ದಾರೆ. ಇದು ತಕ್ಷಣದ ಕೆಲಸಗಳಿಗೆ ಸಹಾಯವಾಗುತ್ತದೆ. ಜನರಿಗೆ ನಿಧಾನವಾಗಿ ಎಐ ಅಭ್ಯಾಸವಾಗುತ್ತಿದೆ. ಹೊಸ ಪೀಳಿಗೆಯಂತೂ ಎಐ ಬಳಕೆದಾರರಾಗಿ ರೂಪುಗೊಳ್ಳುತ್ತಿದ್ದಾರೆ. ಇದು “Free Sample Strategy” ಅಥವಾ Freemium Model ಎನ್ನುವ ವ್ಯಾಪಾರದ ತಂತ್ರ. ಅವತ್ತು ರಿಲಯೆನ್ಸ್‌ ಜಿಯೋ ಮಾಡಿದ್ದು, ಬಳಿಕ ಏರ್‌ಟೆಲ್‌ ಅನುಸರಿಸಿದ್ದು ಕೂಡ ಇದೇ ತಂತ್ರ. ಈಗ ಎಐ ಜಗತ್ತು ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಬಳಸುತ್ತಿರುವುದು ಕೂಡ ಇದೇ ತಂತ್ರ.

  • ಮೊದಲು ಉಚಿತವಾಗಿ ದೊರಕುತ್ತದೆ. ಜನರು ಎಐ ತಂತ್ರಜ್ಞಾನವನ್ನು ಉಚಿತವಾಗಿ ಕೊಡುತ್ತಾರೆ.
  • ವಾವ್‌ ಎಫೆಕ್ಟ್‌ ನೋಡಿ ಜನರು ಖುಷಿಗೊಳ್ಳುತ್ತಾರೆ. ಎಲ್ಲಾ ಕೆಲಸವು ಎಐ ಮೂಲಕ ಸರಳವಾಗಿ, ವೇಗವಾಗಿ ನಡೆಯುವುದು ಇಷ್ಟವಾಗುತ್ತದೆ.
  • ಇದು ಬಳಿಕ ಚಟವಾಗುತ್ತದೆ. ಅಭ್ಯಾಸವಾಗುತ್ತದೆ. ಅನಿವಾರ್ಯವಾಗುತ್ತದೆ. ಏಐ ಬಳಸುವುದು ದಿನಚರಿಯಾದಾಗ ಅದು ಚಟವಾಗಿ ಮಾರ್ಪಡುತ್ತದೆ.
  • ಸರಿಯಾದ ಸಮಯ ನೋಡಿ ಜನರು ಲಾಕ್‌ ಆಗುತ್ತಾರೆ. ಇದು ಲಾಕ್‌ ಇನ್‌ ಪಿರೇಯಿಡ್‌. ಈಗ ಜಿಯೋ ಸಿಮ್‌, ಏರ್‌ಟೆಲ್‌ ಸಿಮ್‌ ಬಳಕೆದಾರರ ಸ್ಥಿತಿ ಇದೆಯಲ್ವ. ಎಐ ಕೂಡ ಬಳಿಕ ಹೀಗೆಯೇ ಆಗುತ್ತದೆ. ಎಐನ ಕೆಲವೊಂದು ಪ್ರಮುಖ ಫೀಚರ್‌ಗಳು ಪೇಡ್‌ ಆಗಿ ಹೋಗುತ್ತವೆ. ಹೊರಗೆ ಬೇರೆ ಆಯ್ಕೆ ಇರುತ್ತಿಲ್ಲ. ಹಣ ನೀಡಬೇಕಾಗುತ್ತದೆ. ಈಗಾಗಲೇ ಜನರಿಗೆ ಎಐ ಉಚಿತ ಸಾಕಾಗದೆ ಹೋಗುತ್ತಿರಬಹುದು. ಹತ್ತು ಡಾಲರ್‌, ಇಪತ್ತು ಡಾಲರ್‌ ಎಂದು ಹಣ ನೀಡಿ ಎಐ ಪ್ರೀಮಿಯಂ ಖರೀದಿ ಆರಂಭವಾಗಿದೆ. ತಪ್ಪಲ್ಲ ಇದು, ಆದರೆ, ಕಿಸೆಗೆ ಹೊರೆ ತಪ್ಪದು.

ಎಐ ತಿಮಿಂಗಿಲ: ಮುಂದೆ ಏನಾಗಬಹುದು?

ಭವಿಷ್ಯದಲ್ಲಿ ಎಐ ತಂತ್ರಜ್ಞಾನದ ಪಾವತಿಸದ ಸೇವೆಗಳ ಆಯ್ಕೆ ಕಡಿಮೆ ಆಗುತ್ತದೆ. ಉಚಿತ ಆವೃತ್ತಿಗಳಲ್ಲಿ ಮಿತಿಗಳು ಇರುತ್ತವೆ (ಹೆಚ್ಚು ಪ್ರಶ್ನೆ ಕೇಳಲಾಗದು, ಫೀಚರ್‌ಗಳು ಇಲ್ಲ). ಹೆಚ್ಚಿನ ಪ್ರೆಸಿಷನ್, ಸ್ಪೀಡ್, ಡೇಟಾ ಪ್ರೈವಸಿ ಬೇಕಾದವರಿಗೆ ಪೇಡ್ ಸೇವೆ ಅವಶ್ಯಕವಾಗಬಹುದು. ಅನಿವಾರ್ಯ ಸೇವೆಗಳಲ್ಲೆ ಎಐ ಇರುತ್ತದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ – ಎಲ್ಲದರಲ್ಲಿ AI Tools ಅಗತ್ಯವಾಗುತ್ತವೆ. ಶಾಲಾ ಮಕ್ಕಳ ಫೀಸ್‌ ಇನ್ನಷ್ಟು ಹೆಚ್ಚಬಹುದು. ಕಂಪನಿಗಳು ಅನಿವಾರ್ಯವಾಗಿ ಈ ಟೂಲ್‌ಗೆ ದೊಡ್ಡಮೊತ್ತ ಇಡಬೇಕಾಗಬಹುದು. ಎಐ ಸಬ್‌ಸ್ಕ್ರಿಪ್ಷನ್, ಕ್ರೆಡಿಟ್ ಪ್ಲಾನ್ ಇತ್ಯಾದಿಗಳನ್ನು ಖರೀದಿಸುವುದು ಮುಂದೆ ಅನಿವಾರ್ಯವಾಗಲಿದೆ.

ಇದನ್ನೂ ಓದಿ: ಎಐ ಜತೆ ಸಂಬಂಧ ಬೆಳೆಸುವಾಗ ಇರಲಿ ಎಚ್ಚರ; ಚಾಟ್‌ಜಿಪಿಟಿ, ಜೆಮಿನಿ, ಗ್ರೋಕ್‌ ಜತೆಗಿನ ಆತ್ಮೀಯತೆ ಪ್ರೀತಿಯಾಗದಿರಲಿ

ಉಚಿತವಾಗಿ ನೀಡುವುದು ಸುಲಭವಲ್ಲ

ಉದ್ಯಮಗಳು ಜನರಿಗೆ ಉಚಿತವಾಗಿ ನೀಡುತ್ತವೆ ಎಂದರೆ ಅದರಲ್ಲಿ ದೂರದೃಷ್ಟಿ ಇರುತ್ತದೆ ಎನ್ನುವುದು ನಿಜ. ಆದರೆ, ಉಚಿತವಾಗಿ ನೀಡುವುದು ಸುಲಭವಲ್ಲ. ಜನರಿಗೆ ರುಚಿ ಹತ್ತಿಸಲು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಇತ್ತೀಚೆಗೆ ಜನರೆಲ್ಲ ಮುಗಿಬಿದ್ದು ಘಿಬ್ಲಿ ಆರ್ಟ್‌ ಮಾಡಿಕೊಂಡಿದ್ದರು. ಈ ಸಮಯದಲ್ಲಿ ಎಐ ಕಂಪನಿಗಳ ಸರ್ವರ್‌ಗಳಿಗೆ ಬಿದ್ದ ಒತ್ತಡ ಅಷ್ಟಿಷ್ಟಲ್ಲ. ಆ ಕಂಪನಿಗಳಿಗೆ ಕೋಟ್ಯಂತರ ಹಣ ಇದರಿಂದ ಖರ್ಚಾಗಿರುತ್ತದೆ. ಮುಂದೆ ಇದನ್ನೆಲ್ಲ ಜನರಿಂದಲೇ ಪೀಕಿಸಬಹುದು. ಹೀಗಾಗಿ, ಎಐ ಕಂಪನಿಗಳು ಕಷ್ಟವಾದರೂ ಸಹಿಸಿಕೊಂಡಿವೆ.

ಇದನ್ನೂ ಓದಿ: SEO GEO AEO: ಎಸ್‌ಇಒ ಗೊತ್ತು, ಜಿಇಒ, ಎಇಒ ಬಗ್ಗೆ ಗೊತ್ತೆ? ಎಐ ಸರ್ಚ್‌ ಆಪ್ಟಿಮೈಜೇಷನ್‌ ಇಂದಿನ ಅವಶ್ಯಕತೆ

ಎಐ ಉಚಿತ ಮತ್ತು ಪ್ರೀಮಿಯಂ ಆಯ್ಕೆಗಳು

  • ಚಾಟ್‌ಜಿಪಿಟಿಯಲ್ಲಿ ಜಿಪಿಟಿ 3.5 ಉಚಿತವಾಗಿದೆ. ಭವಿಷ್ಯದಲ್ಲಿ ಜಿಪಿಟಿ 4., ಫೈಲ್‌ ಅಪ್ಲೋಡ್‌, ಕೋಡ್‌ ಟೂಲ್ಸ್‌ಗಳನ್ನು ಬಳಸಬೇಕಾದರೆ ಹಣ ನೀಡುವುದು ಅನಿವಾರ್ಯ. ಈಗಾಗಲೇ ಚಾಟ್‌ ಜಿಪಿಟಿಯ ಹಲವು ಆಯ್ಕೆಗಳು ಉಚಿತವಾಗಿ ದೊರಕುವುದಿಲ್ಲ. ಒಂದಿಷ್ಟು ಹೊತ್ತು ಜಿಪಿಟಿ ಬಳಸಿದ ಬಳಿಕ ಜಿಪಿಟಿ ಪ್ಲಸ್‌ ಖರೀದಿಸಿ, ನಿಮ್ಮ ಇವತ್ತಿನ ಮಿತಿ ಮುಗಿದಿದೆ ಎಂಬ ಸಂದೇಶಗಳು ಬರುತ್ತಿವೆ.
  • ಫೋಟೋ ಎಡಿಟಿಂಗ್‌ಗೆ ಸಾಕಷ್ಟು ಜನರು ಕ್ಯಾನ್ವಾ ಬಳಸುತ್ತಿದ್ದಾರೆ. ಉಚಿತ ಆವೃತ್ತಿಯಲ್ಲಿ ಕೆಲವು ಆಯ್ಕೆಗಳು ಇವೆ. ಎಐ ಮ್ಯಾಜಿಕ್‌ ಡಿಸೈನ್‌, ಬ್ಯಾಕ್‌ಗ್ರೌಂಡ್‌ ರಿಮೂವರ್‌ ಇತ್ಯಾದಿಗಳಿಗೆ ಹಣ ನೀಡಬೇಕು.
  • ಗೂಗಲ್‌ ಸರ್ಚ್‌ ಸಜೆಷನ್‌ ಈಗ ಉಚಿತವಾಗಿ ದೊರಕುತ್ತದೆ. ಗೂಗಲ್‌ ಅಂದಾಗ ನೆನಪಾಯಿತು. ನಾವೆಲ್ಲ ಬಳಸುವ ಜಿಮೇಲ್‌ ಉಚಿತ. ಹಲವು ವರ್ಷಗಳಿಂದ ಜನರು ಇದನ್ನು ಬಳಸುತ್ತಿದ್ದಾರೆ. ಬಹುತೇಕರ ಜಿಮೇಲ್‌ 15 ಜಿಬಿ ಫುಲ್‌ ಆಗಿದೆ. ಎಷ್ಟು ಹಳೆಯ ಇಮೇಲ್‌ಗಳನ್ನು ಡಿಲೀಟ್‌ ಮಾಡಿದರೂ ಹೆಚ್ಚು ಸ್ಥಳ ಇಲ್ಲ. ಪ್ರೀಮಿಯಂ ಜಿಮೇಲ್‌ ಸ್ಟೋರೇಜ್‌ ಖರೀದಿಸುವುದು ಅನಿವಾರ್ಯವಾಗಿದೆ. ಸಾಕಷ್ಟು ಜನರು ಹಣ ನೀಡಿ ಸ್ಟೋರೇಜ್‌ ಖರೀದಿಸಿದ್ದಾರೆ. ಗೂಗಲ್‌ ಈ ಸಮಯಕ್ಕಾಗಿ ತಾಳ್ಮೆಯಿಂದ ಕಾಯುತ್ತಿತ್ತು.
  • ಜೆಮಿನಿ ಉಚಿತವಾಗಿ ಸಾಕಷ್ಟು ಜನರು ಬಳಸುತ್ತಿರಬಹುದು. ಜೆಮಿನಿ ಪ್ರೋಗೆ ಹಣ ನೀಡಬೇಕು. ಮುಂದಿನ ದಿನಗಳಲ್ಲಿ ಜನರಿಗೆ ಈ ಉಚಿತ ಆಯ್ಕೆಗಳು ಸಾಕಾಗದು.
  • ಎಂಎಸ್‌ ವರ್ಡ್‌ನಲ್ಲಿ ಗ್ರಾಮರ್‌ ಉಚಿತಾಗಿ ದೊರಕಬಹುದು. ಕೋಪೈಲೆಟ್‌ ಅಂದರೆ ಎಐ ಬರವಣಿಗೆ, ಡೇಟಾ ಸಮ್ಮರಿ ಇತ್ಯಾದಿಗಳಿಗೆ ಹಣ ನೀಡಬೇಕಾಗಬಹುದು. ಇವು ಉದಾಹರಣೆಯಷ್ಟೇ, ನೀವು ಮೊಬೈಲ್‌ನಲ್ಲಿ ಬಳಸುವ ಹಲವು ಎಐ ಫೀಚರ್‌ಗಳು ಈಗ ಉಚಿತ. ಮುಂದಿನ ದಿನಗಳಲ್ಲಿ ಅದಕ್ಕೂ ಹಣ ಪಾವತಿಸಬೇಕಾಗಬಹುದು.

ಈಗ ಎಐ ಉಚಿತವಾಗಿ ದೊರಕುತ್ತಿದೆ. ಮುಂದೆ ಅದು ಜನರಿಗೆ ಅನಿವಾರ್ಯವಾಗುತ್ತದೆ. ಆಗ ಉಚಿತ ಬೋರ್ಡ್‌ ಕಾಣೆಯಾಗುತ್ತದೆ. ಇಡೀ ಜಗತ್ತು ಎಐ ಕಡೆಗೆ ಹೋಗುತ್ತಿರುವುದು ಈಗಿನ ವಿದ್ಯಮಾನ. ಇದು ನಾವೆಲ್ಲರು ಅಂದುಕೊಂಡಿರುವುದಕ್ಕಿಂತಲೂ ವೇಗವಾಗಿ ಸಾಗುತ್ತಿದೆ. ಎಐಗೆ ಮುಂದೆ ಹಣ ನೀಡಬೇಕಾಗುತ್ತದೆ ಎಂದು ಈಗ ಬಳಸದೆ ಇರಬೇಡಿ. ಏಕೆಂದರೆ ಎಐ “ಸಾಕ್ಷರತೆ” ಇಲ್ಲದೆ ಇದ್ದರೆ ಮುಂದೆ ಮಕ್ಕಳು, ಮೊಮ್ಮಕ್ಕಳು ನಮ್ಮನ್ನು “ನಿಂಗೆ ಎಐ ಬಳಸಲು ಗೊತ್ತಿಲ್ವಾ?” ಎಂದು ಮೊದಲಿಸಬಹುದು.

ಇದನ್ನು ಓದಿದ್ದೀರಾ?: ಎಐ ಎಂದರೇನು? ಮನುಷ್ಯನ ಮೆದುಳಿನಂತೆ ಯೋಚಿಸುವ ಕೃತಕ ಬುದ್ಧಿಮತ್ತೆ ಬಗ್ಗೆ ತಿಳಿಯೋಣ

ಕರ್ನಾಟಕ ಬೆಸ್ಟ್‌ ಡಿಜಿಟಲ್‌ ಸರ್ವೀಸ್‌ಗಳು

error: Content is protected !!