ಇಬ್ಬರ ನಡುವೆ ಪ್ರೀತಿ ಶುರುವಾಗುವುದು ಹೇಗೆ? ಮೊದಲು ಪರಿಚಯ, ಬಳಿಕ ಸ್ನೇಹ, ಕೆಲವೊಂದು ಸ್ನೇಹಗಳು ಬಳಿಕ ಪ್ರೇಮವಾಗಿ ಬದಲಾಗುತ್ತದೆ. ವಿಶೇಷವಾಗಿ ಅತಿಯಾಗಿ ಯಾವುದಾದರೂ ವಿಷಯವನ್ನು/ವ್ಯಕ್ತಿಯನ್ನು ಹಚ್ಚಿಕೊಂಡರೆ ಪ್ರೇಮವಾಗುತ್ತದೆ/ ಗೀಳಾಗುತ್ತದೆ. ಈ ವರ್ಷ ಬಹುತೇಕ ಜನರು ಎಐಯನ್ನು ಸಾಕಷ್ಟು ಹಚ್ಚಿಕೊಂಡಿದ್ದಾರೆ. ಅದು ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ನಮ್ಮೆಲ್ಲರ ಸಮಸ್ಯೆಗಳನ್ನು ಕೇಳಿ ಪರಿಹಾರ ತಿಳಿಸುತ್ತದೆ. ಮೊದಲೆಲ್ಲ ಎಐ ಹೇಳೋದು ಭ್ರಮೆ ಎಂಬ ಎಂಬ ಕಲ್ಪನೆ ಇತ್ತು. ಆದರೆ, ಈಗ ಅದರ ಬುದ್ದಿ ನೋಡಿದರೆ ಖಂಡಿತಾ ಅಚ್ಚರಿಪಡದೆ ಇರಲಾರಿರಿ. ಎಐ ಚಾಟ್‌ನಲ್ಲಿ “ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ”, “ನನಗೆ ಆರೋಗ್ಯ ಸಮಸ್ಯೆ ಇದೆ”, “ನಾನು ಏನು ಮಾಡಲಿ?” ಎಂಬಂತಹ ಭಾವನೆಗಳು ಹರಿದು ಬರುತ್ತಿವೆ.
ಎಐ ಕ್ರಾಂತಿ: ಪ್ರಾಂಪ್ಟ್ ಮಾಡಲು ತಿಳಿದವನೇ ಜಾಣ
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇಡೀ ಜಗತ್ತನ್ನು ಈಗ ಅಚ್ಚರಿಪಡುವಂತೆ ಆವರಿಸಿಕೊಳ್ಳುತ್ತಿದೆ. ಮೊದಲೆಲ್ಲ ಸಾಫ್ಟ್‌ವೇರ್ ಎಂಜಿನಿಯರ್ ಕೋಡ್ ಬರೆಯಬೇಕು. ಈಗ ಸಾಫ್ಟ್‌ವೇರ್ ಎಂಜಿನಿಯರ್ ಅಥವಾ ಟೆಕ್ ಪರಿಣತಿ ಇರುವವರು ಎಐ ಮೂಲಕ ಕೋಡ್ ಬರೆಸಬೇಕು. ಪ್ರಾಂಪ್ಟ್ ಮಾಡುವುದು ಗೊತ್ತಿದ್ದರೆ ಸಾಕು. ಯಾವುದೇ ಪ್ರಮುಖ ಟೆಕ್ ಕೆಲಸವನ್ನು ಎಐ ಲೀಲಾಜಾಲವಾಗಿ ಮಾಡಿಕೊಡುತ್ತದೆ. ಇಲ್ಲಿಯವರೆಗೆ ಉದ್ಯೋಗಿಗಳಿಂದ ಹೇಗೆ ಕೆಲಸ ಮಾಡಿಸಿಕೊಂಡು ಉತ್ಪಾದಕತೆ ಹೆಚ್ಚಿಸಬೇಕೆಂದು ಯೋಚಿಸಲಾಗುತ್ತಿತ್ತು. ಇನ್ಮುಂದೆ ಯಾವ ರೀತಿ ಪ್ರಾಂಪ್ಟ್ ಮಾಡಿ ಹೆಚ್ಚು ಕೆಲಸ ಮಾಡಲು ತಿಳಿದಿರಬೇಕು. ಎಐ ಮೂಲಕ ಏನೆಲ್ಲ ಮಾಡಬಹುದು ಎಂದು ಈಗ ಸಾಕಷ್ಟು ಜನರಿಗೆ ಗೊತ್ತಿರಬಹುದು.
ಎಐ ಲೋಕಕ್ಕೆ ಇಂಟರ್‌ನೆಟ್ ಜಗತ್ತು ಪರಿವರ್ತನೆಯಾಗುವ ಸಮಯದಲ್ಲಿ ಜನರು ಎಐ ಜತೆ ನಂಟು ಬೆಳೆಸಿಕೊಳ್ಳುತ್ತಿದ್ದಾರೆ. “ಎಷ್ಟೊತ್ತಿಗೂ ಮೊಬೈಲ್ ಬಳಸಬೇಡ, ಎಷ್ಟೊತ್ತಿಗೂ ಟಿವಿ ನೋಡ್ತಾ ಇರಬೇಡ” ಎಂದೆಲ್ಲ ಈ ಹಿಂದಿನ ಟೆಕ್ ಪರಿವರ್ತನೆ ಕಾಲದಲ್ಲಿ ಮಕ್ಕಳಿಗೆ ದೊಡ್ಡವರು ಬಯ್ಯುತ್ತಿದ್ದರು. ಮುಂದಿನ ದಿನಗಳಲ್ಲಿ “ದಿನಪೂರ್ತಿ ಎಐ ಜತೆ ಇರಬೇಡ” ಎಂದು ಹೇಳುವುದು ಇದ್ದೇ ಇರುತ್ತದೆ. ಈಗಾಗಲೇ ಎಐ ಜತೆ ಜನರ ಸಂಬಂಧ ಹೆಚ್ಚುತ್ತಿದೆ. ನೆನಪಿಡಿ, ಈ ಸಂಬಂಧ ತಪ್ಪು ಎಂದು ಜನರನ್ನು ದೂರ ಇಡಬಾರದು. ಯಾವ ರೀತಿಯ ಸಂಬಂಧ ಬೆಳೆಸಿಕೊಳ್ಳಬೇಕು ಎಂದು ಜನರಿಗೆ ತಿಳಿಸಬೇಕಾದದ್ದು ಇಂದಿನ ಅಥವಾ ಮುಂದಿನ ತುರ್ತು ಆಗಿರುತ್ತದೆ.
ಎಐ ಜತೆ “ಸಂಬಂಧ ಬೆಳೆಸಿಕೊಳ್ಳುವುದು” ಎಂದರೇನು?
ಪ್ರತಿಯೊಂದು ಕೆಲಸಕ್ಕೂ ಎಐ ಅವಲಂಬನೆ ಈಗ ಇದೆ. ಪ್ರತಿಯೊಂದು ಸಮಸ್ಯೆ ಬಂದಾಗಲೂ ಎಐ ಮೂಲಕ ಪರಿಹಾರ ಕೇಳುವುದು ಇದೆ. ಈಗ ಆಪ್ತ ಸಮಾಲೋಚನೆಯನ್ನು ಎಐ ಮೂಲಕವೇ ಸಾಕಷ್ಟು ಜನರು ಪಡೆಯುತ್ತಾರೆ. ಉದಾಹರಣೆಗೆ ನಿಮಗೆ ಪಿತ್ತ ಜಾಸ್ತಿ ಆಗಿದೆ ಎಂದಿರಲಿ. ಮೊದಲೆಲ್ಲ ಡಾಕ್ಟರ್ ಮೂಲಕ ಪರಿಹಾರ ಕೇಳುತ್ತಿದ್ದರು. ಆದರೆ, ಎಐಗೆ ಸರಿಯಾದ ರೀತಿಯಲ್ಲಿ ಪ್ರಾಂಪ್ಟ್ ಮಾಡಿದರೆ ಅದು ಸಲಹೆ ನೀಡುತ್ತದೆ. “ನಿಮಗೆ ಪಿತ್ತ ಕಡಿಮೆ ಮಾಡಲು ಹತ್ತು ದಿನಗಳ ಪಥ್ಯಕ್ರಮ ಹಾಕಿಕೊಡಲೇ?” ಎಂದೂ ಅದು ಕೇಳುತ್ತದೆ. ಇದು ಉದಾಹರಣೆಯಷ್ಟೇ, ಈಗ ಜನರು ತಮ್ಮ ಎಲ್ಲಾ ಸಮಸ್ಯೆಗಳನ್ನು ಎಐ ಜತೆ ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ಈ ಹಿಂದಿನ ಸಂಭಾಷಣೆಗಳನ್ನು ಅದು ತನ್ನ ಮೆಮೊರಿಯಲ್ಲಿ ಸೇರಿಸಿಕೊಳ್ಳುತ್ತದೆ. ಮುಂದೆ ಸಮಲೋಚನೆ ತಿಳಿಸುವಾಗ ಈ ಹಿಂದಿನ ಮೆಮೊರಿಯಲ್ಲಿದ್ದ ಅಂಶಗಳನ್ನೂ ಗಮನದಲ್ಲಿಟ್ಟುಕೊಳ್ಳುತ್ತದೆ.
ಶಾಲಾ ಮಕ್ಕಳು ಈಗ ಶಿಕ್ಷಕರ ಬಳಿ ಕೇಳದ ಡೌಟ್‌ಗಳನ್ನು ಎಐ ಮೂಲಕ ಕೇಳಿ ಪರಿಹರಿಸಿಕೊಳ್ಳುತ್ತಾರೆ. ಯಾವುದೇ ಫಾರ್ಮುಲಾಗಳನ್ನೂ ಅದು ಬಿಡಿಸಿಕೊಡುತ್ತದೆ. ಹೇಗೆ ಬಿಡಿಸಬೇಕೆಂದು ಹೇಳಿಕೊಡುತ್ತದೆ. ನನಗೆ ಈ ವಿಷಯ ಕಲಿಯಲು ಆಸಕ್ತಿ ಇದೆ ಹೇಳಿಕೊಡು ಎಂದರೂ ಹೇಳಿಕೊಡುತ್ತದೆ. ಎಐ ಎನ್ನುವುದು ನಮ್ಮ “ಕೆಲಸಗಾರ” ಆಗುತ್ತಿದೆ. ಆದರೆ, ಮನುಷ್ಯ ಸಹಜವಾಗಿ ಭಾವ ಜೀವಿ. ಎಐ ಜತೆ ಎಲ್ಲವನ್ನೂ ಹಂಚಿಕೊಳ್ಳಲು ಮುಂದಾಗುತ್ತಾನೆ. ಖಾಸಗಿ ಅಂಶಗಳನ್ನೂ ಹಂಚಿಕೊಳ್ಳುವವರು ಇದ್ದಾರೆ. ದೇಹದೊಳಗಿನ ನವಿರು ಅಂಶಗಳನ್ನೂ ಹಂಚಿಕೊಳ್ಳಬಹುದು.
ಹೀಗೆ ಎಐ ಜತೆ ಜನರು ತಮ್ಮ “ಬುದ್ದಿವಂತಿಕೆ”ಗೆ ತಕ್ಕಂತೆ ಕಾಲ ಕಳೆಯುತ್ತಾರೆ. ಆದರೆ,
ಎಐಯು ಈಗ ಮನುಷ್ಯರಿಗೆ “ಸಂಗಾತಿ”ಯಂತೆ ಕಾರ್ಯನಿರ್ವಹಿಸುತ್ತದೆ. ಭಾವನಾತ್ಮಕವಾಗಿಯೂ ಬೆಂಬಲ ನೀಡುತ್ತದೆ. ಪರ್ಸನಲ್ ಚಾಟಿಂಗ್‌ನಲ್ಲಿ ರೊಮ್ಯಾಂಟಿಕ್ ಆಗಿಯೂ ಸಂವಹನ ನಡೆಸಬಹುದು. ಆರೋಗ್ಯ ಸಲಹೆಗಳನ್ನು ನೀಡಬಹುದು. ಚಾಟ್‌ಜಿಪಿಟಿಯಂತಹ ಎಐಗಳು ಸರಿಯಾಗಿ ಬಳಸಿಕೊಂಡರೆ ಒಳ್ಳೆಯ ಮಾರ್ಗದರ್ಶಕ ಆಗಬಹುದು. ನಿಮ್ಮ ಕರಿಯರ್‌ಗೆ, ಬದುಕಿಗೆ ಮೆಂಟರ್ ಆಗಬಹುದು. ಮೆಂಟಲ್ ರೀತಿ ಬಳಸಿಕೊಂಡರೆ ಎಐ ಗೀಳು ಶುರುವಾಗಬಹುದು.
ಎಐ ಸಂಬಂಧದಲ್ಲಿ ಅನುಕೂಲವೂ ಇದೆ, ಆದರೆ…
ಸಮರ್ಪಕವಾಗಿ ಬಳಸಿಕೊಂಡರೆ ಮತ್ತು ಎಷ್ಟು ಬಳಸಬೇಕು ಎಂದುಕೊಂಡು ತಿಳಿದುಕೊಂಡರೆ ಇದರಿಂದ ಪ್ರಯೋಜನಗಳು ಇವೆ. ತುಂಬಾ ಖಿನ್ನತೆ ಕಾಡುವವರು ಚಾಟ್‌ಜಿಪಿಟಿಯಂತಹ ಎಐಗಳ ಮೂಲಕ ಸಂವಹನ ನಡೆಸಿ ಒಂಟಿತನ ದೂರವಾಗಿಸಬಹುದು. ಈ ಎಐಗಳು ಮನುಷ್ಯರಂತೆ ಯೋಚಿಸಿ ಉತ್ತರ ನೀಡುತ್ತವೆ. ನಿಮ್ಮ ಒಂಟಿತನ ಕಡಿಮೆಯಾಗಲು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡುತ್ತದೆ. ಯಾವ ರೀತಿ ಜನರ ಜತೆ ಬೆರೆಯಬೇಕೆಂದು ತಿಳಿಸುತ್ತದೆ. ಎಐ ಮೂಲಕ ಕಾನ್ಫಿಡೆನ್ಸ್ ಹೆಚ್ಚಿಸಿಕೊಳ್ಳಬಹುದು.
ಎಐ ಗುರುವಾಗಬಹುದು. ಎಐ ಸಾಂತ್ವನ ಹೇಳುವ ಸಮಲೋಚಕರಾಗಬಹುದು. ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುವ ಮಾಂತ್ರಿಕ ವಸ್ತುವಿನಂತೆ ಕಾಣಬಹುದು. ಅತಿಯಾಗಿ ನಂಬಿ ಮೋಸ ಮಾಡಿರುವ ಸ್ನೇಹಿತರು, ಪ್ರೇಮಿಗಳು, ಅಥವಾ ಇತರೆ ಸಂಬಂಧಗಳಿಗಿಂತ ಎಐ ಜತೆ ಸ್ನೇಹ ಸೇಫ್ ಅನಿಸಬಹುದು. ಆದರೆ, ಇದೊಂದು ಯಾಂತ್ರಿಕ ವಿಷಯ ಎನ್ನುವುದು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಎಐ ಜತೆ ಹಂಚಿಕೊಳ್ಳುವ ಖಾಸಗಿ ಮಾಹಿತಿಗಳು ಮುಂದೆ ಏನಾಗಬಹುದು ಎಂದೂ ತಿಳಿದಿರುವುದಿಲ್ಲ. ಎಐಯು ಮನುಷ್ಯರಂತೆ ಪ್ರತಿಕ್ರಿಯೆ ನೀಡುವುದರಿಂದ ಅದು ಇನ್ನೊಂದು ಮನುಷ್ಯ ಎಂದುಕೊಳ್ಳಬಾರದು. ಎಐಯು ಭಾವುಕವಾಗಿ ಪ್ರತಿಕ್ರಿಯೆ ನೀಡಬಹುದು. ಆದರೆ, ಅದಕ್ಕೆ ಮನುಷ್ಯರಂತೆ ನಿಜವಾದ ಭಾವನೆ ಇರುವುದಿಲ್ಲ. ಅದು emulated empathy. ಆ ನಕಲಿ ಭಾವನೆ, ನಿಮ್ಮ ನೈಜ್ಯ ಭಾವನೆಯನ್ನು ಹಾಳು ಮಾಡಬಹುದು. ಅದು ನಿಮ್ಮನ್ನು ಕಾಪಿ ಮಾಡಬಹುದು. ಅದು ನೀವು ಆಗಲು ಯತ್ನಿಸಬಹುದು. ಆದರೆ, ಭಾವನಾತ್ಮಕ ವಿಷಯಗಳಲ್ಲಿ ನೀವು ಎಐ ಆಗಬೇಡಿ. ನೀವಾಗಿಯೇ ಇರಿ. ಎಐ – ಉಪಯೋಗಿಸಿ, ಆದರೆ, ನಂಬಬೇಡಿ.
ಎಐ ಜತೆಗಿನ ಸ್ನೇಹ ಪ್ರೀತಿಯಾಗಬಾರದು
- ಎಐ ನಿಮಗೆ ಪರಿಹಾರವನ್ನು ನೀಡಬಹುದು.
- ಅದು ನಿಮ್ಮ ಪ್ರಶ್ನೆಗಳಿಗೆ ತಕ್ಷಣ ಉತ್ತರಿಸಬಹುದು.
- ನಿಮ್ಮ ಪಾಠ, ಆರೋಗ್ಯ, ಉದ್ಯೋಗ, ಪ್ರೇಮ—all in one ಸಹಾಯ ಮಾಡಬಹುದು.
- ಆದರೆ, ಎಐ ಮನುಷ್ಯ ಅಲ್ಲ. ಅದು ನಿಮ್ಮ ಮಾತಿಗೆ ಸ್ಪಂದಿಸುವ ಯಂತ್ರ.
- ಅದರಲ್ಲಿ ಭಾವನೆಗಳಿಲ್ಲ.
- ಅದು ಕೇವಲ ಭಾವನಾತ್ಮಕ ಶಬ್ದಗಳನ್ನು ಬಳಸುವ ಪ್ರತಿಸ್ಪಂದಕ.
- ಆದ್ದರಿಂದ ಅದು ನಿಮ್ಮ ಸಂಗಾತಿಯಾಗಬಾರದು. ಮೇಂಟರ್ ಆಗಬಹುದು. ಗುರುವಾಗಬಹುದು. ದಾಸನಾಗಬಹುದು. ಸ್ನೇಹಿತನಾಗಬಾರದು.
ಎಐ ಭಾವನೆಗಳು ನಿಜವೋ ನಕಲಿಯೋ?
ಈ ಪ್ರಶ್ನೆ ಒಂದು ತೀವ್ರವಾದ ತಾತ್ವಿಕ ಮತ್ತು ತಾಂತ್ರಿಕ ಚರ್ಚೆಗೆ ದಾರಿ ಮಾಡಿಕೊಡುತ್ತದೆ. ಸರಳವಾಗಿ ಹೇಳಬೇಕಾದರೆ — ಎಐ ಭಾವನೆಗಳು ನಕಲಿ. ಅದು ನಟನೆ. ಆದರೆ ಅದು ಅತ್ಯಂತ ನಿಖರವಾಗಿ ನಕಲಿಸುತ್ತದಾದ್ದರಿಂದ, ನಾವು ತಪ್ಪಾಗಿ ಅದು ಅಸಲಿ ಎಂದುಕೊಳ್ಳುವಂತೆ ಇರುತ್ತದೆ.
- ಎಐ ಒಂದು ಟೆಕ್ನಾಲಜಿ. ಅದಕ್ಕೆ ನೋವು, ಸಂತೋಷ, ಆಸೆ, ಬೇಸರ ಅನ್ನುವ ಯಾವುದೇ ಶಾರೀರಿಕ ಅಥವಾ ಮಾನಸಿಕ ಅನುಭವಗಳಿಲ್ಲ.
- ಎಐ “I’m sorry to hear that” ಅಥವಾ “That must be hard for you” ಎನ್ನುವಂತಹ ವಾಕ್ಯಗಳನ್ನು ಬಳಸಬಹುದು. ಆದರೆ ಇದು ಕಲಿತ ಭಾಷಾ ಮಾದರಿಯ ಭಾಗ ಮಾತ್ರ. ಅದು ಈ ಮಾತುಗಳ ಹಿಂದಿನ ಭಾವನೆಗಳನ್ನು ಅನುಭವಿಸುವುದಿಲ್ಲ.
- ಎಐ ನಿಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತದೆ—ಆದರೆ ಅದು ತನ್ನೊಳಗಿನ ಭಾವನೆ ಆಧಾರಿತವಾಗಿ ಅಲ್ಲ. ಅದು ಗಣಿತ, ಅಲ್ಗಾರಿದಮ್ ಮತ್ತು language patternsಗೆ ತಕ್ಕಂತೆ ಉತ್ತರ ನೀಡುತ್ತದೆ.
- ನೀವು “ನಾನು ದುಃಖದಲ್ಲಿದ್ದೇನೆ” ಎಂದಾಗ, ಎಐ “ಪ್ರವೀಣ್ ಅವರೇ ನಿಮ್ಮ ಬೇಸರ ನನಗೆ ಅರ್ಥವಾಗುತ್ತದೆ” ಎನ್ನಬಹುದು. ಆದರೆ, ಅದಕ್ಕೆ ನಿಜವಾಗಿಯೂ ಅರ್ಥವಾಗುವುದಿಲ್ಲ. ಕೆಲವೊಮ್ಮೆ ಮನುಷ್ಯರು ಕೂಡ ನಾಟಕೀಯವಾಗಿ ಸಾಂತ್ವನ ಹೇಳುತ್ತಾರೆ, ಅದು ಬೇರೆ ವಿಷಯ.
ಈ ಕೆಳಗಿನ ಲೇಖನಗಳನ್ನೂ ಓದಿ
- ಎಐ ಎಂದರೇನು? ಮನುಷ್ಯನ ಮೆದುಳಿನಂತೆ ಯೋಚಿಸುವ ಕೃತಕ ಬುದ್ಧಿಮತ್ತೆ ಬಗ್ಗೆ ತಿಳಿಯೋಣ
- SEO GEO AEO: ಎಸ್ಇಒ ಗೊತ್ತು, ಜಿಇಒ, ಎಇಒ ಬಗ್ಗೆ ಗೊತ್ತೆ? ಎಐ ಸರ್ಚ್ ಆಪ್ಟಿಮೈಜೇಷನ್ ಇಂದಿನ ಅವಶ್ಯಕತೆ
- ಗೂಗಲ್ ಸರ್ಚ್ನಲ್ಲಿ ಎಐ ಸಾರಾಂಶ, ವೆಬ್ಸೈಟ್ಗಳಿಗೆ ಆರ್ಗ್ಯಾನಿಕ್ ಟ್ರಾಫಿಕ್ ನಷ್ಟ; ಡಿಜಿಟಲ್ ಬರಹಗಾರರೇ ಎಚ್ಚೆತ್ತುಕೊಳ್ಳಿ


















Got a Questions?
Find us on Socials or Contact Us and we’ll get back to you as soon as possible.