CAD/CAM ಸರ್ಟಿಫಿಕೇಷನ್ ನಿಮ್ಮಲ್ಲಿದೆಯಾ?

ಈಗ ಕ್ಯಾಡ್, ಕ್ಯಾಮ್ ಇತ್ಯಾದಿ ಕಂಪ್ಯೂಟರ್ ಆಧರಿತ ತಂತ್ರಜ್ಞಾನಗಳಿಗೆ ಸಖತ್ ಡಿಮ್ಯಾಂಡ್. ಇವುಗಳಿಗೆ ಸಂಬಂಧಿಸಿದ ಅಲ್ಪಾವಧಿ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಪಡೆದರೆ ರೆಸ್ಯೂಂನ ವ್ಯಾಲ್ಯೂ ಹೆಚ್ಚಾಗಿ ಕೆಲಸ ಸಿಗುವ ಚಾನ್ಸ್ ಅಧಿಕವಾಗುತ್ತದೆ.

  • ಪ್ರವೀಣ್ ಚಂದ್ರ ಪುತ್ತೂರು

ಮನೆಯಲ್ಲಿ ಗ್ಯಾಸ್‍ನಿಂದ ಅಡುಗೆ ತಯಾರಿಸುತ್ತಿದ್ದರೆ ಒಮ್ಮೆ ಅದರ ಬರ್ನರ್ ಗಮನಿಸಿ. ಆ ಬರ್ನರ್ ತಯಾರಿಸಿದ್ದು ಹೇಗೆ ಗೊತ್ತೆ? ಮೊದಲು ಕಂಪ್ಯೂಟರ್‍ನಲ್ಲಿ ಅದರ 3ಡಿ ಅಥವಾ 2ಡಿ ವಿನ್ಯಾಸ ಮಾಡಿಕೊಳ್ಳಬೇಕು. ನಂತರ ಯಂತ್ರಕ್ಕೆ ಇದನ್ನು ಉತ್ಪಾದಿಸಲು ಕಂಪ್ಯೂಟರ್ ಮೂಲಕ ನಿರ್ದೇಶಿಸಬೇಕು. ಬರ್ನರ್ ವಿನ್ಯಾಸ ಮತ್ತು ನಿರ್ಮಾಣಕ್ಕೆ ಕ್ಯಾಡ್ ಮತ್ತು ಕ್ಯಾಮ್ ತಂತ್ರಜ್ಞಾನವೆರಡೂ ಬೇಕು. ಇದು ಕೇವಲ ಬರ್ನರ್‍ಗೆ ಮಾತ್ರ ಸೀಮಿತವಲ್ಲ. ವಿಮಾನದ ಎಂಜಿನ್,ಕಾರು, ಬೈಕಿನ ಬಿಡಿಭಾಗಗಳು, ಯಾವುದಾದರೂ ಪ್ಲಾಸ್ಟಿಕ್ ಅಥವಾ ಲೋಹದ ಉತ್ಪನ್ನಗಳನ್ನು ವಿನ್ಯಾಸ ಮಾಡಲೂ ಕಂಪ್ಯೂಟರ್ ಏಯ್ಡೆಡ್ ಟೆಕ್ನಾಲಜೀಸ್ ಬೇಕೇಬೇಕು.  ಕಂಪ್ಯೂಟರ್ ಆಧರಿತ ತಂತ್ರಜ್ಞಾನದಲ್ಲಿ ಸಿಎಎಡ್,  ಸಿಎಇ,ಸಿಎಐಡಿ,  ಸಿಎಎಂ, ಸಿಎಆರ್, ಸಿಎಆರ್‍ಡಿ, ಸಿಎಎಸ್‍ಇ, ಸಿಎಎಸ್, ಸಿಎಎಸ್‍ಎಸ್,ಸಿಎಫ್‍ಡಿ, ಸಿಐಎಸ್, ಸಿಐಎಂ, ಸಿಎನ್‍ಸಿ, ಇಡಿಎ, ಇಆರ್‍ಪಿ, ಎಫ್‍ಇಎ, ಕೆಬಿಇ,ಎಂಪಿಎಂ, ಎಂಪಿಪಿ, ಎಂಆರ್‍ಪಿ, ಪಿಡಿಎಂ, ಪಿಎಲ್‍ಎಂ ಹಲವು ವಿಭಾಗಗಳಿವೆ. ಕ್ಯಾಡ್, ಕ್ಯಾಮ್‍ನಂತಹ ತಂತ್ರಜ್ಞಾನ ಇಂದು ಸರ್ವವ್ಯಾಪಿ. ಹೀಗಾಗಿ ಇವುಗಳಿಗೆ ಸಂಬಂಸಿದ ಸರ್ಟಿಫಿಕೇಷನ್ ಕೋರ್ಸ್‍ಗಳಿಗೆ ಸಖತ್ ಸ್ಕೋಪ್.

ಕ್ಯಾಡ್/ಕ್ಯಾಮ್ ಎಂದರೇನು?

ವಸ್ತುವೊಂದರ ಡ್ರಾಯಿಂಗ್ ಮಾಡುವುದು ಕ್ಯಾಡ್‍ಗೆ ಸಂಬಂಸಿದ್ದಾದರೆ, ವಸ್ತುವನ್ನು ತಯಾರಿಸುವಂತೆ ಯಂತ್ರವನ್ನು ಕಂಪ್ಯೂಟರ್ ಮೂಲಕ ನಿರ್ದೇಶಿಸುದಕ್ಕೆ ಕ್ಯಾಮ್ ಬೇಕು. ಆರ್ಕಿಟೆಕ್ಚರ್, ಎಂಜಿನಿಯರ್ಸ್, ಡ್ರಾಫ್ಟರ್ಸ್,ಮತ್ತು ಕಲಾವಿದರು ಟೆಕ್ನಿಕಲ್ ಇಲ್ಯುಸ್ಟ್ರೇಷನ್ ಮಾಡುವ ಸಂದರ್ಭದಲ್ಲಿ ಕ್ಯಾಡ್ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕಾಗಿ 2ಡಿ ಅಥವಾ 3ಡಿ ಗ್ರಾಫಿಕ್ಸ್ ಸಾಫ್ಟ್‍ವೇರ್ ಬೇಕಾಗುತ್ತದೆ. ಇದರ ಮೂಲಕ ಉತ್ಪನ್ನದ ಚಿತ್ರ ಬಿಡಿಸಲಾಗುತ್ತದೆ. ಕ್ಯಾಮ್ ಸಹ ಸಾಫ್ಟ್‍ವೇರ್ ಆಗಿದೆ. ಸ್ವಯಂಚಾಲಿತ ಯಂತ್ರಗಳು ಕಂಪ್ಯೂಟರ್ ಮೂಲಕ ನಿಯಂತ್ರಣಗೊಂಡು ಉತ್ಪನ್ನಗಳನ್ನು ತಯಾರು ಮಾಡುವಲ್ಲಿ ಕ್ಯಾಮ್ ಅನ್ನು ಬಳಸಲಾಗುತ್ತದೆ.

ಉದ್ಯೋಗಾವಕಾಶ

ಈಗ ಪ್ರತಿಯೊಂದು ಉದ್ಯಮದಲ್ಲೂ ಕ್ಯಾಡ್/ಕ್ಯಾಮ್ ಬಳಸಲಾಗುತ್ತಿದೆ. ನೀವು ವೃತ್ತಿಪರವಾಗಿ ಇವೆರಡನ್ನು ಕಲಿತಿದ್ದರೆ ವೈಮಾನಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವೈಮಾನಿಕ ತಂತ್ರಜ್ಞರಾಗಬಹುದು. ಆಟೋಮೋಟಿವ್ ಎಂಜಿನಿಯರ್ , ಆಟೋಮೋಟಿವ್ ಟೆಕ್ನಿಷಿಯನ್ ಆಗಬಹುದು. ಕ್ಯಾಡ್/ಕ್ಯಾಮ್ ಮ್ಯಾನೇಜರ್, ಕ್ಯಾಡ್/ಕ್ಯಾಮ್ ಅಪರೇಟರ್, ಮೆಷಿನ್ ಟೂಲ್ ಅಪರೇಟರ್,ಟೂಲ್ ಆ್ಯಂಡ್ ಡೈ ಮೇಕರ್ , ಮೆಟಲ್ ಆ್ಯಂಡ್ ಪ್ಲಾಸ್ಟಿಕ್ ಮೆಕಾನಿಸ್ಟ್ ಆಗಿ ಕಾರ್ಯನಿರ್ವಹಿಸಬಹುದು. ಅಸೆಂಬಲರ್ ಮತ್ತು ಫ್ಯಾಬ್ರಿಕೇಟರ್,ಅನಿಮೇಷನ್, ಕ್ಯಾಡ್/ಕ್ಯಾಮ್ ಸಾಫ್ಟ್‍ವೇರ್ ಡೆವಲಪ್‍ಮೆಂಟ್, ಕ್ಯಾಡ್/ಕ್ಯಾಮ್ ಹಾರ್ಡ್‍ವೇರ್ ಡೆವಲಪ್‍ಮೆಂಟ್, ಕ್ಯಾಡ್/ಕ್ಯಾಮ್ ಸಾಫ್ಟ್‍ವೇರ್ ಮೇಂಟೆನ್ಸ್ ಮತ್ತು ಟ್ರಬಲ್ ಶೂಟಿಂಗ್, ಕ್ಯಾಡ್ ಕ್ಯಾಮ್ ಕನ್ಸಲ್ಟಿಂಗ್ ಸರ್ವೀಸಸ್, ಕ್ಯಾಡ್/ಕ್ಯಾಮ್ ಇನ್‍ಸ್ಟ್ರಕ್ಷನ್ ಸರ್ವೀಸಸ್ ವಿಭಾಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು. ಕ್ಯಾಡ್/ಕ್ಯಾಮ್ ಮಾರ್ಕೆಟಿಂಗ್ ಆ್ಯಂಡ್ ಸೇಲ್ಸ್,ಮ್ಯಾನ್‍ಫ್ಯಾಕ್ಚರಿಂಗ್ ಅಸಿಸ್ಟೆಂಟ್, ಪೆÇ್ರಡಕ್ಷನ್ ಎಂಜಿನಿಯರ್,ಸಿಮ್ಯುಲೇಷನ್ ಟೆಕ್ನಾಲಜಿ, ರೊಬೊಟಿಕ್ಸ್, ಡಿಜಿಟಲ್ ಆಟ್ರ್ಸ್ ಮತ್ತು ಜಾಹೀರಾತು, ಇಂಟರ್‍ನೆಟ್ ಡೆವಲಪ್‍ಮೆಂಟ್ ಆ್ಯಂಡ್ ಕನ್ಸಲ್ಟಿಂಗ್, ಕಟ್ಟಿಂಗ್ ಟೂಲ್ ಡಿಸೈನರ್, ಆರ್ಕಿಟೆಕ್ಚರಲ್ ಡಿಸೈನರ್, ರೆಹಾಬಿಲಿಟಿಷನ್ ಟೆಕ್ನಾಲಜಿ,ಮೆಡಿಕಲ್ ಇಮೇಜಿಂಗ್ ಸಿಸ್ಟಮ್ಸ್, ಡಿಜಿಟಲ್ ಗೇಮಿಂಗ್ ಆ್ಯಂಡ್ ಅಮ್ಯುಸ್‍ಮೆಂಟ್ ಸಿಸ್ಟಮ್ಸ್ ಸೇರಿದಂತೆ ಹಲವು ಕ್ಷೇತಗಳಲ್ಲಿ ಉದ್ಯೋಗಾವಕಾಶ ಪಡೆಯಬಹುದು.

ಅಲ್ಪಾವಧಿ ಕೋರ್ಸ್‍ಗಳು

ಕ್ಯಾಡ್‍ಸೆಂಟರ್ (www.caddcentre.com) ಎಂಬ ತಾಣಕ್ಕೆ ಹೋದರೆ ನಿಮಗೆ ಹೆಚ್ಚಿನ ಅಲ್ಪಾವ ಮತ್ತು ದೀರ್ಘಾವ ಕೋರ್ಸ್‍ಗಳ ವಿವರ ದೊರಕುತ್ತದೆ. ಕ್ಯಾಡ್ ಸೆಂಟರ್ ಮಾತ್ರವಲ್ಲದೆ ಎಕ್ಸ್‍ಫೋಲೀರಾ ಡಿಸೈನ್ ಸ್ಕೂಲ್, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟರ್ ಸ್ಟಡೀಸ್ ಮುಂತಾದ ಕಡೆ ಇಂತಹ ಕೋರ್ಸ್ ಮಾಡಬಹುದಾಗಿದೆ.

ಇದನ್ನೂ ಓದಿ  ಕರಿಯರ್ ಆಗಿ ಪರಿವರ್ತಿಸಬಹುದಾದ 7 ಹವ್ಯಾಸಗಳು

ಕ್ಯಾಡ್/ಕ್ಯಾಮ್ ಇತ್ಯಾದಿಗಳನ್ನು ಕಲಿಸಲು ಹಲವು ಅಲ್ಪಾವ ಕೋರ್ಸ್‍ಗಳಿವೆ. ಇಂತಹ ಕೋರ್ಸ್‍ಗಳಿಗೆ ಇರುವ ಡಿಮ್ಯಾಂಡ್‍ಗೆ ತಕ್ಕಂತೆ ಪ್ರತಿ ಪಟ್ಟಣ,ನಗರಗಳಲ್ಲಿಯೂ ಬಹಳಷ್ಟು ಕ್ಯಾಡ್ ಸರ್ಟಿಫಿಕೇಷನ್ ಸಂಸ್ಥೆಗಳು,ಬ್ರಾಂಚ್‍ಗಳಿವೆ.  ಇದು ಪ್ರಾಕ್ಟಿಕಲ್ ಕ್ಲಾಸ್ ಬಯಸುವ ಕೋರ್ಸ್ ಆಗಿದ್ದು,ಆನ್‍ಲೈನ್‍ನಲ್ಲಿ ಕಲಿಯಲು ಹೋಗಬೇಡಿ. ಕೆಲವು ಸಂಸ್ಥೆಗಳು 1 ತಿಂಗಳ, ಆರು ತಿಂಗಳ ಅಥವಾ ಒಂದು ವರ್ಷದ ಕ್ಯಾಡ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ನಡೆಸುತ್ತವೆ. ತುಂಬಾ ದುಬಾರಿ ಹಣ ಕೇಳುವ ಸಂಸ್ಥೆಗಳಿಂದ ದೂರವಿರಿ. ಸಾಧ್ಯವಿದ್ದರೆ ನಿಮಗೆ ಅನುಕೂಲವೆನಿಸುವ ಊರು, ಪಟ್ಟಣ, ನಗರದಲ್ಲಿರುವ ಕ್ಯಾಡ್ ಶಿಕ್ಷಣ ಕೇಂದ್ರಗಳಿಗೆಲ್ಲ ಭೇಟಿ ನೀಡಿ. ಅಲ್ಲಿ ಕೇಳುವ ಫೀಸ್, ಅಲ್ಲಿನ ಸೌಕರ್ಯಗಳನ್ನು ಹೋಲಿಸಿ ನೋಡಿ. ಈಗಾಗಲೇ ಇಂತಹ ಕೋರ್ಸ್ ಮಾಡಿರುವ ನಿಮ್ಮ ಸ್ನೇಹಿತರು, ಬಂಧುಗಳಿಂದಲೂ ಅಭಿಪ್ರಾಯ ಸಂಗ್ರಹಿಸಬಹುದು.

**

ಆಟೋಕ್ಯಾಡ್ ಕಲಿಕೆ ಉತ್ತಮ

ಯಾರ್ಯಾರು 2ಡಿ, 3ಡಿ ತಂತ್ರಜ್ಞಾನದ ಮೂಲಕ ತಮ್ಮ ಭವಿಷ್ಯ ರೂಪಿಸಲು ಬಯಸುತ್ತಾರೋ ಅವರು Auto CAD ಸರ್ಟೀಫಿಕೇಷನ್ ಪಡೆಯುವುದು ಉತ್ತಮ. ಈ ಸರ್ಟಿಫಿಕೇಷನ್ ಇದ್ದರೆ ರೆಸ್ಯೂಂನ ವ್ಯಾಲ್ಯೂ ಹೆಚ್ಚಾಗುತ್ತದೆ. ಕೆಲಸ ಪಡೆಯುವುದು ಸುಲಭವಾಗುತ್ತದೆ. ತಾಂತ್ರಿಕ ಪದವಿ ಅಥವಾ ಡಿಪ್ಲೊಮಾ ಮಾಡಿದವರಿಗೆ ಈ ಕೋರ್ಸ್ ಸೂಕ್ತ. ಸಿವಿಲ್,  ಎಲೆಕ್ಟ್ರಿಕಲ್,  ಎಲೆಕ್ಟ್ರಾನಿಕ್ಸ್, ಆರ್ಕಿಟೆಕ್ಚರ್,  ಏರೋನಾಟಿಕಲ್ ಸೇರಿದಂತೆ ಹಲವು ವಿಭಾಗಗಳಲ್ಲಿ ಉದ್ಯೋಗ ಪಡೆಯಲು ಆಟೋಕ್ಯಾಡ್ ಸರ್ಟಿಫಿಕೇಷನ್ ನೆರವಾಗುತ್ತದೆ.

ನಾಗರಾಜ್ ಹೆಗಡೆ | ಖಾಸಗಿ ಕಂಪನಿಯ ಉದ್ಯೋಗಿ, ಬೆಂಗಳೂರು

****

ಕ್ಯಾಡ್/ಕ್ಯಾಮ್‍ಗೆ ಭವಿಷ್ಯವಿದೆ

ಕಂಪ್ಯೂಟರ್ ಏಯ್ಡೆಡ್ ಎಂಜಿನಿಯರಿಂಗ್(ಸಿಎಇ) ಸಂಬಂಸಿದ ಅಲ್ಪಾವ ಕೋರ್ಸ್‍ಗಳಿವೆ. ಈ ವಿಭಾಗದಲ್ಲಿ ವಿದ್ಯಾರ್ಥಿಗಳು ಅವರಿಗೆ ಇಷ್ಟವಿರುವ ಕ್ಷೇತ್ರ, ಭವಿಷ್ಯದಲ್ಲಿ ಉದ್ಯೋಗ ಮಾಡಲಿಚ್ಚಿಸುವ ಕ್ಷೇತ್ರಕ್ಕೆ ಸಂಬಂಸಿದ ವಿನ್ಯಾಸ ಕಲಿಯಬಹುದು. ವಿಮಾನದ ಬಿಡಿ`ಭಾಗ ವಿನ್ಯಾಸವನ್ನೂ ಇಲ್ಲಿ ಕಲಿಯಬಹುದು. ಬೇಕಿದ್ದರೆ ಗ್ಯಾಸ್ ಸಿಲಿಂಡರ್ ಬರ್ನರ್ ವಿನ್ಯಾಸವನ್ನೂ ಕಲಿಯಬಹುದು. ನಮ್ಮಲ್ಲಿ ಇಂತಹ ಕೋರ್ಸ್‍ಗಳು ದುಬಾರಿಯೇನಲ್ಲ. 20 ಸಾವಿರ ರೂ. ಆಸುಪಾಸಿನಲ್ಲಿ 3 ತಿಂಗಳ ಕೋರ್ಸ್ ಮಾಡಬಹುದು. ಕ್ಯಾಡ್/ಕ್ಯಾಮ್ ಕಲಿತವರಿಗೆ ಹಿಂದೆಯೂ ಸ್ಕೋಪ್ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಇದು ಅತ್ಯುತ್ತಮ ಭವಿಷ್ಯವಿರುವ ಕೋರ್ಸ್.

ಡಾ. ಎಸ್.ಆರ್ ಶಂಕ್‍ಪಾಲ್ ಅಧ್ಯಕ್ಷರು, ಎಂಎಸ್ ರಾಮಯ್ಯ ಸ್ಕೂಲ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಬೆಂಗಳೂರು

***

(ವಿಜಯ ಕರ್ನಾಟಕ ಮಿನಿಯಲ್ಲಿ ಪ್ರಕಟಿತ ಲೇಖನ)