ಡಿಜಿಟಲ್ ಪತ್ರಿಕೋದ್ಯಮ: ಗೂಗಲ್‌ಗಾಗಿ ಅಲ್ಲ, ಜನರಿಗಾಗಿ ಬರೆಯಿರಿ

ಪತ್ರಿಕೆಗಳು ಅವಸರದ ಪತ್ರಿಕೋದ್ಯಮ. ಆದರೆ, ಡಿಜಿಟಲ್‌ ಪತ್ರಿಕೋದ್ಯಮ ಅತ್ಯವಸರದ ಪತ್ರಿಕೋದ್ಯಮ. ನಮ್ಮಲ್ಲಿ ಫಸ್ಟ್‌ ಬರಬೇಕು, ಗೂಗಲ್‌ ಸರ್ಚ್‌ನಲ್ಲಿ ಟಾಪ್‌ನಲ್ಲಿರಬೇಕು, ಗೂಗಲ್‌ ಡಿಸ್ಕವರಿಯಲ್ಲಿ ಕಾಣಿಸಬೇಕು ಎಂಬ ಧಾವಂತ ಪ್ರತಿಯೊಂದು ಡಿಜಿಟಲ್‌ ಪತ್ರಿಕೆಗಳ ನ್ಯೂಸ್‌ ರೂಂಗಳಲ್ಲಿ ಇರುತ್ತದೆ. ಡಿಜಿಟಲ್‌ ಪತ್ರಿಕೋದ್ಯಮದಲ್ಲಿ ಕಂಟೆಂಟ್‌ ಬರೆಯುವವರ ಮೊದಲ ಗಮನ ಗೂಗಲ್‌ ಮೇಲೆ ಇರುತ್ತದೆ. ಇದೇ ಕಾರಣಕ್ಕೆ ಕೀವರ್ಡ್‌ಗಳನ್ನು ತುಂಬಿಸಿ ಕಂಟೆಂಟ್‌ ರಚಿಸುತ್ತಾರೆ.

ಡಿಜಿಟಲ್‌ ಪತ್ರಕರ್ತರು ಗೂಗಲ್‌ಗಾಗಿ ಬರೆಯುವ ಸಂದರ್ಭದಲ್ಲಿ ಗೂಗಲ್‌ ಹೇಳುವುದೇ ಬೇರೆ. ನೀವು ನಮಗಾಗಿ ಕಂಟೆಂಟ್‌ ಬರೆಯಬೇಡಿ. ಜನರಿಗಾಗಿ ಬರೆಯಿರಿ. people-first content ಬರೆಯಿರಿ. ಜನರು ನಿಮ್ಮ ಪ್ರಮುಖ ಆದ್ಯತೆ ಆಗಿರಲಿ. ಜನರಿಗೆ ಯೂಸ್‌ಫುಲ್‌ ಅಥವಾ ನೆರವಾಗುವಂತಹ ಕಂಟೆಂಟ್‌ ಬರೆಯಿರಿ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಬರೆಯುವ ಬರಹವು ವಿಶ್ವಾಸಾರ್ಹವಾಗಿರಲಿ. ಡಿಜಿಟಲ್‌ ಪತ್ರಕರ್ತನಾದವನ ಮೊದಲ ಗಮನ “ಜನರು” ಆಗಿರಬೇಕು. ಇದೇ ಸಮಯದಲ್ಲಿ ಆತ ಟೆಕ್ನೊಕ್ರಾಟ್‌ ಕೂಡ ಆಗಿರಬೇಕು.

ಕೆಲವೊಂದು ಪ್ರಮುಖ ಮಾಧ್ಯಮಗಳ ಸುದ್ದಿಗಳು ಅಥವಾ ಲೇಖನಗಳನ್ನು ಓದುವಾಗ “ಇದಕ್ಕಿಂತ ಇಂಗ್ಲಿಷ್‌ ಸುಲಭವಾಗಿ ಅರ್ಥವಾಗುತ್ತದೆ” ಎಂದು ಅನಿಸದೆ ಇರದು. ಗೂಗಲ್‌ಗೆ ದೊಡ್ಡ ಗಾತ್ರದ ಕಂಟೆಂಟ್‌ ಬೇಕು ಸಂಪೂರ್ಣವಾಗಿ ಮೆಷಿನ್‌ ಟ್ರಾನ್ಸ್‌ಲೇಟೆಡ್‌ ಕಂಟೆಂಟ್‌ಗಳನ್ನು ಹಾಕಿರುತ್ತಾರೆ. ಗೂಗಲ್‌ ಟ್ರಾನ್ಸ್‌ಲೇಟ್‌ಗೆ ಹಾಕಿ ಹಾಗೆಯೇ ಪ್ರಕಟಿಸುತ್ತಾರೆ. ಕನ್ನಡದ ಬಹುತೇಕ ನ್ಯೂಸ್‌ ವೆಬ್‌ಸೈಟ್‌ಗಳು ಇದೇ ದಾರಿ ಹಿಡಿದಿವೆ. ಇವುಗಳ ನಡುವೆ ಕೆಲವು ವೆಬ್‌ಸೈಟ್‌ಗಳು ಜನರನ್ನು ಗಮನದಲ್ಲಿಟ್ಟುಕೊಂಡು ಕಂಟೆಂಟ್‌ ರಚಿಸುತ್ತವೆ.

ಡಿಜಿಟಲ್‌ ಪತ್ರಿಕೋದ್ಯಮ ಈ ರೀತಿ ಆಗಲು ಪ್ರಮುಖ ಕಾರಣ ಅಲ್ಲಿನ ಕೆಲಸದ ಒತ್ತಡ. ದಿನಕ್ಕೆ ಹತ್ತು ಹನ್ನೆರಡು ಹದಿನೈದು ಕಂಟೆಂಟ್‌ ಬರೆಯಬೇಕು ಎಂಬ ಟಾರ್ಗೆಟ್‌ ಇರುತ್ತದೆ. ಬರೆದು ಬರೆದು ಕಂಟೆಂಟ್‌ ಬರಹಗಾರರು ಸೊರಗಿರುತ್ತಾರೆ. ಇನ್ನೊಂದು ಪ್ರಮುಖ ಕಾರಣ, ಬರೆಯಲು ಗೊತ್ತಿಲ್ಲದವರು. ಪತ್ರಿಕೋದ್ಯಮ ಕಲಿಯದೆ ತಾವು ಬರೆದದ್ದೇ ಸರಿ ಎನ್ನುವ ಈಗಿನ ತಲೆಮಾರಿನ ಮನಸ್ಥಿತಿಯೂ ಇದೆ. ಸುದ್ದಿ ಬರೆಯುವುದು, ಅದಕ್ಕೆ ಎಸ್‌ಇಒ ಬರೆಯುವುದು, ಅದನ್ನು ಹಲವು ಕಡೆ ಶೇರ್‌ ಮಾಡುವುದು… ಅದಕ್ಕೆ ಒಳ್ಳೆಯ ಪೇಜ್‌ವ್ಯೂಸ್‌ ತರಿಸುವುದು… ಹೀಗೆ ಇವರಿಗೆ ಏನೆಲ್ಲ ಒತ್ತಡ ಇರುತ್ತವೆ.

ಅತ್ಯವಸರದಲ್ಲಿ ಸಾವಿರ ತಪ್ಪುಗಳು

ಡಿಜಿಟಲ್‌ ಮಾಧ್ಯಮಗಳಲ್ಲಿ ಯಾವುದಾದರೂ ಒಂದು ಸುದ್ದಿ ಒಂದು ವೆಬ್‌ಸೈಟ್‌ನಲ್ಲಿ ಪ್ರಕಟವಾದದ್ದೇ ತಡ, ಹತ್ತಿಪ್ಪತ್ತು ಪ್ರಮುಖ ವೆಬ್‌ಸೈಟ್‌ಗಳು, ನೂರಾರು ಹೈಪರ್‌ ಲೋಕಲ್‌ ವೆಬ್‌ಸೈಟ್‌ಗಳು ಅದೇ ಕಂಟೆಂಟ್‌ ಅನ್ನು ಬರೆಯುತ್ತವೆ. ಒಬ್ಬರು ಬೇಕರಿ ಇಟ್ಟರೆ, ಅದೇ ಬೀದಿಯಲ್ಲಿ ಹಲವು ಜನರು ಬೇಕರಿ ಇಡುತ್ತಾರಲ್ವ ಅದೇ ರೀತಿ ಡುಪ್ಲಿಕೇಟ್‌ ಮಾರ್ಕೆಟಿಂಗ್‌ ಇಲ್ಲೂ ಕಾಣಿಸುತ್ತದೆ. ಡೈಲಿಹಂಟ್‌ನಲ್ಲಿ ಯಾರೋ ಸತ್ರು ಅಂತ ಒಂದು ನೋಟಿಫಿಕೇಷನ್‌ ಕಂಡರೆ ಸಾಕು, ಆ ವ್ಯಕ್ತಿ ಸತ್ತಿದ್ದಾರೋ, ಜೀವಂತವಿದ್ದರೋ ಎಂದು ಖಚಿತಪಡಿಸದೆ ಎಲ್ಲಾ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುತ್ತವೆ. ಆದರೆ, ಕೆಲವೇ ಕೆಲವು ಡಿಜಿಟಲ್‌ ಮಾಧ್ಯಮಗಳು ಮಾತ್ರ “ನಮಗೆ ಈ ಬ್ರೇಕಿಂಗ್‌ ಇಂಪಾರ್ಟೆಂಟ್‌ ಅಲ್ಲ, ಅವರು ಸತ್ರೋ ಬದುಕಿದ್ದಾರೋ ಎನ್ನುವುದು ಖಚಿತಪಡಿಸಿಕೊಳ್ಳುವುದು ಅಗತ್ಯ” ಎಂಬ ಸಾವಧಾನದ ನಿರ್ಧಾರ ತೆಗೆದುಕೊಳ್ಳುತ್ತವೆ.

ಇದನ್ನೂ ಓದಿ: ಗೂಗಲ್‌ ಸರ್ಚ್‌ನಲ್ಲಿ ಎಐ ಸಾರಾಂಶ, ವೆಬ್‌ಸೈಟ್‌ಗಳಿಗೆ ಆರ್ಗ್ಯಾನಿಕ್‌ ಟ್ರಾಫಿಕ್‌ ನಷ್ಟ; ಡಿಜಿಟಲ್‌ ಬರಹಗಾರರೇ ಎಚ್ಚೆತ್ತುಕೊಳ್ಳಿ

ಹೆಲ್ಪ್‌ಫುಲ್‌ ಕಂಟೆಂಟ್‌ ಬರೆಯಿರಿ

ಡಿಜಿಟಲ್‌ ಮಾಧ್ಯಮದಲ್ಲಿ ಜನರಿಗೆ ಸಹಾಯವಾಗುವಂತಹ ಹೆಲ್ಪ್‌ಫುಲ್‌ ಕಂಟೆಂಟ್‌ ಬರೆಯಿರಿ. ವಿಶ್ವಾಸಾರ್ಹ ಕಂಟೆಂಟ್‌ ಬರೆಯಿರಿ. ಜನರನ್ನು ಆದ್ಯತೆಯಾಗಿಟ್ಟುಕೊಂಡು ಕಂಟೆಂಟ್‌ ಬರೆಯಿರಿ ಎಂದು ಗೂಗಲ್‌ ಹೇಳುತ್ತಾ ಬಂದಿದೆ. ನೀವು ಬರೆಯುವ ಮಾಹಿತಿಯು ಜನರಿಗೆ ಪ್ರಯೋಜನಕಾರಿಯಾಗಿರಬೇಕು. ಕೇವಲ ಸರ್ಚ್‌ ಎಂಜಿನ್‌ ರಾಕಿಂಗ್‌ ಹೆಚ್ಚಿಸಲು ಇರಬಾರದು.
ಬರೆಯುವ ಮುನ್ನ ಏನು ಬರೆಯುವಿರಿ ಎಂದು ಯೋಚಿಸಿ. ಬರೆದ ನಂತರ ಅದನ್ನು ಒಮ್ಮೆ ಓದಿ. ಸ್ವಯಂ ಮೌಲ್ಯಮಾಪನ ಮಾಡಿ. ಈ ಸುದ್ದಿ ಅಥವಾ ಲೇಖನವು ನಮ್ಮ ವೆಬ್‌ಸೈಟ್‌ಗೆ ಕೆಟ್ಟ ಹೆಸರು ತರಬಹುದೇ, ನಮ್ಮ ವೆಬ್‌ಸೈಟ್‌ ಕುರಿತು ಜನರ ವಿಶ್ವಾಸಾರ್ಹತೆ ಕಡಿಮೆಯಾಗಬಹುದೇ? ಎಂದು ಯೋಚಿಸಿ. ಈ ಮುಂದಿನ ಅಂಶಗಳು ನೆನಪಿನಲ್ಲಿ ಇರಲಿ

  • ನೀವು ಬರೆದ ಲೇಖನ ಒರಿಜಿನಲ್‌ ಆಗಿರುವುದೇ, ಮಾಹಿತಿ ಸಮರ್ಪಕವಾಗಿರುವುದೇ, ಅದರಲ್ಲಿ ರಿಸರ್ಚ್‌, ಅನಾಲಿಸಿಸ್‌ಗಳು ಇರುವುದೇ? ಬೇರೊಂದು ಕಡೆಯಿಂದ ಭಟ್ಟಿ ಇಳಿಸಿದ ಸುದ್ದಿ ಅಥವಾ ಮಾಹಿತಿಗೆ ನೀವು ಏನು ಸೇರಿಸಿದ್ದೀರಿ? ಏನಾದರೂ ರಿಸರ್ಚ್‌ ಮಾಡಿ ಸ್ವಂತದ್ದನ್ನು ಏನಾದರೂ ಸೇರಿಸಿದ್ದೀರಾ?
  • ನೀವು ಬರೆದ ಕಂಟೆಂಟ್‌ ಸಮಗ್ರವಾಗಿರುವುದೇ?
  • ನೀವು ಬರೆದಿರುವುದನ್ನು ಓದಲು ನಿಮಗೆ ಆಸಕ್ತಿ ಇದೆಯೇ? ಅದರಲ್ಲಿ ಆಸಕ್ತಿದಾಯಕ ಒಳನೋಟ ಇರುವುದೇ? ಆಸಕ್ತಿದಾಯಕ ಮಾಹಿತಿ ಇರುವುದೇ?
  • ನೀವು ಗೂಗಲ್‌ನಿಂದ ಅನುವಾದ ಮಾಡಿದ್ದರೆ ಅದನ್ನು ಪ್ರತಿ ಪದಗಳನ್ನು ಬಿಡದೆ ಮರುರಚನೆ ಮಾಡಿದ್ದೀರೇ?
  • ಬೇರೆ ವೆಬ್‌ಸೈಟ್‌ನಿಂದ ನಕಲು ಮಾಡಿದ್ದರೆ ಅದನ್ನು ಹೊಸದಾಗಿ ಮರುರಚನೆ ಮಾಡಿದ್ದೀರಾ? ಅದಕ್ಕೆ ಸ್ವಂತಿಕೆಯಿಂದ ಏನಾದರೂ ಸೇರಿಸಿರುವಿರಾ? ಹೆಚ್ಚುವರಿ ಮೌಲ್ಯ ಸೇರಿಸಿರುವಿರಾ?
  • ನೀವು ಬರೆದ ಬರಹಕ್ಕೆ ಸರಿಯಾದ ಹೆಡ್ಡಿಂಗ್‌ ನೀಡಿದ್ದೀರಾ? ಆ ಶೀರ್ಷಿಕೆಯು ಕಂಟೆಂಟ್‌ನಲ್ಲಿ ಇರುವ ಪುಟ್ಟ ಸಾರಾಂಶವಾಗಿರುವುದೇ?
  • ಶಾಕ್‌ ಆಗ್ತೀರಾ, ಬೆಚ್ಚಿ ಬೀಳ್ತಿರಾ ಇತ್ಯಾದಿ ಹೆಡ್ಡಿಂಗ್‌ ನೀಡಿಲ್ಲ ಎನ್ನುವುದನ್ನು ಖಾತ್ರಿ ಪಡಿಸಿದ್ದೀರಾ?
  • ನೀವು ಬರೆದ ಬರಹವನ್ನು ಓದಿದವರು ಇತರರ ಜತೆ ಹಂಚಿಕೊಳ್ಳುವಂತೆ ಇದೆಯೇ?
  • ನೀವು ಬರೆದ ಬರಹ ಪತ್ರಿಕೆಗಳು, ನಿಯತಕಾಲಿಕೆಗಳು.. ಇತ್ಯಾದಿಗಳು ಪರಾಮರ್ಶೆಗಾಗಿ ಬಳಸುವಂತೆ ಇದೆಯೇ?
  • ನೀವು ಬರೆದು ವಿಷಯವು, ವೆಬ್‌ ಸರ್ಚ್‌ಗಳಲ್ಲಿ ದೊರಕುವ ಅದೇ ವಿಷಯದ ಪುಟಗಳಿಗಿಂತ ಮಾಹಿತಿ ದೃಷ್ಟಿಯಿಂದ ಹೆಚ್ಚು ಉತ್ತಮವಾಗಿದೆಯೇ?
  • ಕಾಗುಣಿತ, ವ್ಯಾಕರಣ ದೋಷಗಳು ಇಲ್ಲದೆ ಇರುವುದನ್ನು ಖಚಿತಪಡಿಸಿಕೊಂಡು ಪ್ರಕಟಿಸಿದ್ದೀರಾ?
  • ನೀವು ನಿಮ್ಮ ಬರಹಕ್ಕೆ ಇತರೆ ಕಡೆಯಿಂದ ಪಡೆದ ಮಾಹಿತಿಗಳ ಮೂಲಗಳನ್ನು ಉಲ್ಲೇಖಿಸಿದ್ದೀರಾ?
  • ನೀವು ಬರೆದ ಬರಹವು ಓದುಗರನ್ನು ಮತ್ತೆ ವೆಬ್‌ಸೈಟ್‌ಗೆ ಕರೆಸಿಕೊಳ್ಳುವಂತೆ ಇದೆಯೇ?

ಹೀಗೆ ಡಿಜಿಟಲ್‌ ಮಾಧ್ಯಮಗಳಲ್ಲಿ ಬರೆಯುವವರು ಹಲವು ಪ್ರಶ್ನೆಗಳನ್ನು ಕೇಳುತ್ತಾ ಇರಬೇಕಾಗುತ್ತದೆ. ಗೂಗಲ್‌ ಅನ್ನು ಗಮನದಲ್ಲಿಟ್ಟುಕೊಂಡು ಬರೆದರೆ ಗೂಗಲ್‌ ನಿಮ್ಮನ್ನು ಗಮನದಲ್ಲಿಟ್ಟುಕೊಂಡು ಸ್ಟ್ರೈಕ್‌/ ಪನಿಶ್‌ಮೆಂಟ್‌ ನೀಡುತ್ತದೆ. ಜನರನ್ನು ಗಮನದಲ್ಲಿಟ್ಟುಕೊಂಡು ಬರೆದರೆ ಜನರು ನಿಮಗೆ ಅಪಾರ ಅಭಿಮಾನ, ಮೆಚ್ಚುಗೆ, ವಿಶ್ವಾಸಾರ್ಹತೆಯ ಬಹುಮಾನ ನೀಡುತ್ತಾರೆ.

ಇದನ್ನೂ ಓದಿ: ಎಸ್‌ಇಒ ಮಾರ್ಗದರ್ಶಿ 2025: ಕೀವರ್ಡ್‌ಗಳು ಎಂದರೇನು? ಎಸ್‌ಇಒ-ಸ್ನೇಹಿ ಡಿಜಿಟಲ್‌ ನ್ಯೂಸ್‌ ಅಥವಾ ಕಂಟೆಂಟ್‌ ಬರೆಯಲು ಕಲಿಯಿರಿ

error: Content is protected !!