ಕರಿಯರ್ ಆಗಿ ಪರಿವರ್ತಿಸಬಹುದಾದ 7 ಹವ್ಯಾಸಗಳು

ಬಿಡುವಿನ ವೇಳೆಯಲ್ಲಿ ಅಥವಾ ಸಮಯ ಕಳೆಯಲೆಂದು ಆರಂಭಿಸಿದ ನಮ್ಮ ಹವ್ಯಾಸವೇ ಕರಿಯರ್ ಆಗಿ ಬದಲಾದರೆ ಜೀವನಪೂರ್ತಿ ಹವ್ಯಾಸದೊಂದಿಗೆ ವೃತ್ತಿ ಜೀವನ ನಡೆಸಬಹುದು. ಎಲ್ಲಾ ಹವ್ಯಾಸಗಳು ಈಗಿನ ದುಬಾರಿ ಜಗತ್ತಿನಲ್ಲಿ ಹೊಟ್ಟೆ ತುಂಬಿಸಲು ಸಾಕಾಗದು. ಆದರೆ, ಕೆಲವು ಹವ್ಯಾಸಗಳನ್ನು ಸಮರ್ಥ ಕರಿಯರ್ ಆಗಿ ಪರಿವರ್ತಿಸಿಕೊಂಡರೆ ಕೈತುಂಬಾ ಹಣ ಸಂಪಾದಿಸಬಹುದು.

ಕ್ರೀಡೆ

ದಿನ ಶಾಲೆ, ಕಾಲೇಜು ಮುಗಿಸಿ ಬಂದು ಕ್ರಿಕೆಟ್ ಆಡಲು ಓಡುವವರು ಅಥವಾ ಶಾಲಾ ಕಾಲೇಜುಗಳಲ್ಲಿಯೇ ಕ್ರಿಕೆಟ್ ಆಡುವವರು ನೀವಾಗಿರಬಹುದು. ಇದೇ ರೀತಿ ಹಾಕಿ, ಫುಟ್ಬಾಲ್ ಆಟಗಾರರೂ ಆಗಿರಬಹುದು. ಕ್ರೀಡೆಯನ್ನು ಕರಿಯರ್ ಆಗಿ ಪರಿವರ್ತಿಸುವ ಹಾದಿ ಕೊಂಚ ಕಷ್ಟದಾಯಕ. ಎಲ್ಲಾದರೂ ಎಂತಹ ಕಷ್ಟಗಳಿಗೂ ಜಗ್ಗದೆ ಸಾಗಿದರೆ, ಯಶಸ್ಸು ನಿಮ್ಮದಾದರೆ ಕ್ರೀಡೆಯೇ ಸೂಕ್ತ ಕರಿಯರ್ ಆಗಬಹುದು. ಕ್ರಿಕೆಟ್, ಹಾಕಿ, ಕಬಡ್ಡಿ ಇತ್ಯಾದಿ ಆಟಗಾರರಾಗಿ ರಾಜ್ಯ ,ರಾಷ್ಟ್ರದ ತಂಡಗಳಲ್ಲಿ ಅವಕಾಶ ಪಡೆಯಬಹುದು. ಇಲ್ಲವಾದರೆ ಶಾಲಾ ಕಾಲೇಜುಗಳಲ್ಲಿ ಕ್ರೀಡಾ ತರಬೇತುದಾರರಾಗಿಯೂ ಉದ್ಯೋಗ ಪಡೆಯಬಹುದು. ಬರವಣಿಗೆಯಲ್ಲಿ ಆಸಕ್ತಿಯಿದ್ದರೆ ಕ್ರೀಡಾ ಪತ್ರಿಕೋದ್ಯಮದಲ್ಲಿಯೂ ಅವಕಾಶ ಪಡೆಯಬಹುದು.

ಬರವಣಿಗೆ

ಶಾಲಾ ದಿನಗಳಿಂದಲೇ ಕತೆ, ಕವನ, ಲೇಖನವನ್ನು ಬರೆಯುವ ಹವ್ಯಾಸ ನಿಮಗಿರಬಹುದು. ತಮ್ಮ ಆಲೋಚನೆಗಳನ್ನು ಅಕ್ಷರರೂಪಕ್ಕೆ ಇಳಿಸುವ ಬರಹಗಾರರು ಅದನ್ನೇ ತಮ್ಮ ಕರಿಯರ್ ಆಗಿ ರೂಪಿಸಿಕೊಳ್ಳಬಹುದು. ಕಾಲೇಜಿನಲ್ಲಿ ಪ್ರಬಂಧ ರಚನೆಯಲ್ಲಿ ಹೆಚ್ಚು ಅಂಕ ಪಡೆದವರೂ, ಕತೆ ಕವನ ಬರೆಯುತ್ತಿದ್ದವರೂ ಭವಿಷ್ಯದಲ್ಲಿ ಪತ್ರಿಕೋದ್ಯಮಕ್ಕೆ ಸೇರಬಹುದು. ಜಾಹೀರಾತು ಏಜೆನ್ಸಿಯಲ್ಲಿ ಕಾಪಿರೈಟರ್ ಆಗಬಹುದು. ಕಂಪನಿಗಳಲ್ಲಿ ಟೆಕ್ನಿಕಲ್ ಬರಹಗಾರರಾಗಬಹುದು. ಬ್ಲಾಗ್, ವೆಬ್ಸೈಟ್ನಲ್ಲಿ ಕಂಟೆಂಟ್ ಬರಹಗಾರರಾಗಿಯೂ ಅವಕಾಶ ಪಡೆಯಬಹುದು.

ಭಾಷಣಗಾರರು

ಸಾರ್ವಜನಿಕ ವೇದಿಕೆಯಲ್ಲಿ, ಶಾಲಾ ವೇದಿಕೆಗಳಲ್ಲಿ ಯಾವುದೇ ನರ್ವಸ್ ಅಥವಾ ಅಳುಕಿಲ್ಲದೆ ಭಾಷಣ ಮಾಡುವ ಜನರು ಕಾನೂನು, ರಾಜಕೀಯ ಅಥವಾ ಪ್ರೇರಣಾದಾಯಕ ಭಾಷಣ ಮಾಡುವುದನ್ನೇ ಕರಿಯರ್ ಆಗಿ ಸ್ವೀಕರಿಸಬಹುದು. ಚೆನ್ನಾಗಿ ಮಾತುಬಲ್ಲವರಿಗೆ ನ್ಯೂಸ್ ಆ್ಯಂಕರಿಂಗ್ ಸಹ ಅತ್ಯುತ್ತಮ ಕರಿಯರ್ ಆಯ್ಕೆಯಾಗಿದೆ. ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆ್ಯಂಕರಿಂಗ್ ಮಾಡುವುದನ್ನೇ ಕರಿಯರ್ ಆಗಿ ಸ್ವೀಕರಿಸಬಹುದು.

ನಟನೆ

ನೀವು ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಭಾಗವಹಿಸಿರಬಹುದು. ನಿಮ್ಮ ನಟನೆ ಸಾಕಷ್ಟು ಜನರಿಗೆ ಇಷ್ಟವಾಗಿರಬಹುದು. ಇದನ್ನೇ ಕರಿಯರ್ ಆಗಿ ಸ್ವೀಕರಿಸಬಹುದು. ಸಿನಿಮಾ, ಧಾರವಾಹಿ, ಕಿರುಚಿತ್ರಗಳು ಸೇರಿದಂತೆ ವಿವಿಧೆಡೆ ನಿಮ್ಮ ನಟನಾ ಸಾಮರ್ಥ್ಯ ಪ್ರದರ್ಶಿಸಬಹುದು. ನಿಮ್ಮ ನಟನೆ ಹೆಚ್ಚು ಜನರಿಗೆ ಇಷ್ಟವಾಗುವಂತೆ ಇದ್ದರೆ ಸಾಕಷ್ಟು ಅಭಿಮಾನಿಗಳನ್ನೂ ಪಡೆಯಬಹುದಾಗಿದೆ. ನಾಯಕ ನಟ/ನಟಿಯರು ಇಂದು ಕೈತುಂಬಾ ಸಂಭಾವನೆ ಪಡೆಯುತ್ತಿದ್ದಾರೆ. ಸಹ ಕಲಾವಿದರಲ್ಲಿ ಬೇಡಿಕೆಯಲ್ಲಿರುವವರಿಗೆ ಉತ್ತಮ ಸಂಭಾವನೆ ದೊರಕುತ್ತದೆ.

ಪ್ರವಾಸ

ಶಾಲಾ ಕಾಲೇಜು ದಿನಗಳಲ್ಲಿ ಪ್ರವಾಸವನ್ನು ಎಂಜಾಯ್ ಮಾಡುವವರು ನೀವಾಗಿರಬಹುದು. ಅಥವಾ ಸದಾ ಪ್ರವಾಸ ಹೋಗಬೇಕು ಅಥವಾ ಜಗತ್ತು ಸುತ್ತಬೇಕು ಎಂಬ ಆಸೆ ನಿಮಗಿರಬಹುದು. ಹಾಗಿದ್ದರೆ, ನೀವು ಟ್ರಾವೆಲಿಂಗ್ ಸಂಬಂಧಪಟ್ಟ ಉದ್ಯೋಗವನ್ನು ಕೈಗೊಳ್ಳಬಹುದು. ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಉದ್ಯೋಗಗಳು ಪ್ರವಾಸ ಇಷ್ಟಪಡುವವರಿಗೆ ಸೂಕ್ತವಾಗಿದೆ. ಯೋಗ ತರಬೇತುದಾರರು, ವಿದೇಶಿ ಭಾಷೆ ಕಲಿಸುವವರು, ಇತರೆ ತರಬೇತುದಾರರು ಸಹ ವಿದೇಶಕ್ಕೆ ಹೋಗಿ ತರಬೇತಿ ನೀಡಬಹುದು. ಇದು ಸಹಾ ಹಲವು ದೇಶಗಳನ್ನು ಸುತ್ತುವ ಅವಕಾಶವನ್ನು ನಿಮಗೆ ಒದಗಿಸುತ್ತದೆ.

ಚಿತ್ರ ಕಲಾವಿದರು

ಶಾಲಾ ದಿನಗಳಲ್ಲಿಯೇ ಚಿತ್ರ ಬಿಡಿಸುವ ಹವ್ಯಾಸ ನಿಮಗೆ ಇದ್ದಿರಬಹುದು. ನೀವು ಚಿತ್ರಕಲೆಯನ್ನು ಕರಿಯರ್ ಆಗಿ ಸ್ವೀಕರಿಸಬಹುದು. ವ್ಯಂಗ್ಯಚಿತ್ರಕಾರರಾಗುವ ಮೂಲಕ ಮ್ಯಾಗಝಿನ್, ಪತ್ರಿಕೆಗಳಲ್ಲಿ ಉದ್ಯೋಗ ಪಡೆಯಬಹುದು. ನೀವು ಬಿಡಿಸಿದ ಚಿತ್ರಗಳನ್ನು ಆನ್ಲೈನ್ ತಾಣಗಳಲ್ಲಿ ಹರಾಜಿಗಿಟ್ಟು ಕೈತುಂಬಾ ಹಣ ಗಳಿಸಬಹುದು. ಚಿತ್ರ ಪ್ರದರ್ಶನಗಳಲ್ಲಿ ಚಿತ್ರಗಳನ್ನು ಪ್ರದರ್ಶನವಿಡಬಹುದು. ಅತ್ಯುತ್ತಮ ಚಿತ್ರವನ್ನು ಎಷ್ಟು ಬೆಲೆಯಾದರೂ ಸರಿ ಕೊಟ್ಟು ಖರೀದಿಸುವವರು ಇರುತ್ತಾರೆ.

ಇತ್ತ ಗಮನಿಸಿ

  • ನಿಮ್ಮ ಹವ್ಯಾಸಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಪರಿಣತಿ ಪಡೆದುಕೊಳ್ಳಿ. ಪೂರಕ ಕೋರ್ಸ್ಗಳನ್ನು ಮಾಡಿಕೊಳ್ಳಿ. ಪರಿಪೂರ್ಣತೆ ಬಂದ ನಂತರವಷ್ಟೇ ಕರಿಯರ್ ಆಗಿ ಪರಿವರ್ತಿಸಿಕೊಳ್ಳಿರಿ.
  • ಆರಂಭದಲ್ಲಿ ಹವ್ಯಾಸವಾಗಿ ಕಂಡದ್ದು, ನಂತರ ನಿರಾಸಕ್ತಿ ಉಂಟುಮಾಡಬಲ್ಲದು. ಜೀವನಪೂರ್ತಿ ಈ ಹವ್ಯಾಸವನ್ನು ನೆಚ್ಚಿಕೊಂಡು ಇರಬಹುದೇ ಎಂದು ತಿಳಿದು ಮುಂದುವರೆಯಿರಿ.
  • ಈಗ ಕೈಯಲ್ಲಿರುವ ಕೈತುಂಬಾ ವೇತನ ನೀಡುವ ಕೆಲಸವನ್ನು ಬಿಟ್ಟರೆ ಹವ್ಯಾಸ ನಿಮ್ಮ ಹೊಟ್ಟೆ ತುಂಬಿಸಬಲ್ಲದೇ. ಕೆಲಸದಲ್ಲಿರುವಾಗಲೇ ಹವ್ಯಾಸವನ್ನು ಕರಿಯರ್ ಆಗಿ ಪರಿವರ್ತಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇದು ಕ್ಲಿಕ್ ಆಗುತ್ತೆ ಎಂದೆನಿಸಿದರೆ ಮಾತ್ರ ಕೆಲಸ ಬಿಟ್ಟು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.