ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮ 6 ಮಾರ್ಗಗಳು

By | December 1, 2019

ಮರೆವು ವರವೂ ಹೌದು. ಶಾಪವೂ ಹೌದು. ತುಂಬಾ ದುಃಖದ ಸನ್ನಿವೇಶಗಳು, ಬದುಕಿನಲ್ಲಿ ನಡೆದ ಘಟನೆಗಳು ಬೇಕು ಎಂದರೂ ಮರೆಯುವುದಿಲ್ಲ. ಸದಾ ಬೆಂಬಿಡದೆ ಕಾಡುತ್ತಿರುತ್ತದೆ. ಆದರೆ, ಪರೀಕ್ಷೆ ಇತ್ಯಾದಿ ಸಂದರ್ಭದಲ್ಲಿ ಕೆಲವೊಂದು ವಿಷಯಗಳು ಎಷ್ಟು ಜ್ಞಾಪಿಸಿಕೊಂಡರೂ ನೆನಪಿಗೆ ಬರುವುದಿಲ್ಲ.

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಕರ್ನಾಟಕ ಬೆಸ್ಟ್ ಒಂದಿಷ್ಟು ಸಲಹೆಗಳನ್ನು ನೀಡುತ್ತಿದೆ. ಇದನ್ನು ಅನುಸರಿಸುವ ಮೂಲಕ ಅತ್ಯುತ್ತಮ ಮೆಮೊರಿ ಪವರ್ ಪಡೆಯಬಹುದು.

ಈಗಿನ ಜೀವನಶೈಲಿಯೂ ನೆನಪಿನ ಶಕ್ತಿ ಕುಂಠಿತವಾಗಲು ಕಾರಣ ಎನ್ನುತ್ತಾರೆ ತಜ್ಞ ವ್ಯದ್ಯರುಗಳು. ಪರೀಕ್ಷೆಗೆ ಸಿದ್ಧತೆ ನಡೆಸುವವರು ನೋಟ್ಸ್ ಬರೆದಿಟ್ಟುಕೊಳ್ಳುವ ಮೂಲಕ, ಸಮರ್ಪಕ ರಿವಿಜನ್ ಮಾಡಿಕೊಳ್ಳುವ ಮೂಲಕ ತಾವು ಓದಿರುವುದನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಬಹುದು.

ಜೀವನಶೈಲಿ ಕಾರಣದಿಂದ ನೆನಪಿನ ಶಕ್ತಿ ಕುಂಠಿತವಾಗುವುದನ್ನು ಈ ಮುಂದಿನ ಕ್ರಮಗಳ ಮೂಲಕ ತಪ್ಪಿಸಿಕೊಳ್ಳಬಹುದು.

1. ಸಮರ್ಪಕ ಆಹಾರ ಸೇವನೆ

ನೀವು ತಿನ್ನುವ ಆಹಾರವೂ ನಿಮ್ಮ ನೆನಪಿನ ಶಕ್ತಿ ಕುಗ್ಗಿಸಲು ಮತ್ತು ಹೆಚ್ಚಿಸಲು ಕಾರಣವಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಹಸಿರು ತರಕಾರಿಗಳ ಸೇವನೆಯಿಂದ ಆರೋಗ್ಯವಂತರಾಗಬಹುದು. ಉದಾಹರಣೆಗೆ ಹೂಕೋಸು, ಕೋಸುಗಡ್ಡೆ ಇತ್ಯಾದಿಗಳು ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿದ್ದು, ನಿಮ್ಮ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ನಿಮ್ಮ ಮಿದುಳಿನ ಜೀವಕೋಶಗಳನ್ನು ಪ್ರಚೋದಿಸುತ್ತವೆ. ಒಮೆಗಾ-3 ಫ್ಯಾಟ್‍ನಿಂದಲೂ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಎಣ್ಣೆಯಿಂದ ಕರಿದ ಆಹಾರಗಳಿಂದ ಉಂಟಾಗುವ ಒಮೆಗಾ-6 ಫ್ಯಾಟ್ ಆಹಾರಗಳಿಂದ ದೂರವಿದ್ದರೆ ಉತ್ತಮ ಎಂದು ಕೆಲವು ಆರೋಗ್ಯ ಜರ್ನಲ್ ಗಳಲ್ಲಿ ಬರೆಯಲಾಗಿದೆ. ನಿಮ್ಮ ಕುಟುಂಬದ ವೈದ್ಯರ ಸಲಹೆ ಪಡೆದು ಉತ್ತಮ ಆಹಾರ ಸೇವನೆ ಮಾಡಲು ಆದ್ಯತೆ ನೀಡಿರಿ.

2. ವ್ಯಾಯಾಮ

ವ್ಯಾಯಾಮದಿಂದ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ. ನಿಮ್ಮ ಮಿದುಳಿನ ನರಕೋಶಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುತ್ತದೆ. ವ್ಯಾಯಾಮ ಮಾಡುವ ಸಮಯದಲ್ಲಿ ನರಕೋಶಗಳು ನೆಟ್ರೊಪಿಕ್ ಫ್ಯಾಕ್ಟರ್ಸ್ ಎಂಬ ಪ್ರೋಟೀನ್ ಅನ್ನು ಬಿಡುಗಡೆಗೊಳಿಸುತ್ತದೆ. ಇದು ಕಲಿಕೆ ಇತ್ಯಾದಿ ಅರಿವಿನ ಕಾರ್ಯಗಳಿಗೆ ಉತ್ತೇಜನ ನೀಡುತ್ತದೆ. ನೆನಪಿನ ಶಕ್ತಿಯನ್ನೂ ವೃದ್ಧಿಸುತ್ತದೆ. `ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮಿದುಳಿಗೆ ರಕ್ತ ಸಂಚಾರ ಉತ್ತಮಗೊಳ್ಳುವುದು ಮಾತ್ರವಲ್ಲದೆ ಹೊಸ ವಿಷಯವನ್ನು ಕಲಿಯುವ ಗುಣಮಟ್ಟವನ್ನು ಎರಡುಪಟ್ಟು ಹೆಚ್ಚಿಸುತ್ತದೆ’ ಎಂದು ನ್ಯೂರೋಸೈನ್ಸ್‍ನ ವರದಿ ತಿಳಿಸಿದೆ.

3. ಒಂದೇ ಬಾರಿ ಹಲವು ಕೆಲಸ ಮಾಡಬೇಡಿ

ಒಂದೇ ಸಾರಿ ಹಲವು ಕೆಲಸಗಳನ್ನು ಮಾಡುವ ವಿಧಾನವನ್ನು ಬಿಟ್ಟುಬಿಡಿ. ಕಂಪ್ಯೂಟರ್‍ಗಳಂತೆ ಮನುಷ್ಯರು ಕೆಲಸ ಮಾಡುವ ಅನಿವಾರ್ಯ ಈಗ ಇದೆ. ಆದರೆ, ಎಲ್ಲಾ ಕೆಲಸವೂ ಮುಗಿಯಬೇಕೆಂದು ಒಂದೇ ಸಾರಿ ಹಲವು ಕೆಲಸಗಳಲ್ಲಿ ತೊಡಗುವುದು ಉತ್ತಮವಲ್ಲ. ಯಾವುದು ಹೆಚ್ಚು ಅಗತ್ಯವಿರುವ ಕೆಲಸ ಅಥವಾ ಯಾವುದು ಕಡಿಮೆ ಅಗತ್ಯವಿರುವ ಕೆಲಸ ಎಂದು ವಿಭಾಗ ಮಾಡಿಕೊಂಡು ಒಂದೊಂದೇ ಕೆಲಸವನ್ನು ಮಾಡಿ ಮುಗಿಸಿ. ಒಂದು ವಿಷಯದ ಕುರಿತು ಮಿದುಳಿನಲ್ಲಿ ನೆನಪು ಉಳಿಯಲು ಕಡಿಮೆಯೆಂದರೂ ಎಂಟು ಸೆಕೆಂಡ್ ಬೇಕು. ನೀವು ಫೋನ್‍ನಲ್ಲಿ ಮಾತನಾಡುತ್ತ, ಬೇರೆನೋ ಕೆಲಸ ಮಾಡುತ್ತ ಇದ್ದರೆ ಆ ವಿಷಯಗಳು ಮಿದುಳಿನಲ್ಲಿ ಸಮರ್ಪಕವಾಗಿ ದಾಖಲಾಗುವುದು ಕಷ್ಟ. ಹಲವು ಕೆಲಸಗಳನ್ನು ಒಂದೇ ಸಾರಿ ಮಾಡುವುದರಿಂದ ಮಿದುಳಿನ ಮೇಲೆ ಒತ್ತಡವೂ ಹೆಚ್ಚಾಗುತ್ತದೆ.

4. ರಾತ್ರಿ ಚೆನ್ನಾಗಿ ನಿದ್ದೆ ಮಾಡಿ

ನಿದ್ರಾಹೀನತೆಯೂ ನಿಮ್ಮ ನೆನಪಿನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ನಾಳೆ ಪರೀಕ್ಷೆ ಇದೆಯೆಂದು ಇಂದು ರಾತ್ರಿ ನಿದ್ದೆಗೆಟ್ಟು ಓದಬೇಡಿ. ಹಲವು ದಿನಗಳ ಮೊದಲೇ ಸರಿಯಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ಪರೀಕ್ಷೆಗಿಂತ ಹಿಂದಿನ ದಿನ ನಿದ್ರೆಗೆಡುವ ಅಗತ್ಯವಿರುವುದಿಲ್ಲ. ಸಮರ್ಪಕವಾಗಿ ನಿದ್ದೆ ಮಾಡಿದರೆ ಮಾತ್ರ ಮಿದುಳಿಗೆ ಸರಿಯಾಗಿ ವಿಶ್ರಾಂತಿ ದೊರಕುತ್ತದೆ. ನೆನಪಿನ ಶಕ್ತಿ ಹೆಚ್ಚಲು ಸರಿಯಾದ ನಿದ್ರೆ ಅಗತ್ಯವೆಂದು ಹಲವು ಸಂಶೋಧನೆಗಳಿಂದಲೂ ಸಾಬೀತಾಗಿದೆ.

5. ಮಿದುಳಿಗೆ ಕಸರತ್ತು ನೀಡಿ

ಫಜಲ್ ಇತ್ಯಾದಿ ಬ್ರೈನ್ ಗೇಮ್‍ಗಳನ್ನು ಆಡುವ ಮೂಲಕ ಮಿದುಳಿಗೆ ಕಸರತ್ತು ನೀಡಿ. ಇದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಆದರೆ, ಕೆಲವೊಂದು ವಿಡಿಯೋ ಬ್ರೈನ್ ಗೇಮ್‍ಗಳಿಂದ ನೆನಪಿನ ಶಕ್ತಿ ಹೆಚ್ಚಾಗದು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಆದಷ್ಟು ಮಿದುಳಿಗೆ ಮೇವು ನೀಡುವಂತಹ ಆಟಗಳನ್ನು ಆಡಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿರಿ.

6. ಹೊಸ ಕೌಶಲ ಕಲಿಯಿರಿ

ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ನರವ್ಯವಸ್ಥೆಯನ್ನು ಆರೋಗ್ಯದಿಂದ ಇಟ್ಟುಕೊಳ್ಳಬಹುದಾಗಿದೆ. ಆದಷ್ಟು ಆಸಕ್ತಿದಾಯಕವೆನಿಸುವ ಮತ್ತು ಅರ್ಥಪೂರ್ಣವೆನಿಸುವ ಹೊಸ ಕೌಶಲಗಳನ್ನು ಕಲಿಯಿರಿ. ಉದಾಹರಣೆಗೆ ಕರಕುಶಲ ವಿಷಯಗಳಲ್ಲಿ ನಿಮಗೆ ಆಸಕ್ತಿಯಿದ್ದರೆ ಅಂತಹ ಕೌಶಲ ಕಲಿಯಿರಿ. ಚಂದದ ವೆಬ್‍ಸೈಟ್ ವಿನ್ಯಾಸ ಮಾಡುವ ಆಸಕ್ತಿಯಿದ್ದರೆ ಇದಕ್ಕೆ ಪೂರಕವಾದ ಸ್ಕಿಲ್‍ಗಳನ್ನು ಪಡೆಯಿರಿ. ಒಟ್ಟಾರೆ, ಗಮನವಿಟ್ಟು ಮಾಡುವಂತಹ ಕೆಲಸಕ್ಕೆ ಸಂಬಂಧಪಟ್ಟ ಕೌಶಲ ಕಲಿಯಲು ಆದ್ಯತೆ ನೀಡಿರಿ.
ದಿನದ ಬಹುತೇಕ ಸಮಯ ಅರ್ಥಮಾಡಿಕೊಳ್ಳದೆ ಯಾವುದೇ ವಿಷಯವನ್ನು ಓದಿದರೆ ಅದು ನಿಮ್ಮ ನೆನಪಿನಲ್ಲಿ ಉಳಿಯದು. ಏನೂ ಓದುವಿರೋ ಅದನ್ನು ಅರ್ಥಮಾಡಿಕೊಳ್ಳಿ. ಆಗಾಗ ಸಮಯ ಸಿಕ್ಕಾಗ ಓದಿರುವ ವಿಷಯಗಳನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿ. ಖಂಡಿತವಾಗಿಯೂ ನಿಮ್ಮ ಮೆಮೊರಿ ಪವರ್ ಉತ್ಕøಷ್ಟವಾಗಬಲ್ಲದು.

ನೆನಪಿರಲಿ: ಸತತವಾಗಿ ನೆನಪಿಸಿಕೊಳ್ಳುವುದೇ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮ ಮಾರ್ಗ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.