Inspirational Stories: ಹೊಂದಾಣಿಕೆ ಕೊರತೆ, ಅತ್ತೆಗೆ ವಿಷ ಕೊಟ್ಟ ಸೊಸೆ

ನೀತಾ ಇತ್ತೀಚೆಗೆ ಮದುವೆಯಾಗಿದ್ದಳು. ಮನೆಯಲ್ಲಿ ಗಂಡ ಮತ್ತು ಅತ್ತೆ ಇದ್ದರು. ಕೆಲವು ದಿನಗಳ ಬಳಿಕ ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಕಷ್ಟವಾಯಿತು. ನೀತಾ ಆ‘ುನಿಕ ಹುಡುಗಿ. ಅತ್ತೆ ಸಹಜವಾಗಿ ಹಳೆಯ ಕಾಲದವರು. ನೀತಾ ತುಂಬಾ ಕೋಪಿಷ್ಠೆ. ಅತ್ತೆಯನ್ನು ದ್ವೇಷಿಸಲು ಆರಂಭಿಸಿದಳು. ಗಂಡನೊಂದಿಗೆ ಚೆನ್ನಾಗಿರಬೇಕಾದರೆ ಈ ಅತ್ತೆ ಸಹವಾಸ ತಪ್ಪಬೇಕು ಎಂದುಕೊಂಡಳು. ಬೇರೆ ಮನೆ ಮಾಡುವಂತೆ ಇಲ್ಲ. ಅತ್ತೆಯನ್ನು ಹೊರಗೆ ಹಾಕುವಂತೆಯೂ ಇಲ್ಲ. ಇತ್ತೀಚೆಗೆ ಗಂಡನೂ ಅತ್ತೆ ಪರವಾಗಿ ಮಾತನಾಡುತ್ತಿದ್ದಾನೆ. ಏನು ಮಾಡುವುದು? ತುಂಬಾ ಯೋಚನೆ ಮಾಡಿದಳು. ಆಕೆಗೆ ತನ್ನ ತಂದೆಯ ನೆನಪು ಬಂತು.

Inspirational stories in Kannada

ಆಕೆಯ ತಂದೆ ರಸಾಯನಶಾಸ್ತ್ರಜ್ಞ. ಸೀದಾ ಅಪ್ಪನ ಮನೆಗೆ ಹೋದಳು. ನನ್ನ ಅತ್ತೆಯನ್ನು ಸಾಯಿಸಲು ಏನಾದರೂ ವಿಷ ಕೊಡು. ಅದನ್ನು ಅತ್ತೆಯ ಊಟಕ್ಕೆ ಹಾಕಿ ಕೊಡ್ತಿನಿ. ಸತ್ತು ಬಿಡಲಿ ಮುದುಕಿ ಎಂದಳು. ಅಪ್ಪ ಆತಂಕದಿಂದ ಹೇಳಿದನು. ಹಾಗೆ ಮಾಡಿದರೆ ನಾವಿಬ್ಬರು ಜೈಲಿಗೆ ಹೋಗಬೇಕಾಗುತ್ತದೆ. ನನಗೆ ನಿನ್ನನ್ನು ಜೈಲಿನಲ್ಲಿ ನೋಡಲು ಇಷ್ಟವಿಲ್ಲ.

ಆದರೆ, ತಂದೆ ಎಷ್ಟು ಹೇಳಿದರೂ ಮಗಳ ಕೋಪ ಕಡಿಮೆಯಾಗಲಿಲ್ಲ. ಹಠ ಬಿಡದ ಮಗಳಿಗೆ ತಂದೆ ‘ಸರಿ, ಒಂದೇ ಸಾರಿ ವಿಷ ಕೊಟ್ಟರೆ ನಾವು ಜೈಲಿಗೆ ಹೋಗಬೇಕಾಗುತ್ತದೆ. ನಾನೊಂದು ವಿಷ ಕೊಡುತ್ತೇನೆ. ಇದನ್ನು ಸ್ವಲ್ಪಸ್ವಲ್ಪವೇ ನಾಲ್ಕೈದು ತಿಂಗಳು ಕೊಡು. ಆ ವಿಷ ಹನಿಹನಿಯಾಗಿ ದೇಹದಲ್ಲಿ ಸೇರುತ್ತದೆ. ಇದರಿಂದ ಐದು ತಿಂಗಳು ಕಳೆದಾಗ ನಿನ್ನ ಅತ್ತೆ ಸಾಯುತ್ತಾಳೆ. ಯಾರಿಗೂ ಅನುಮಾನ ಬರುವುದಿಲ್ಲ ಎಂದನು.

ಆದರೆ, ಈ ಸಮಯದಲ್ಲಿ ನೀನು ಅತ್ತೆ ಜೊತೆ ಜಗಳ ಮಾಡಲು ಹೋಗಬೇಡ. ಯಾಕೆಂದರೆ, ಆಕೆ ಸತ್ತ ಮೇಲೆ ನಿನ್ನ ಮೇಲೆ ಜನರಿಗೆ ಸಂದೇಹ ಬರಬಹುದು. ಪ್ರತಿದಿನ ಆಕೆಯನ್ನು ಚೆನ್ನಾಗಿ ನೋಡಿಕೊಳ್ತಾ ಇರು. ಚೆನ್ನಾಗಿ ಮಾತನಾಡು. ಹಾಗಾದರೆ ಮಾತ್ರ ಈ ವಿಷಯವನ್ನು ಕೊಡುತ್ತೇನೆ ಎಂದನು ಆಕೆಯ ಅಪ್ಪ.

ಹೇಗೋ, ಇನ್ನೈದು ತಿಂಗಳಲ್ಲಿ ಸಾಯುತ್ತಾಳೆ. ಅಲ್ಲಿ ತನಕ ಚೆನ್ನಾಗಿ ನೋಡಿಕೊಂಡರೆ ಆಯ್ತು ಎಂದುಕೊಂಡು ಸೊಸೆ ಅದಕ್ಕೆ ಒಪ್ಪಿದಳು. ಅವತ್ತಿನಿಂದ ಪ್ರತಿದಿನ ಅತ್ತೆಯ ಊಟಕ್ಕೆ ಆ ವಿಷವನ್ನು ಒಂದೊಂದು ಹನಿ ಹಾಕುತ್ತ ಬಂದಳು.

ಜೊತೆಗೆ ಪ್ರತಿದಿನ ಅತ್ತೆಯ ಜೊತೆಗೆ ಚೆನ್ನಾಗಿ ಮಾತನಾಡಲು ಆರಂಭಿಸಿದಳು. ಅತ್ತೆ ಕಿರಿಕಿರಿ ಮಾಡಿದಾಗಲೂ ಎದುರು ಮಾತನಾಡಲು ಹೋಗಲಿಲ್ಲ. ಹೀಗೆ ದಿನ ಕಳೆದಂತೆ ಅತ್ತೆಯೂ ಜಗಳ ಮಾಡುವುದನ್ನು ಕಡಿಮೆ ಮಾಡಿದಳು. ಅವಳಿಗೂ ತನ್ನ ಸೊಸೆಯ ಮೇಲೆ ಪ್ರೀತಿ ಮೂಡತೊಡಗಿತು. ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡಲು ಆರಂಭಿಸಿದರು. ಈಕೆ ತಪ್ಪದೇ ಅತ್ತೆಯ ಊಟಕ್ಕೆ ಒಂದೊಂದು ಹನಿ ವಿಷ ಹಾಕುವುದನ್ನು ಮುಂದುವರೆಸಿದಳು.

ಕೆಲವು ತಿಂಗಳು ಕಳೆದ ಬಳಿಕ ಅತ್ತೆ-ಸೊಸೆ ತುಂಬಾ ಆತ್ಮೀಯರಾದರು. ಎಷ್ಟೇಂದರೆ, ಅಮ್ಮ ಮಗಳಂತೆ ಒಟ್ಟಿಗೆ ಹರಟೆ ಹೊಡೆಯುತ್ತಿದ್ದರು. ಅಕ್ಕಪಕ್ಕದ ಮನೆಗೆ ಹೋಗುತ್ತಿದ್ದರು. ಇವಳಿಗೂ ತನ್ನ ಅತ್ತೆಯೇ ತಾಯಿಯಂತೆ ಅನಿಸತೊಡಗಿತು. ಅಯ್ಯೋ ಇನ್ನು ಕೆಲವು ದಿನದಲ್ಲಿ ಅತ್ತೆ ಸಾಯುತ್ತಾಳೆ ಎಂಬ ಆತಂಕ ಆರಂಭವಾಯಿತು.
ಸೊಸೆ ನೇರ ತನ್ನ ಅಪ್ಪನ ಬಳಿಗೆ ಹೋದಳು. ನಾನು ನನ್ನ ಅತ್ತೆಯನ್ನು ತುಂಬಾ ಪ್ರೀತಿಸುತ್ತೇನೆ. ಆಕೆ ಸಾಯುವುದು ನನಗೆ ಇಷ್ಟವಿಲ್ಲ. ನಾನು ಕೊಟ್ಟ ವಿಷಕ್ಕೆ ಪ್ರತಿರೋ‘ ಔಷ‘ ಏನಾದರೂ ಕೊಡು ಎಂದು ದುಂಬಾಲು ಬಿದ್ದಳು.

ಅಪ್ಪ ನಕ್ಕನು. ಏನು ವಿಷ? ನಾನು ಕೊಟ್ಟಿರುವುದು ಜೇನು ಎಂದನು.

(ಮೂಲ: ಇಂಟರ್‌ನೆಟ್)

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಮುಖ್ಯ ಉಪಸಂಪಾದಕ (ಪ್ರಿನ್ಸಿಪಾಲ್‌ ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯುಸರ್‌). ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ ಓದುವುದು, ಬರೆಯುವುದು ಇಷ್ಟದ ಕೆಲಸ. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ ಧನ್ಯವಾದ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.