ಫ್ರೆಶರ್‌ಗಳು ಉದ್ಯೋಗ ಸಂದರ್ಶನಕ್ಕೆ ಹೋದಾಗ “ನಿಮಗೆ ಕೆಲಸದ ಅನುಭವ ಇದೆಯೇ” ಎಂದು ಸಂದರ್ಶಕರು ಪ್ರಶ್ನಿಸಬಹುದು. “ಇಲ್ಲ ಸರ್, ಈಗಷ್ಟೇ ಕಾಲೇಜು ಮುಗಿಯಿತು, ಅನುಭವ ಇಲ್ಲ” ಎನ್ನಬೇಡಿ.
***
ಶಿಕ್ಷಣದ ಚೌಕಟ್ಟಿನಿಂದ ಹೊರಬಂದು ವೃತ್ತಿಜೀವನದ ಕದತಟ್ಟುವ ಸಮಯ. ಸಂದರ್ಶನಕ್ಕೆ ಆಹ್ವಾನ ಬಂದಾಗ ಸಾಕಷ್ಟು ಸಿದ್ಧತೆ ನಡೆಸಿ ಹೋಗಿರುತ್ತೀರಿ. ಸಂದರ್ಶಕರು “ವೃತ್ತಿಪರ ಅನುಭವ ಇದೆಯೇ?” ಅಥವಾ “ಕೆಲಸದ ಅನುಭವ ಏನು?” ಎಂದು ಪ್ರಶ್ನಿಸಿದಾಗ ನಿಮ್ಮ ತಲೆಯಲ್ಲಿ ಹಲವು ಯೋಚನೆಗಳು ಹಾದು ಹೋಗಬಹುದು. “ಇವರಿಗೆ ಅರ್ಥವಾಗುತ್ತಿಲ್ಲವೇ? ನಾವು ಫ್ರೆಶರ್‌ಗಳು, ಅನುಭವ ಇದ್ದರೆ ನಾವ್ಯಾಕೆ ಫ್ರೆಶರ್ ಆಗ್ತಿದ್ದೇವು” ಎಂದು ಮನಸ್ಸಿನಲ್ಲಿ ಆಕ್ರೋಶ ಉಕ್ಕಿಬರಬಹುದು. “ಇಲ್ಲ ಮೇಡಂ/ಸರ್, ಈಗಷ್ಟೇ ಕಾಲೇಜು ಮುಗಿಯಿತು. ಇನ್ನು ಅನುಭವ ಆಗಬೇಕು” ಎನ್ನಬೇಡಿ.
ಸಂದರ್ಶಕರ ಅನುಭವದ ಪ್ರಶ್ನೆಯ ಹಿಂದೆ “ನಿಮ್ಮ ಸಾಮರ್ಥ್ಯ ತಿಳಿದುಕೊಳ್ಳುವ ಪ್ರಯತ್ನ” ಇರುತ್ತದೆ. ಈ ಪ್ರಶ್ನೆ ಬಂದಾಗ “ಇಲ್ಲ” ಎನ್ನುವ ಬದಲು ಕಾಲೇಜು ದಿನಗಳಲ್ಲಿ ನೀವು ಮಾಡಿರುವ “ವೃತ್ತಿಪರ ಕೈಂಕರ್ಯ”ಗಳನ್ನು ತಿಳಿಸಿ. ಫ್ರೆಶರ್‌ಗಳು ತಮ್ಮ “ಅನುಭವವಿಲ್ಲದ” ಸ್ಥಿತಿಯನ್ನು “ಸಾಮರ್ಥ್ಯ ಪ್ರದರ್ಶಿಸುವ ಅವಕಾಶ”ವಾಗಿ ಬಳಸಿಕೊಳ್ಳಬೇಕು.
ವೃತ್ತಿಪರ ಅನುಭವ ಎಂದರೇನು?

ಇದನ್ನು ನಿರ್ದಿಷ್ಟ ವರ್ಷಗಳ ಕಾಲ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಎಂದುಕೊಳ್ಳಬಾರದು. ಇದು ನಿಮ್ಮ ಕಲಿಕೆ ಮತ್ತು ಬೆಳವಣಿಗೆಯ ಕಥೆ. ಕಾಲೇಜು ಪ್ರಾಜೆಕ್ಟ್‌ಗಳು, ಇಂಟರ್ನ್‌ಶಿಪ್‌ಗಳು, ಫ್ರೀಲ್ಯಾನ್ಸಿಂಗ್ ಅಥವಾ ವಾಲೆಂಟರಿ ಕೆಲಸಗಳ ಮೂಲಕ ನೀವು ಪಡೆದ ವೃತ್ತಿಪರ ಅನುಭವವನ್ನು ತಿಳಿಸುವ ಅವಕಾಶ ಎಂದುಕೊಳ್ಳಿ. ನಿಮ್ಮಲ್ಲಿ ಟೀಮ್‌ವರ್ಕ್, ಪ್ರಾಬ್ಲಂ ಸಾಲ್ವಿಂಗ್ ಮತ್ತು ಕಮ್ಯುನಿಕೇಷನ್ ಮುಂತಾದ ಸಾಫ್ಟ್ ಸ್ಕಿಲ್‌ಗಳು ಇವೆಯೇ ಎಂದು ಪರಿಶೀಲಿಸಲು ಈ ಪ್ರಶ್ನೆ ಕೇಳುತ್ತಾರೆ.
ಉದಾಹರಣೆ 1: ನೀವು ಕಂಪ್ಯೂಟರ್ ಸೈನ್ಸ್ ಕಲಿತಿದ್ದೀರಿ. ಕಾಲೇಜು ಪ್ರಾಜೆಕ್ಟ್‌ನಲ್ಲಿ ಒಂದು ಸರಳವಾದ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದೀರಿ ಎಂದಿರಲಿ. ಸಂದರ್ಶನದಲ್ಲಿ “ಅನುಭವ ಇಲ್ಲ” ಎನ್ನುವ ಬದಲು “ಕಾಲೇಜು ಪ್ರಾಜೆಕ್ಟ್‌ನಲ್ಲಿ ನಿರ್ದಿಷ್ಟ ಡೆಡ್‌ಲೈನ್‌ನಲ್ಲಿ ನಾವೆಲ್ಲ ಟೀಮ್ ವರ್ಕ್ ಮಾಡಿ ಒಂದು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದೇವೆ. ಅದರಲ್ಲಿ ಒಂದು ಬಗ್ ಬಂದಾಗ ನಾನೇ ಡೀಬಗ್ ಮಾಡಿದ್ದೆ” ಎಂದು ತಿಳಿಸಿ. ಈ ಉತ್ತರದಿಂದ ನಿಮ್ಮಲ್ಲಿರುವ ಟೀಮ್ ವರ್ಕ್, ಸಮಸ್ಯೆ ಬಗೆಹರಿಸುವ ಕೌಶಲಗಳ ಕುರಿತು ಉದ್ಯೋಗ ಸಂದರ್ಶಕರು ತಿಳಿದುಕೊಳ್ಳುತ್ತಾರೆ.
ಉದಾಹರಣೆ 2: ನೀವು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಎಂದಿರಲಿ. ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್‌ನಲ್ಲಿ ಒಂದು ಸೌರಶಕ್ತಿ ಚಾಲಿತ ರೋಬೋಟ್ ನಿರ್ಮಿಸಿದ್ದೀರಿ. ಉದ್ಯೋಗ ಸಂದರ್ಶನದಲ್ಲಿ ಅನುಭವದ ಪ್ರಶ್ನೆ ಎದುರಾದಗ “ಪ್ರಾಜೆಕ್ಟ್‌ನಲ್ಲಿ ನಾನು ಡಿಸೈನ್ ಸಾಫ್ಟ್‌ವೇರ್ ಬಳಸಿ ಮಾಡೆಲ್ ರಚಿಸಿದ್ದೇನೆ. ಟೀಮ್‌ನೊಂದಿಗೆ ಪರೀಕ್ಷಿಸಿದ್ದೇನೆ. ಇದು ನನ್ನ ಹಾರ್ಡ್ ಸ್ಕಿಲ್‌ಗಳಾದ ಕ್ಯಾಡ್ ಮತ್ತು ಪ್ರೋಟೋಟೈಪಿಂಗ್ ಉತ್ತಮಗೊಳಿಸಿತು. ಜತೆಗೆ, ಸಮಯ ನಿರ್ವಹಣೆ ಕಲಿಸಿತು” ಎಂದು ತಿಳಿಸಿ.
ಇಂಟರ್ನ್‌ಷಿಪ್ ಮತ್ತು ಫ್ರೀಲ್ಯಾನ್ಸಿಂಗ್
ವೃತ್ತಿಪರ ಅನುಭವದ ಪ್ರಶ್ನೆಗೆ ಉತ್ತರಿಸಲು ಫ್ರೆಶರ್‌ಗಳಿಗೆ ಇಂಟರ್ನ್‌ಷಿಪ್‌ಗಳು ಮತ್ತು ಫ್ರೀಲ್ಯಾನ್ಸಿಂಗ್ ಅತ್ಯುತ್ತಮ ಅವಕಾಶ.
ಉದಾಹರಣೆ 3: ನೀವು ಮಾರ್ಕೆಟಿಂಗ್ ವಿದ್ಯಾರ್ಥಿ ಎಂದಿರಲಿ. ಒಂದು ಸ್ಟಾರ್ಟ್‌ಅಪ್‌ನಲ್ಲಿ ಇಂಟರ್ನಿಯಾಗಿ ಸೋಷಿಯಲ್ ಮೀಡಿಯಾ ಕ್ಯಾಂಪೇನ್ ನಡೆಸಿದ್ದೀರಿ. “ಈ ಇಂಟರ್ನ್‌ಷಿಪ್‌ನಲ್ಲಿ ನಾನು ಕಂಟೆಂಟ್ ರಚಿಸಿ ಯೂಸರ್ ಎಂಗೇಜ್‌ಮೆಂಟ್ ಅನ್ನು ಶೇಕಡ 30 ಹೆಚ್ಚಿಸಿದ್ದೇನೆ. ಇದಕ್ಕೆ ಕ್ಲೈಂಟ್ ಫೀಡ್‌ಬ್ಯಾಕ್ ಉತ್ತಮವಾಗಿತ್ತು” ಎಂದು ತಿಳಿಸಿ.
ಉದಾಹರಣೆ 4: ನೀವು ಗ್ರಾಫಿಕ್ ಡಿಸೈನರ್ ವಿದ್ಯಾರ್ಥಿನಿ ಎಂದುಕೊಳ್ಳೋಣ. ಫ್ರೀಲ್ಯಾನ್ಸಿಂಗ್ ತಾಣದಲ್ಲಿ ಕ್ಲಯೆಂಟ್‌ಗೆ ಮನೆಯಿಂದಲೇ ಲೋಗೋ ಡಿಸೈನ್ ಮಾಡಿ ಕೊಟ್ಟಿದ್ದೀರಿ. ಸಂದರ್ಶನದಲ್ಲಿ ಅನುಭವದ ಪ್ರಶ್ನೆ ಬಂದಾಗ “ಲೋಗೋ ಡಿಸೈನ್ ಸೇರಿದಂತೆ ವಿವಿಧ ಗ್ರಾಫಿಕ್ ಡಿಸೈನ್ ಕ್ಲೈಂಟ್ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿ ಪಾಸಿಟೀವ್ ಫೀಡ್‌ಬ್ಯಾಕ್ ಪಡೆದಿದ್ದೇನೆ” ಎಂದು ತಿಳಿಸಬಹುದು.
ಲಿಂಕ್ಡ್‌ಇನ್, ಅಪ್‌ವರ್ಕ್, ಫ್ರೀಲ್ಯಾನ್ಸರ್.ಇನ್ ಮುಂತಾದ ತಾಣಗಳಲ್ಲಿ ಪ್ರಯತ್ನಪಟ್ಟರೆ ಯಾವುದಾದರೂ ಪ್ರಾಜೆಕ್ಟ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಇದರಿಂದ ಗಳಿಕೆಯೂ ಆಗುತ್ತದೆ. ಉದ್ಯೋಗದ ಅನುಭವವೂ ಆಗುತ್ತದೆ.
ಸರ್ಟಿಫಿಕೇಷನ್ ಪಡೆಯಿರಿ
ಫ್ರೆಶರ್‌ಗಳ ಹುದ್ದೆಗೆ ಸಾವಿರಾರು ಅರ್ಜಿಗಳು ಬರುತ್ತವೆ. ಅವರಲ್ಲಿ ನೀವು ಭಿನ್ನವಾಗಿ, ಅತ್ಯುತ್ತಮವಾಗಿ ಕಾಣಿಸಿಕೊಳ್ಳಬೇಕು. ಬಿಡುವಿನ ವೇಳೆಯಲ್ಲಿ ರೀಲ್ಸ್, ಸಿನಿಮಾ, ವೆಬ್ ಸರಣಿಗಳನ್ನು ನೋಡುತ್ತಾ ಹಲವು ಗಂಟೆಗಳನ್ನು ಕಳೆದಿರುತ್ತೀರಿ. ಇದರಲ್ಲಿ ಒಂದಿಷ್ಟು ಗಂಟೆಗಳನ್ನು ಸರ್ಟಿಫಿಕೇಷನ್ ಕೋರ್ಸ್‌ಗಳನ್ನು ಕಲಿಯಲು ಮೀಸಲಿಡಿ. Coursera ಅಥವಾ Udemy ಮೂಲಕ ಸ್ಕಿಲ್ ಅಪ್‌ಗ್ರೇಡ್ ಮಾಡಿ. ಇವು ನಿಮ್ಮ ರೆಸ್ಯುಮೆಯ ತೂಕ ಹೆಚ್ಚಿಸುತ್ತವೆ. ಉದ್ಯೋಗ ಸಂದರ್ಶನದ ಸಮಯದಲ್ಲಿ ಅನುಭವದ ಪ್ರಶ್ನೆ ಬಂದಾಗ ಕಾಲೇಜು ಪಠ್ಯ ಹೊರತುಪಡಿಸಿ ಬೇರೆ ಯಾವೆಲ್ಲ ಕೋರ್ಸ್ ಮಾಡಿದ್ದೀರಿ ಎಂದು ತಿಳಿಸಿ. ಉದಾಹರಣೆಗೆ “ನಾನು ಕಾಲೇಜು ಓದುತ್ತಿರುವಾಗಲೇ ಪೈಥಾನ್ ಕೋರ್ಸ್ ಮಾಡಿ, ಒಂದು ಫ್ರೀಲ್ಯಾನ್ಸ್ ಪ್ರಾಜೆಕ್ಟ್ ಪಡೆದಿದ್ದೇನೆ” ಎನ್ನಿ. ನೀವು ನಿರಂತರ ಕಲಿಕೆಯ ಮನೋಭಾವದವರು, ಪ್ರೋಆಕ್ಟಿವ್ ಮತ್ತು ಆಡಪ್ಟಬಲ್ ಎಂದು ಸಂದರ್ಶಕರು ತಿಳಿದುಕೊಳ್ಳುತ್ತಾರೆ.
ವೃತ್ತಿಕ್ಷೇತ್ರದಲ್ಲಿ ಈಗ ಅಪಾರ ಅನುಭವ ಪಡೆದವರು ಒಂದೊಮ್ಮೆ ಫ್ರೆಷರ್ ಆಗಿದ್ದರು. ಅವನಿಗೆ, ಅವಳಿಗೆ ಕೆಲಸ ಸಿಗ್ತು, ನನಗಿನ್ನೂ ಸಿಕ್ಕಿಲ್ಲವೆಂಬ ಬೇಸರದಲ್ಲಿ ಕಾಲ ಕಳೆಯಬೇಡಿ. ಬಿಡುವಿನ ವೇಳೆಯಲ್ಲಿ ಸ್ಕಿಲ್ ಅಪ್‌ಗ್ರೇಡ್ ಮಾಡಿಕೊಂಡು ಪ್ರಯತ್ನ ಮುಂದುವರೆಸಿ. ನನಗೆ ಗೂಗಲ್‌ನಲ್ಲಿಯೇ ಕೆಲಸ ಸಿಗಬೇಕು, ಮೆಟಾದಲ್ಲಿಯೇ ಸಿಗಬೇಕು ಎಂದು ಸೀಮಿತರಾಗಬೇಡಿ. ನಿರುದ್ಯೋಗಿಯಾಗಿ ಹಲವು ತಿಂಗಳು, ವರ್ಷ ಕಳೆಯುವ ಬದಲು ಸ್ಟಾರ್ಟಪ್‌ಗಳು, ಸಣ್ಣ ಕಂಪನಿಗಳು ಸೇರಿದಂತೆ ಎಲ್ಲಿ ಅವಕಾಶ ದೊರಕುತ್ತದೆಯೋ ಅಲ್ಲಿ “ವೃತ್ತಿಪರ ಅನುಭವ” ಪಡೆಯಿರಿ.


















Got a Questions?
Find us on Socials or Contact Us and we’ll get back to you as soon as possible.