ಥ್ಯಾಂಕ್ಸ್ ಹೇಳುವುದರಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ, ಪಡೆದುಕೊಳ್ಳುವುದೇ ಹೆಚ್ಚು.
ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ಬಳಿಕ ನೀವು ಉದ್ಯೋಗಕ್ಕೆ ಆಯ್ಕೆಯಾದ ಇಮೇಲ್ ಬಂದಾಗ ಸಹಜವಾಗಿ ನೀವು ಥ್ಯಾಂಕ್ಯೂ ಎಂದು ಮಾರುತ್ತರ ನೀಡಬಹುದು. ಆದರೆ, ಎಲ್ಲಾದರೂ ದುರಾದೃಷ್ಟವಶಾತ್ ನೀವು ಮುಂದಿನ ಸುತ್ತಿಗೆ ಆಯ್ಕೆಯಾಗಿಲ್ಲ ಎಂಬ ಇಮೇಲ್ ಬಂದರೆ ಧನ್ಯವಾದ ಹೇಳುವಿರಾ? ಖಂಡಿತಾ ಹೇಳಬೇಕು. ಇಲ್ಲಿಯವರೆಗೆ ನನ್ನನ್ನು ಪರಿಗಣಿಸಿದ್ದಕ್ಕೆ ಧನ್ಯವಾದ ಎಂದು ಒಂದು ಸುಂದರ ಥ್ಯಾಂಕ್ಯೂ ನೋಟ್ ಬರೆಯಿರಿ. ನಿಮ್ಮ ಈ ಧನ್ಯವಾದವನ್ನು ನೋಡಿದ ಎಚ್‌ಆರ್, ಕೆಲವೊಮ್ಮೆ ನಿಮ್ಮನ್ನು ಮತ್ತೆ ಉದ್ಯೋಗಕ್ಕೆ ಪರಿಗಣಿಸಿದರೂ ಪರಿಗಣಿಸಬಹುದು.
ಇದೇ ರೀತಿ ನಿಮ್ಮ ಉದ್ಯೋಗ ಸ್ಥಳದಲ್ಲಿಯೂ ಆಗಾಗ ಧನ್ಯವಾದ, ಕ್ಷಮಿಸಿ ಎನ್ನುವಂತಹ ಸಂದರ್ಭಗಳು ಆಗಾಗ ಬರುತ್ತವೆ. ‘‘ಸಹೋದ್ಯೋಗಿಗೆ ಒಂದು ಕೃತಜ್ಞತೆ ಸಲ್ಲಿಸುವುದು ಪರಸ್ಪರ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ನೆರವಾಗುತ್ತದೆ’’ ಎನ್ನುತ್ತಾರೆ ತಜ್ಞರು.
ಒಂದುವೇಳೆ ಆತ/ ಆಕೆ ನಿಮ್ಮ ಉಪಕಾರ ಸ್ಮರಿಸದೇಹೋದರೆ ಅದು ‘ಕೃತಘ್ನತೆ’ ಎನ್ನಿಸುತ್ತದೆ. ಆಗ ನೀವು ಸಹೋದ್ಯೋಗಿಗೆ ಮತ್ತೆ ಸಹಾಯಹಸ್ತ ನೀಡುವ ಸಾಧ್ಯತೆ ಇಲ್ಲವಾಗುತ್ತದೆ.
ಕೃತಜ್ಞತೆ ಸೂಚಿಸಿದವರ ಬಗ್ಗೆ ನೀವು ಸಕಾರಾತ್ಮಕವಾದ ದೃಷ್ಟಿಕೋನವನ್ನು (ಭಾವನೆಯನ್ನು) ಬೆಳೆಸಿಕೊಳ್ಳುತ್ತೀರಿ. ಬಾಂಧವ್ಯದ ಗುಣಮಟ್ಟದಲ್ಲಿ ಸುಧಾರಣೆಯಾಗುತ್ತದೆ. ಮುಂದೆ ಇದು ನಿಮ್ಮ ಕೆಲಸದ ಮೇಲೆ ಸಕಾರಾತ್ಮಕವಾದ ಪರಿಣಾಮವನ್ನು ಬೀರುತ್ತದೆ.
- ನಿಮ್ಮ ಕಾಂಫ್ಲಿಮೆಂಟ್ ನೇರವಾಗಿ ಮತ್ತು ನಿರ್ದಿಷ್ಟವಾಗಿರಲಿ. ‘ಥ್ಯಾಂಕ್ ಯು’ ಎಂಬ ಅತಿಸಾಮಾನ್ಯವಾದ ಎರಡು ಶÜಬ್ದಗಳಲ್ಲಿ ನಿಮಗೆ ವಿಶೇಷವೇನೂ ಕಾಣಿಸುವುದಿಲ್ಲ. ಆದರೆ ಅದರಿಂದ ಎಷ್ಟೊಂದು ಕೆಲಸವಾಗುತ್ತದೆ ಎನ್ನುವುದು ಮುಖ್ಯವಾದ ಸಂಗತಿ ಅಲ್ಲವೇ?.
- ಕೃತಜ್ಞತೆ ಹೇಳಬೇಕೆನ್ನಿಸಿದ ತತ್‌ಕ್ಷಣ, ನೀವು ಕುಳಿತುಕೊಳ್ಳುವ ಸ್ಥಳದಿಂದ ಎದ್ದು, ನಿಮ್ಮ ಕೆಲಸಕ್ಕೆ ನೆರವಾದ ಆ ಸಹೋದ್ಯೋಗಿಯ ಬಳಿಗೆ ಹೋಗಿ, ‘ಥ್ಯಾಂಕ್ ಯು ’ ಎಂದು ಹೇಳಿ. ‘ಪ್ರಣವ್, ನನ್ನ ಪ್ರಸೆಂಟೇಷನ್‌ಗೆ ಸಂಬಂಧಿಸಿದಂತೆ ನಿನ್ನೆ ಸಹಾಯ ಮಾಡಿದ್ದಕ್ಕೆ ಧನ್ಯವಾದ. ತಡರಾತ್ರಿಯಾಗಿದ್ದರೂ ನನ್ನೊಡನೆ ಇದ್ದು, ಅದು ಫರ್ಫೆಕ್ಟ್ ಆಗುವಲ್ಲಿ ಸಹಕರಿಸಿದೆ. ನೀನು ಇಲ್ದಿದ್ರೆ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ’ – ಎಂದು ಪ್ರಾಮಾಣಿಕವಾಗಿ ಮತ್ತು ನೇರವಾಗಿ, ಹೇಳಬಹುದು.
- ಒಬ್ಬ ವ್ಯಕ್ತಿಯಾಗಿ, ನೇರವಾಗಿ ‘ಥ್ಯಾಂಕ್ ಯು’ ಹೇಳುವುದು ವೈಯಕ್ತಿಕವಾದರೂ ಪರಿಣಾಮಕಾರಿ ನಿಜ. ಇದನ್ನು ಸಾರ್ವಜನಿಕವಾಗಿಯೂ ಹೇಳಲು ಅವಕಾಶವಿದೆ. ನೆರವಾದವರನ್ನು ರೆಕಗ್ನೈಸ್ ಮಾಡುವುದಕ್ಕೆ ‘ಟೀಮ್ ಮೀಟಿಂಗ್’ ಸಮಂಜಸವಾದ ಸ್ಥಳ ಎನ್ನಬಹುದು. ಇದನ್ನು ತುಂಬ ಸಹಜವಾಗಿಯೇ ಹೇಳಲು ಸಾಧ್ಯ.‘ಈ ಸ್ಪರ್ಧೆಯಲ್ಲಿ ಇಡೀ ತಂಡವಾಗಿ ನೀವೆಲ್ಲರೂ ಕಷ್ಟಪಟ್ಟಿದ್ದಿರಿ. ಅದಕ್ಕಾಗಿ ಈ ಸಿಹಿ ಹಂಚುತ್ತಿದ್ದೇನೆ. ಅದರಲ್ಲಿಯೂ ಕೊನೆಯ ನಿಮಿಷಗಳಲ್ಲಿ ಪ್ರಣವ್ ಮಾಡಿದ ಸಹಾಯವನ್ನಂತೂ ಇಲ್ಲಿ ಸ್ಮರಿಸಲೇಬೇಕು’ ಎಂದು ಕೃತಜ್ಞತೆ ಸಲ್ಲಿಸಬಹುದು.
- ಈ ಮೇಲಿನ ಮೊದಲ ಉದಾಹರಣೆಯಲ್ಲಿ. ಸಾರ್ವಜನಿಕವಾಗಿ ಅಂತಹ ಮೆಚ್ಚುಗೆಯಿಂದ ಆ ಸಹೋದ್ಯೋಗಿಗೆ ತಾನು ವಿಶೇಷ ಎಂಬ ಭಾವನೆ ಮೂಡುತ್ತದೆ ಹಾಗೂ ಟೀಮ್‌ನಲ್ಲಿ ಆತನ/ ಆಕೆಯ ಮೌಲ್ಯ ಹೆಚ್ಚಲು ಕಾರಣವಾಗುತ್ತದೆ.
- ನಿಮ್ಮ ಟೀಮ್‌ನಲ್ಲಿಲ್ಲದ, ಯಾರಾದರೂ ಸಹೋದ್ಯೋಗಿ ನಿಮಗೆ ಸಹಾಯ ಮಾಡಿರಬಹುದು. ಆಗ ನೀವು, ಆತನ/ ಆಕೆಯ ಬಾಸ್‌ಗೆ ಇ- ಮೇಲ್ ಮಾಡಿ, ಅದರಲ್ಲಿ ಅವರ ನೆರವನ್ನು ಸ್ಮರಿಸಬಹುದು (ಅದರ ಒಂದು ಪ್ರತಿಯನ್ನು ಆ ಸಹೋದ್ಯೋಗಿಗೂ ಕಳುಹಿಸಿ). ಆಗ ಇದು ಬಾಸ್ ಮೂಲಕ ಇಡೀ ವಿಭಾಗಕ್ಕೆ ಗೊತ್ತಾಗುವ ಸಾಧ್ಯತೆ ಹೆಚ್ಚು.
ಈ ಜಗತ್ತು ನಡೆಯುವುದೇ ಇಂತಹ ಥ್ಯಾಂಕ್ಯೂ, ಸಾರಿ ಇತ್ಯಾದಿ ವಿನಮ್ರತೆಗಳಿಂದ. ನಮ್ಮ ಬಗ್ಗೆ ಇತರರಿಗೆ ಒಳ್ಳೆಯ, ಆತ್ಮೀಯ ಭಾವ ಮೂಡಿಸುವ ಇಂತಹ ಪದಗಳನ್ನು ಹೇಳಲು ಯಾವುದೇ ಹಿಂಜರಿಕೆ ಬೇಡ. ಇದರಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ. ಪಡೆದುಕೊಳ್ಳುವುದೇ ಹೆಚ್ಚು.


















Got a Questions?
Find us on Socials or Contact Us and we’ll get back to you as soon as possible.