ಗೂಗಲ್‌ ಆಡ್‌ಸೆನ್ಸ್‌ ಇದೀಗ ಕನ್ನಡ ಭಾಷೆಯಲ್ಲಿಯೂ ಲಭ್ಯ- ಕನ್ನಡ ಬ್ಲಾಗ್‌, ಸುದ್ದಿತಾಣಗಳಿಗೆ ಶುಭಸುದ್ದಿ

ಬಹುತೇಕ ಕನ್ನಡ ಆನ್‌ಲೈನ್‌ (ಬ್ಲಾಗ್‌, ಸ್ವಂತ ವೆಬ್ಸೈಟ್‌, ಸ್ವಂತ ಸುದ್ದಿ ಪೋರ್ಟಲ್)‌ ಬರಹಗಾರರಿಗೆ ಶುಭಸುದ್ದಿಯೊಂದಿದೆ. ಬಹುತೇಕರು ಕನ್ನಡಕ್ಕೆ ಆಡ್‌ಸೆನ್ಸ್‌ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ನಾನಂತೂ ಚಾತಕಪಕ್ಷಿಯಂತೆ ಕಾಯುತ್ತಿದ್ದೆ. ನನ್ನ ಇಂಗ್ಲಿಷ್‌ ವೆಬ್‌ ಸೈಟಿಗೆ ಪ್ರಾಯೋಗಿಕವಾಗಿ ಆಡ್‌ಸೆನ್ಸ್‌ ಅನುಮತಿ ಪಡೆದು ಅದನ್ನು ಆಫ್‌ ಮಾಡಿಟ್ಟಿದ್ದೆ. ಜೊತೆಗೆ ಆಡ್‌ಸೆನ್ಸ್‌ಗೆ ಸಂಬಂಧಪಟ್ಟ ಎಲ್ಲಾ ಸೆಟ್ಟಿಂಗ್‌ಗಳನ್ನು ಮಾಡಿ ಮುಗಿಸಿದ್ದೆ.

ನೀವೀಗ ಕನ್ನಡ ಭಾಷೆಗೆ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ನೀಡುತ್ತದೆಯೇ ಎಂದು ಗೂಗಲ್‌ ತಾಣಕ್ಕೆ ಹೋದರೆ ಅಲ್ಲಿ ನೀಡಲಾದ ಪಟ್ಟಿಯಲ್ಲಿ (ಜೂನ್‌ ೩ರವರೆಗೆ- ಈ ಲೇಖನ ಬರೆಯುತ್ತಿರುವಾಗ) ಕನ್ನಡದ ಹೆಸರು ಇಲ್ಲ. ಆದರೆ, ನಾನು ಕೆಲವು ದಿನದ ಹಿಂದೆಯೇ ನನ್ನ ಕರ್ನಾಟಕಬೆಸ್ಟ್‌.ಕಾಂಗೆ ಗೂಗಲ್‌ ಆಡ್‌ಸೆನ್ಸ್‌ ಅನುಮತಿ ದೊರಕಿಸಿಕೊಂಡಿದ್ದೇನೆ. ಮಾತ್ರವಲ್ಲದೆ ನಾನು ನಿರ್ಮಿಸಿಕೊಟ್ಟ ಕನ್ನಡದ ವಿವಿಧ ಸುದ್ದಿ ಪೋರ್ಟಲ್ ಗಳಿಗೆ (ಉದಾಹರಣೆಗೆ ಹೊಸಕನ್ನಡ.ಕಾಂ) ಆಡ್‌ಸೆನ್ಸ್‌ ಅನುಮತಿ ದೊರಕಿಸಲು ನೆರವಾಗಿದ್ದೇನೆ. ಕನ್ನಡ ಕಂಟೆಂಟ್‌ ಬರಹಗಾರರು ಒಂದಿಷ್ಟು ಗಳಿಕೆ ಮಾಡಲಿ ಎನ್ನುವುದು ನನ್ನ ಆಶಯ.

ನಿಮ್ಮಲ್ಲಿ ಬ್ಲಾಗ್‌ ಅಥವಾ ವೆಬ್‌ಸೈಟ್‌ ಇದೆಯೇ? ಬ್ಲಾಗ್‌ ಎಂದರೆ ಬ್ಲಾಗ್‌ಸ್ಪಾಟ್‌ ಅನ್ನು ಮಾತ್ರ ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ವರ್ಡ್‌ಪ್ರೆಸ್‌.ಕಾಂನ ಉಚಿತ ಬ್ಲಾಗ್‌ಗೆ ಆಡ್‌ಸೆನ್ಸ್‌ ಅನುಮತಿ ದೊರಕುವುದು ಸಂಶಯ. (ವರ್ಡ್‌ಪ್ರೆಸ್‌ ಬಗ್ಗೆ ನಾನು ಬರೆದ ಗೈಡನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ). ನಿಮ್ಮಲ್ಲಿ ವರ್ಡ್‌ಪ್ರೆಸ್‌.ಕಾಂನ ಉಚಿತ ಬ್ಲಾಗ್‌ ಇದ್ದರೆ ಅದಕ್ಕೆ ಡೊಮೈನ್‌ ಹೆಸರು ಜೋಡಿಸಿದ್ದರೆ (ಡೊಮೈನ್‌ ಮತ್ತು ಹೋಸ್ಟಿಂಗ್‌ ಖರೀದಿಗೆ ಸರ್ವರ್‌ ಹಗ್.ಕಾಂ ಅತ್ಯುತ್ತಮ) ಆ ತಾಣಕ್ಕೆ ಆಡ್‌ಸೆನ್ಸ್‌ ಅನುಮತಿ ದೊರಕಬಹುದು.

ಉಚಿತ ಬ್ಲಾಗ್‌ ತಾಣಗಳಿಗಿಂತ ಸ್ವಂತ ಡೊಮೈನ್‌ ಹೆಸರು ಮತ್ತು ಹೋಸ್ಟಿಂಗ್‌ ಖರೀದಿಸಿ ನಿರ್ಮಿಸಿದ ವೆಬ್‌ಸೈಟ್‌ಗಳಿಗೆ ಆಡ್‌ಸೆನ್ಸ್‌ ಹೆಚ್ಚು ಸೂಕ್ತ. ಯಾಕೆಂದರೆ ಗೂಗಲ್‌ ಜಾಹೀರಾತು ಆದಾಯ ಹೆಚ್ಚಿರುವುದು ಗೂಗಲ್‌ ಸರ್ಚ್‌ ಮೂಲಕ ಬರುವ ಪುಟ ವೀಕ್ಷಣೆಗಳಿಂದ. ಡೊಮೈನ್‌ ಹೆಸರು ಇರುವ ವೆಬ್‌ಸೈಟ್‌ಗಳು ಗೂಗಲ್‌ ಪುಟದಲ್ಲಿ ಉತ್ತಮ ರಾಕಿಂಗ್‌ ಪಡೆಯುತ್ತವೆ. ಹೀಗಾಗಿ ನಿಮಗೆ ಬರವಣಿಗೆಯ ಅಭ್ಯಾಸವಿದ್ದರೆ ಒಂದು ವೆಬ್‌ಸೈಟ್‌ ನಿರ್ಮಿಸಿಕೊಳ್ಳಿ. (ಇಲ್ಲಿ ಡೊಮೈನ್‌ ಮತ್ತು ಹೋಸ್ಟಿಂಗ್‌ ಖರೀದಿಸಿದ ಬಳಿಕ ವರ್ಡ್‌ಪ್ರೆಸ್‌ ಜೋಡಿಸಿಕೊಂಡು ಬ್ಲಾಗಿಂಗ್‌ ಅಥವಾ ಕಂಟೆಂಟ್‌ ಬರವಣಿಗೆ ಆರಂಭಿಸಬಹುದು.). ವರ್ಡ್‌ಪ್ರೆಸ್‌ನಲ್ಲಿ ಲಭ್ಯವಿರುವ ಉಚಿತ ಥೀಮ್‌ಗಳ ಮೂಲಕ ನೀವು ನೀವೇ ವೆಬ್‌ಸೈಟ್‌ ರೂಪಿಸಿಕೊಳ್ಳಬಹುದು. ವೃತ್ತಿಪರ ಅಥವಾ ಅತ್ಯುತ್ತಮ ವಿನ್ಯಾಸ ಬೇಕಿದ್ದರೆ ನನಗೆ ಕರೆ ಮಾಡಬಹುದು 😊 (ಇತ್ತೀಚೆಗೆ ನಾನು ಹಲವು ನ್ಯೂಸ್‌ವೆಬ್‌ಸೈಟ್‌ ಮತ್ತು ಬಿಸ್ನೆಸ್‌ ವೆಬ್‌ಸೈಟ್‌ಗಳನ್ನು ನಿರ್ಮಿಸಿದ ಅನುಭವದ ಆಧಾರದಲ್ಲಿ).

ನೀವೇ ಸ್ವಂತ ವೆಬ್‌ ವಿನ್ಯಾಸ ಕಲಿಯಬೇಕಿದ್ದರೆ ವರ್ಡ್‌ಪ್ರೆಸ್‌ ಮೂಲಕ ವೆಬ್‌ಸೈಟ್‌ ನಿರ್ಮಿಸುವುದು ಹೇಗೆ ಎನ್ನುವ ಸರಣಿ ಲೇಖನಗಳನ್ನು ಓದಬಹುದು. ಜ್ಞಾನವಿರುವುದು ಉಚಿತವಾಗಿ ಹಂಚಿಕೊಳ್ಳಲು ಎಂಬ ಮಾತಿನ ಸ್ಫೂರ್ತಿಯಿಂದ ನಾನು ಒಂದಿಷ್ಟು ಬ್ಲಾಗ್‌ ಮತ್ತು ವೆಬ್‌ಸೈಟ್‌ ಗೈಡ್‌ಗಳನ್ನು ಬರೆದು ಈ ತಾಣದಲ್ಲಿ ಪ್ರಕಟಿಸಿದ್ದೇನೆ. ಅದನ್ನು ಓದಬಹುದು. ಇರಲಿ, ಪೀಠಿಕೆ ಒಂದಿಷ್ಟು ಹೆಚ್ಚೇ ಬರೆದಿದ್ದೇನೆ. ಈಗ ಮುಖ್ಯ ವಿಷಯಕ್ಕೆ ಬರೋಣ.

ಕನ್ನಡ ಭಾಷೆಯ ವೆಬ್‌ ತಾಣಗಳಲ್ಲಿ ಆಡ್‌ಸೆನ್ಸ್

ಹೌದು ಕನ್ನಡ ತಾಣಗಳಿಗೂ ಆಡ್‌ಸೆನ್ಸ್‌ ಬೆಂಬಲ ನೀಡುತ್ತದೆ. ಇದನ್ನು ಗೂಗಲ್‌ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಕೊರೊನಾ ಮುಗಿದ ಬಳಿಕ ತನ್ನ ತಾಣದಲ್ಲಿ ಇದನ್ನು ಘೋಷಿಸಬಹುದು. ಆದರೆ, ಇಲ್ಲಿಯವರೆಗೆ ನಿಮ್ಮ ಭಾಷೆಗೆ ಬೆಂಬಲವಿಲ್ಲವೆಂದು ಒಂದೇ ಉಸಿರಿಗೆ ಅರ್ಜಿಗಳನ್ನು ಕಸದಬುಟ್ಟಿಗೆ ಹಾಕುತ್ತಿದ್ದ ಆಡ್‌ಸೆನ್ಸ್‌ ಇದೀಗ ಕನ್ನಡ ತಾಣಗಳಿಗೆ ಅನುಮತಿ ನೀಡುತ್ತಿದೆ. ಇತ್ತೀಚೆಗೆ ಕನ್ನಡದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೆಬ್ಸೈಟ್‌ಗಳು ರಚನೆಯಾಗುತ್ತಿವೆ. ಕೊರೊನಾ ರಜೆಯಲ್ಲಿಯಂತೂ ಇದರ ಸಂಖ್ಯೆ ಇನ್ನೂ ಹೆಚ್ಚಿದೆ. ಪ್ರತಿಯೊಬ್ಬರೂ ನ್ಯೂಸ್‌ ಪೋರ್ಟಲ್‌ ನಿರ್ಮಿಸಿಕೊಳ್ಳುತ್ತಿದ್ದಾರೆ. ಲಕ್ಷ ಜನರು ಬೇಕಿದ್ದರೆ ಈ ರೀತಿ ಸುದ್ದಿ ಪೋರ್ಟಲ್‌ ರಚಿಸಲಿ. ಆದರೆ, ಸತ್ಯ ಸುದ್ದಿಯನ್ನು ಮಾತ್ರ ನೀಡಲಿ ಎನ್ನುವುದು ನನ್ನ ಪ್ರಾಥನೆ.

ಗೂಗಲ್‌ ಆಡ್‌ಸೆನ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಗೂಗಲ್‌ ಆಡ್‌ಸೆನ್ಸ್‌ಗೆ ಯಾರೂ ಬೇಕಾದರೂ ಅರ್ಜಿ ಸಲ್ಲಿಸಬಹುದು. ನೀವು ಅಪ್ರಾಪ್ತರಾಗಿದ್ದರೆ ಮನೆಯ ಹಿರಿಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿ. ನಿಮ್ಮಲ್ಲಿ ಬ್ಲಾಗರ್‌ ಇದ್ದರೆ ಅದರ ಡ್ಯಾಷ್‌ಬೋರ್ಡ್‌ನಲ್ಲಿ ಅರ್ನಿಂಗ್ಸ್‌ ಅನ್ನುವ ಆಯ್ಕೆ ಇರುತ್ತದೆ. ಆದರೆ, ಸ್ವಂತ ವೆಬ್‌ಸೈಟ್‌ ಹೊಂದಿರುವವರು ಆಡ್‌ಸೆನ್ಸ್‌ಗೆ ಅರ್ಜಿ ಸಲ್ಲಿಸುವಾಗ ಒಂದಿಷ್ಟು ಟೆಕ್ನಿಕಲ್‌ ಕೆಲಸ ಮಾಡಬೇಕಾಗುತ್ತೆ.

ಗೂಗಲ್‌ ಆಡ್‌ಸೆನ್ಸ್‌ ವಿಚಾರದಲ್ಲಿ ಅವಸರವೇ ಅಪಾಯ. ಯಾಕೆಂದರೆ, ಗೂಗಲ್‌ ಆಡ್‌ಸೆನ್ಸ್‌ ತುಂಬಾ ಸೆನ್ಸಿಟೀವ್.‌ ಸಣ್ಣಪುಟ್ಟ ಕಾರಣಗಳಿಗೆ ನಿಮ್ಮ ಆಡ್‌ಸೆನ್ಸ್‌ ಖಾತೆ ಬ್ಲಾಕ್‌ ಆಗಬಹುದು. ನೀವು ಗಳಿಸಿದ ನೂರಾರು ಡಾಲರ್‌ ನಿಮ್ಮ ಕೈ ಸೇರದೆ ಇರಬಹುದು. ಇದಕ್ಕಾಗಿ ಆಡ್‌ಸೆನ್ಸ್‌ ಗೈಡ್‌ಲೈನ್‌ ಅನ್ನು ಕಡ್ಡಾಯವಾಗಿ ಓದಿಕೊಳ್ಳಿ. ಅವರ ರೂಲ್ಸ್‌ ಆಂಡ್‌ ರೆಗ್ಯುಲೇಷನ್‌ ಫಾಲೋ ಮಾಡದೆ ಇದ್ದರೆ ನಿಮ್ಮ ಆದಾಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಅರ್ಜಿ ಸಲ್ಲಿಸಬೇಕಿದ್ದರೆ ಮೊದಲಿಗೆ ನಿಮ್ಮಲ್ಲಿ ಗೂಗಲ್‌ ಖಾತೆ (ಜೀಮೆಲ್)‌ ಇರಬೇಕು. ನಂತರ ಈ ಲಿಂಕ್‌ಗೆ ಹೋಗಿ ಸೈನ್‌ಅಪ್‌ ಆಗಿ. ಅಲ್ಲಿ ಕೇಳಲಾದ ವಿವರ ನೀಡಿ. ನಿಮ್ಮ ವೆಬ್‌ಸೈಟ್‌ನ ಯುಆರ್‌ಎಲ್‌ ಅನ್ನು ನೀಡಿ. ತಕ್ಷಣ ನಿಮಗೆ ಒಂದು ಕೋಡ್‌ ದೊರಕುತ್ತದೆ. ಅದನ್ನು ಕಾಪಿ ಮಾಡಿಕೊಂಡು ನಿಮ್ಮ ವೆಬ್‌ಸೈಟ್‌ನ ಹೆಡ್‌ ಟ್ಯಾಗ್‌ಗೆ ಹಾಕಬೇಕು. ನೀವು ವರ್ಡ್‌ಪ್ರೆಸ್‌ ಬಳಕೆ ಮಾಡುತ್ತಿದ್ದರೆ ಇದಕ್ಕಾಗಿ ಹೆಡರ್‌ ಆಂಡ್‌ ಫೋಟರ್‌ ಕೋಡ್‌ ಇನ್ಸರ್ಟರ್‌ ರೀತಿಯ ಪ್ಲಗಿನ್‌ ಹಾಕಿಕೊಳ್ಳಬಹುದು. ನಿಗದಿತ ಸ್ಥಳದಲ್ಲಿ ಕೋಡ್‌ ಹಾಕಿದ ಬಳಿಕ ಆಡ್‌ಸೆನ್ಸ್‌ಗೆ ಹೋಗಿ ಪ್ರಕ್ರಿಯೆ ಪೂರ್ಣಗೊಳಿಸಿ. ನಿಮ್ಮ ಅರ್ಜಿ ಸಲ್ಲಿಕೆಯಾಗಿದೆ. ಇನ್ನು ಅವರ ಮಾರುತ್ತರಕ್ಕೆ ಕಾಯುವುದು ಸೂಕ್ತ.

ಒಂದೆರಡು ದಿನದಲ್ಲಿ ನಿಮಗೆ ಅನುಮತಿ ದೊರಕಬಹುದು. ಕೆಲವೊಮ್ಮೆ ವಾರ ಬೇಕಾಗಬಹುದು. ತಿಂಗಳೂ ಬೇಕಾಗಬಹುದು. ನನಗೆ ಅನುಮತಿ ಒಂದೇ ದಿನದಲ್ಲಿ ದೊರಕಿದೆ. ಅನುಮತಿ ದೊರಕದೆ ಇದ್ದರೆ ಅವಸರ ಮಾಡಬೇಡಿ. ನಿಮ್ಮ ವೆಬ್ಸೈಟ್‌ನಲ್ಲಿ ಏನೋ ತೊಂದರೆ ಇರಬಹುದು. ವೆಬ್ಸೈಟ್‌ನಲ್ಲಿ ನಿಮ್ಮ ಬಗ್ಗೆ, ಪ್ರೈವೇಸಿ, ಡಿಸ್ಕೈಮರ್‌ ಇತ್ಯಾದಿಗಳು ಇಲ್ಲದೆ ಇರಬಹುದು. ಕಂಟೆಂಟ್‌ ಸೂಕ್ತವಾಗಿಲ್ಲದೆ ಇರಬಹುದು. ಇಂತಹ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮತ್ತೆ ಅರ್ಜಿ ಸಲ್ಲಿಸಿ.

ಅನುಮತಿ ದೊರಕಿದರೆ ವೆಬ್‌ಸೈಟ್‌ಗೆ ಆಟೋ ಆಡ್‌ ಕೋಡ್‌ ಅಳವಡಿಸಿಕೊಳ್ಳಬಹುದು. ನಿಮಗೆ ಬೇಕಾದ ಸ್ಥಳಗಳಲ್ಲಿ ಆಡ್‌ ಕೋಡ್‌ಗಳನ್ನು ಹಾಕಬಹುದು. ಆಡ್‌ಸೆನ್ಸ್‌ ಕೋಡ್‌ ಅತಿಯಾಗಿ (ವೆಬ್‌ಸೈಟ್‌ನಲ್ಲಿ ಸಿಕ್ಕಸಿಕ್ಕಲ್ಲಿ ) ಬಳಸುವುದು ಸೂಕ್ತವಲ್ಲ.

ಆಡ್‌ಸೆನ್ಸ್‌ ಬಗ್ಗೆ ಹೇಳಲು ಇಷ್ಟೇ ಅಲ್ಲ. ಹತ್ತು ಡಾಲರ್‌ ಆದಾಗ ಅಡ್ರೆಸ್‌ ವೇರಿಫಿಕೇಷನ್‌, ಅವರು ಪೋಸ್ಟ್‌ನಲ್ಲಿ ಕಳುಹಿಸುವ ಕೋಡ್‌ ಅನ್ನು ಹಾಕುವ ಪ್ರಕ್ರಿಯೆ, ಬ್ಯಾಂಕ್‌ ಖಾತೆ ಜೋಡಣೆ (ಬಿಕ್‌ ಕೋಡ್‌ ಇತ್ಯಾದಿಗಳ ಬಳಕೆ) ಸೇರಿದಂತೆ ವಿವಿಧ ಕೆಲಸಗಳು ಇರುತ್ತವೆ. ಹೀಗಾಗಿ, ಕೆಲವರಿಗೆ ಈ ಪ್ರಕ್ರಿಯೆಗಳಿಂದ ತಲೆ ಕೆಟ್ಟು ಹೋಗಬಹುದು.

ನೆನಪಿಡಿ, ನಿಮ್ಮ ವೆಬ್‌ಸೈಟ್‌ ನಿರ್ಮಿಸಿ ಇನ್ನು ಆರು ತಿಂಗಳು ಆಗಿಲ್ಲದೆ ಇದ್ದರೆ ಅರ್ಜಿ ಸಲ್ಲಿಸದೆ ಇರುವುದು ಒಳ್ಳೆಯದು. ಒಂದೆರಡು ತಿಂಗಳ ವೆಬ್ಸೈಟ್ ಹೊಂದಿರುವರಂತೂ ಅರ್ಜಿ ಸಲ್ಲಿಸದೆ ಇರುವುದು ಒಳ್ಳೆಯದು. ಒಂದು ಹದಿನೈದು ಒಳ್ಳೆಯ ಕಂಟೆಂಟ್‌ ಮತ್ತು ಕನಿಷ್ಠ ಆರು ತಿಂಗಳು ಪ್ರಾಯ ಆಗಿರುವ ವೆಬ್‌ಸೈಟ್‌ ಮಾಲಿಕರು ನೀವಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ. ಶುಭವಾಗಲಿ.

ನಿಮ್ಮಲ್ಲಿ ಇನ್ನೂ ವೆಬ್‌ಸೈಟ್‌ ಇಲ್ಲದೆ ಇದ್ದರೆ, ವೃತ್ತಿಪರವಾಗಿ ವೆಬ್‌ಸೈಟ್‌ ನಿರ್ಮಿಸಲು ತಿಳಿಯದೆ ಇದ್ದರೆ ನನ್ನನ್ನು ಸಂಪರ್ಕಿಸಬಹುದು. ನಿಮಗೆ ಹೆಚ್ಚು ಹೊರೆಯಾಗದಂತೆ ನಿಮ್ಮ ಹೆಸರಲ್ಲಿ ಡೊಮೈನ್‌, ಹೋಸ್ಟಿಂಗ್‌ ಖರೀದಿಸಿ ನಿಮಗಾಗಿ ನೀವು ಬಯಸಿದಂತಹ ಸುಂದರ ವೆಬ್‌ಸೈಟ್‌ ನಿರ್ಮಿಸಿಕೊಡುತ್ತೇನೆ.

ಆಡ್‌ಸೆನ್ಸ್‌ ನಿಮ್ಮ ಆದಾಯ ಹೆಚ್ಚಿಸಲಿ.

error: Content is protected !!