ವಿಜ್ಞಾನಿ ಆಗುವುದು ಹೇಗೆ: ಕಲಿಕೆ ಮತ್ತು ತಯಾರಿ ಹೇಗಿರಬೇಕು?

By | 18/10/2019
how to become scientist

ಸಿ.ವಿ. ರಾಮನ್, ಎಪಿಜೆ ಅಬ್ದುಲ್ ಕಲಾಂ, ಶ್ರೀನಿವಾಸ ರಾಮನುಜನ್, ಹೋಮಿ ಜೆ. ಭಾಭಾ, ಸತೇಂದ್ರನಾಥ್ ಬೋಸ್, ವಿಕ್ರಂ ಸಾರಭಾಯಿ ಹೀಗೆ ಭಾರತ ಅನೇಕ ಪ್ರಶಿದ್ಧ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿದೆ. ನಿಮಗೂ ಭವಿಷ್ಯದಲ್ಲಿ ವಿಜ್ಞಾನಿಯಾಗಿ ಸಾಧಿಸುವ ಬಯಕೆ ಇರಬಹುದು. ಹೊಸತನ್ನು ಅನ್ವೇಷಣೆ ಮಾಡುವ ವಿಜ್ಞಾನಿಗೆ ಎಲ್ಲಿಲ್ಲದ ಗೌರವ.  ಈ ಹಿಂದಿನ ಅನ್ವೇಷಣೆಗಳನ್ನು ಆಧಾರವಾಗಿಟ್ಟುಕೊಂಡು ಅಥವಾ ಸಂಪೂರ್ಣ ಹೊಸದಾಗಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾರೆ. ನಿಮ್ಮ ಭವಿಷ್ಯದ ಕರಿಯರ್ ಅನ್ನು ವಿಜ್ಞಾನಿಯಾಗಿ ಬದಲಾಯಿಸಲು ಬಯಸಿದರೆ ವಿದ್ಯಾರ್ಥಿ ಜೀವನದಿಂದಲೇ ತಯಾರಿ ಆರಂಭಿಸಿ.

ಬಾಲ್ಯದಿಂದಲೇ ವಿಜ್ಞಾನಿಯಾಗುವ ಕನಸಲ್ಲಿ ಇದ್ದರೆ ಉತ್ತಮ. ಹೈಸ್ಕೂಲ್, ಪಿಯುಸಿ, ಕಾಲೇಜು ಹಂತದಲ್ಲಿ ವಿಶ್ಲೇಷಣಾತ್ಮಕವಾಗಿ ಮತ್ತು ವಿಭಿನ್ನವಾಗಿ ಚಿಂತಿಸುವ ಕೌಶಲವನ್ನು ಬೆಳೆಸಿಕೊಳ್ಳುವುದು ವಿಜ್ಞಾನಿಯಾಗಲು ಅತ್ಯಂತ ಅಗತ್ಯವಾಗಿದೆ. ನೀವು ಗಣಿತದಲ್ಲಿ ಎಷ್ಟು ಸಾಧ್ಯವೋ ಅಷ್ಟು ಪರಿಣತಿ ಪಡೆಯಬೇಕು. ಜೈವಿಕ ವಿಜ್ಞಾನದಲ್ಲಿಯೂ ಗಣಿತವನ್ನು ಹೆಚ್ಚು ಬಳಸಲಾಗುತ್ತದೆ. ನೀವು ಶಾಲಾ ಕಾಲೇಜು ದಿನಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿರಿ. ನಿಮ್ಮದೇ ಸ್ವಂತ ಪ್ರಾಜೆಕ್ಟ್‍ಗಳ ಮೂಲಕ ಎಲ್ಲರ ಗಮನಸೆಳೆಯಿರಿ. ವಿಜ್ಞಾನಿಯಾಗಬೇಕಾದರೆ ಮೊದಲು ಬೇಸಿಕ್ಸ್ ಕಲಿಯಿರಿ. ಜೀವಶಾಸ್ತ್ರ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಮೂಲ ವಿಷಯಗಳನ್ನು ಕಲಿಯಿರಿ. ಗಮನಿಸುವಿಕೆಯ ವೈಜ್ಞಾನಿಕ ವಿಧಾನಗಳು, ಊಹಾ ಸಿದ್ಧಾಂತಗಳು ಮತ್ತು ಪ್ರಯೋಗಗಳಲ್ಲಿ ತೊಡಗಿರಿ. ನೀವು ಯಾವುದಾದರೂ ವಿಶೇಷವಾದ ಕ್ಷೇತ್ರದಲ್ಲಿ ತಜ್ಞತೆ ಪಡೆಯಲು ಬಯಸಿದರೆ ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳಿಗೆ ಸೇರಿರಿ.

“ಯಶಸ್ಸು ಪಡೆಯಬೇಕಾದರೆ, ಯಶಸ್ಸಿನೆಡೆಗೆ ನಿಮ್ಮ ಆಕಾಂಕ್ಷೆಯು, ವೈಫಲ್ಯದ ಭಯಕ್ಕಿಂತ ಹೆಚ್ಚಿರಬೇಕು”

ಆಲ್ಬರ್ಟ್ ಐನ್‌ಸ್ಟೀನ್

ಒಂದೆರಡು ವಿದೇಶಿ ಭಾಷೆ ಕಲಿತರೆ ಉತ್ತಮ. ವಿಜ್ಞಾನ ನಿಯತಕಾಲಿಕೆಗಳನ್ನು ತಪ್ಪದೇ ಓದಿರಿ. ಭವಿಷ್ಯದಲ್ಲಿ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಚ್ಚಿಸುವಿರಿ ಎಂದು ನಿರ್ಧರಿಸಿರಿ. ವಿಜ್ಞಾನದ ವಿವಿಧ ಶಾಖೆಗಳಲ್ಲಿ ಯಾವುದನ್ನು ಆಯ್ದುಕೊಳ್ಳುವಿರಿ? ಅಗಣಿತ ತಾರಾಮಂಡಲಗಳಿರುವ ಅಂತರಿಕ್ಷವೇ? ವೈದ್ಯಕೀಯವೇ? ಮಾನಸಿಕ ವಿಜ್ಞಾನವೇ? ತಳಿವಿಜ್ಞಾನವೇ ಅಥವಾ ಕೃಷಿ ವಿಜ್ಞಾನವೇ? ನಿಮ್ಮ ಭವಿಷ್ಯ ಎಲ್ಲಿರಬೇಕು? ಏನನ್ನು ಅಧ್ಯಯನ ಮಾಡಬೇಕು? ಖಚಿತಪಡಿಸಿಕೊಳ್ಳಿ.

ನೀವು ವಿಜ್ಞಾನಿಯಂತೆ ಬರೆಯಲು ಕಲಿಯಬೇಕು. ಬರೆದು ನಿಮ್ಮ ಸಂಶೋಧನೆಯನ್ನು ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಬೇಕು. ಹೈಸ್ಕೂಲ್‍ನಲ್ಲಿ ಕಲಿತ ಇಂಗ್ಲಿಷ್ ಮತ್ತು ಕಾಲೇಜಿನಲ್ಲಿ ಕಲಿತ ತಾಂತ್ರಿಕ ಬರವಣಿಗೆಯ ಕೌಶಲವನ್ನು ಸೇರಿಸಿಕೊಂಡು ವಿಜ್ಞಾನ ಬರಹಗಳನ್ನು ಬರೆಯಿರಿ. ಇದಕ್ಕಾಗಿ ಸದಾ ವಿಜ್ಞಾನ ನಿಯತಕಾಲಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿರಿ. ವಿಜ್ಞಾನಿಯಾಗಬಯಸುವವರು ಕನಿಷ್ಠ ಸ್ನಾತಕೋತ್ತರ ಓದಿರಬೇಕು. ನಂತರ ನಿಮ್ಮ ಸಂಶೋಧನೆಗೆ ಸಂಬಂಧಪಟ್ಟ ವಿಭಾಗದಲ್ಲಿ ಸಂಶೋಧನಾ ಇಂಟರ್ನ್‍ಷಿಪ್ ಮಾಡಿರಿ. ಸ್ನಾತಕೋತ್ತರದ ಬಳಿಕ ಡಾಕ್ಟರೇಟ್ ಪ್ರೋಗ್ರಾಂಗಳಿಗೆ ಸೇರಿರಿ. ಇದು ನಿಮ್ಮನ್ನು ವಿಜ್ಞಾನಿಯಾಗಿ ಪರಿಪಕ್ವವಾಗಿಸಲು ಸಾಕಷ್ಟು ತರಬೇತಿ ಒದಗಿಸುತ್ತದೆ. ಪ್ರತಿದಿನ ಅಪ್‍ಡೇಟ್ ಆಗುತ್ತಿರಿ. ಸುಮಾರು ಒಂದು ದಶಕದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿರಬಹುದು. ಎಂದೋ ಓದಿದ ವಿಷಯಕ್ಕೆ ಅಂಟಿಕೊಂಡಿರಬೇಡಿ. ಇತ್ತೀಚಿನ ಬದಲಾವಣೆಗಳು, ಹೊಸ ಸಂಶೋಧನೆಗಳು, ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡಿರಿ.

ಸಂಶೋಧನೆ ಮುಂದುವರೆಸಿರಿ ಮತ್ತು ಪೂರ್ಣಕಾಲಿಕ ಉದ್ಯೋಗಕ್ಕೆ ಪ್ರಯತ್ನಿಸಿ. ವಿಜ್ಞಾನಿಗಳು ತಮ್ಮ ಪ್ರಾಜೆಕ್ಟ್ ಅಥವಾ ಐಡಿಯಾದ ಕುರಿತೇ ಕೆಲಸ ಮಾಡುತ್ತ ಇರುತ್ತಾರೆ. ನಿಮ್ಮ ಡಾಕ್ಟರೇಟ್ ಪದವಿ ಮುಗಿದ ಬಳಿಕ ನಿಮಗೊಂದು ಉದ್ಯೋಗದ ಅವಶ್ಯಕತೆ ಇರುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವಿರಾದರೆ ನಿಮಗೆ ಕಲಿಯಲು ಸಾಕಷ್ಟು ಅವಕಾಶ ಇರುತ್ತದೆ. ಬೋಧನೆ ಮತ್ತು ಸಂಶೋಧನೆಯನ್ನು ಜೊತೆಜೊತೆಯಾಗಿ ಮಾಡಬಹುದು. ಹೆಚ್ಚಿನ ವಿಜ್ಞಾನಿಗಳು ಯಾವುದಾದರೂ ಪ್ರಮುಖ ಕಂಪನಿಗಳಲ್ಲಿ ಅಥವಾ ಸರಕಾರದ ಜೊತೆ ಕೆಲಸ ಮಾಡುತ್ತಾರೆ. ಆರಂಭದಲ್ಲಿ ನೀವು ರಿಸರ್ಚ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸಬೇಕಾಗುತ್ತದೆ.

ವಿಜ್ಞಾನಿಯಾಗಬೇಕಾದರೆ ನಿಮ್ಮಲ್ಲಿ ಅನ್ವೇಷಣೆಯ ಮನೋಭಾವ ಇರಬೇಕು. ತಮ್ಮ ಸುತ್ತಮುತ್ತಲಿನ ಪ್ರತಿಯೊಂದು ಸಂಗತಿಗಳ ಕುರಿತು ಭಿನ್ನವಾದ ಕೌತುಕ ಹೊಂದಿರಬೇಕು. ಈ ಕೌತುಕವೇ ಅನ್ವೇಷಣೆಗೆ ದಾರಿಮಾಡಿಕೊಡುತ್ತದೆ. ವಿಜ್ಞಾನ ಎಂಬ ಕ್ಷೇತ್ರದಲ್ಲಿ ಕರಿಯರ್‍ನಲ್ಲಿ ಪ್ರಗತಿ ಕಾಣಲು ತಾಳ್ಮೆ ಮುಖ್ಯ ವಿಜ್ಞಾನಿಯಾಗುವುದು ಸುದೀರ್ಘ ಪ್ರಕ್ರಿಯೆ. ಪ್ರತಿನಿತ್ಯ ಕಲಿಯುತ್ತ ಇರುವುದು ಅಗತ್ಯ. ವಿಜ್ಞಾನಿಯಾಗುವ ನಿಮ್ಮ ಕನಸನ್ನು ಈಡೇರಿಸಿಕೊಳ್ಳಲು ಸತತ ಪ್ರಯತ್ನ ಅತ್ಯಂತ ಅಗತ್ಯ. ನಿಮ್ಮ ಸಂಶೋಧನೆಗಳು ಮನುಕುಲಕ್ಕೆ ಉಪಯೋಗವಾಗುವಂತೆ ಇರಲಿ.

ಇಸ್ರೊದಲ್ಲಿ ಉದ್ಯೋಗ ಪಡೆಯುವುದು ಹೇಗೆ?

3 thoughts on “ವಿಜ್ಞಾನಿ ಆಗುವುದು ಹೇಗೆ: ಕಲಿಕೆ ಮತ್ತು ತಯಾರಿ ಹೇಗಿರಬೇಕು?

  1. Pingback: ಇಸ್ರೊದಲ್ಲಿ ಉದ್ಯೋಗ ಪಡೆಯುವುದು ಹೇಗೆ? | ಕರ್ನಾಟಕ Best

  2. Pingback: ವೈಮಾನಿಕ ಎಂಜಿನಿಯರಿಂಗ್- ಶಿಕ್ಷಣ ಮತ್ತು ಕರಿಯರ್ ಹೇಗೆ? | ಕರ್ನಾಟಕ Best

  3. Pingback: ಆ್ಯಪ್ ಡೆವಲಪರ್‌ ಆಗುವುದು ಹೇಗೆ? | ಕರ್ನಾಟಕ Best

Leave a Reply

Your email address will not be published. Required fields are marked *