ವಿಮಾನ ಪೈಲೆಟ್ ಆಗುವುದು ಹೇಗೆ?

How to become pilot

ಪುಟ್ಟ ಲೋಹದ ಹಕ್ಕಿ ಆಕಾಶದಲ್ಲಿ ಹಾರಾಟ ನಡೆಸಿದಾಗ ಕಣ್ಣೆತ್ತಿ ನೋಡುವ ಅಭ್ಯಾಸ ನಿಮಗೂ ಇರಬಹುದು. ಒಮ್ಮೆಯೂ ವಿಮಾನಯಾನ ಮಾಡದವರಿಗೆ  ಆಕಾಶಯಾನ ಮಾಡಬೇಕೆಂಬ ಕನಸು ಮೂಡುತ್ತದೆ. ಇನ್ನಷ್ಟು ಮಹಾತ್ವಕಾಂಕ್ಷೆಯುಳ್ಳವರಿಗೆ ವಿಮಾನದ ಪೈಲೆಟ್ ಆಗಬೇಕೆಂಬ ಆಸೆಯೂ ಮೂಡಬಹುದು. ಬಸ್ ಚಾಲಕನ ಪಕ್ಕ ಕುಳಿತ ಮಕ್ಕಳು ಚಾಲಕನಾಗಬೇಕೆಂಬ ಕನಸು ಕಂಡರೆ ಅದು ಈಡೇರಬಹುದು. ಆದರೆ, ವಿಮಾನ ಪೈಲೆಟ್ ಆಗುವುದು ಸುಲಭವಲ್ಲ. ಹಾಗಂತ, ಅದು ಈಡೇರದ ಕನಸೇನೂ ಅಲ್ಲ!

ಈಗಲೂ ವಿಮಾನ ಪೈಲೆಟ್ ಅತ್ಯಾಕರ್ಷಕ ಉದ್ಯೋಗ. ಈ ಹುದ್ದೆ ನಿಮಗೆ ಸಮಾಜದಲ್ಲಿ ಅತ್ಯುನ್ನತ ಪ್ರತಿಷ್ಠೆ ಒದಗಿಸುತ್ತದೆ. ದೇಶದಲ್ಲಿ ಕೆಲವೇ ಸಂಖ್ಯೆಯಲ್ಲಿರುವ ಪೈಲೆಟ್‍ಗಳಲ್ಲಿ ನೀವೂ ಒಬ್ಬರಾಗಬಹುದು. ಇದೆಲ್ಲಕ್ಕಿಂತ ಪೈಲೆಟ್ ಉದ್ಯೋಗದ ಕುರಿತು ಆಕರ್ಷಣೆ ಹೆಚ್ಚಲು ಕಾರಣ ಅದರ ಆಕರ್ಷಕ ವೇತನ. ನಿಜ, ವಿಮಾನ ಪೈಲೆಟ್‍ಗಳಿಗೆ ಅತ್ಯುತ್ತಮ ಎನ್ನಬಹುದಾದಷ್ಟು ವೇತನ ದೊರಕುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸವಾಲಿನ ಉದ್ಯೋಗ ಮಾಡಬಯಸುವವರಿಗೆ, ಧೈರ್ಯಶಾಲಿಗಳಿಗೆ ಇದು ಅತ್ಯಂತ ಇಷ್ಟದ ಉದ್ಯೋಗ. ಆಕಾಶದಲ್ಲಿ ಮೋಡಗಳ ನಡುವೆ ಸಾಗುವ ಸಾಹಸಿ ಮನೋಭಾವವೇ ಈ ಉದ್ಯೋಗವನ್ನು ಇಷ್ಟಪಡಲು ಕಾರಣವಾಗುತ್ತದೆ.

ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಜಗತ್ತಿನ ಮೂರನೇ ಬೃಹತ್ ವೈಮಾನಿಕ ಮಾರುಕಟ್ಟೆಯಾಗುವ ಕನಸಿನಲ್ಲಿದೆ. ಪುರುಷರು ಮಾತ್ರವಲ್ಲದೇ ಮಹಿಳಾ ಪೈಲೆಟ್‍ಗಳಿಗೂ ಬೇಡಿಕೆಯಿದೆ. ಮುಂದಿನ 2 ದಶಕದಲ್ಲಿ ಏಷ್ಯಾಕ್ಕೆ 2,26,000 ಪೈಲೆಟ್‍ಗಳ ಅವಶ್ಯಕತೆ ಇದೆಯೆಂದು ಇತ್ತೀಚಿನ ವರದಿಯೊಂದು ಹೇಳಿದೆ.

ನೀವೂ ಸಹ ಪೈಲೆಟ್ ಆಗಲು ಬಯಸಿದರೆ ವಿದ್ಯಾರ್ಥಿದೆಸೆಯಲ್ಲಿಯೇ ಪ್ರಯತ್ನ ಆರಂಭಿಸಿ. ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಮುಗಿಸಿದ ನಂತರ ವಾಣಿಜ್ಯ ಪೈಲೆಟ್ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಿರಿ. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಉತ್ತಮ ಅಂಕ ಪಡೆದಿರಬೇಕು. ಪಿಯುಸಿ ಬಳಿಕ ದೇಶದಲ್ಲಿ ಲಭ್ಯವಿರುವ ಪೈಲೆಟ್ ತರಬೇತಿ ಸಂಸ್ಥೆಗಳಿಗೆ ಸೇರಬಹುದು. ಇಲ್ಲಿ ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮಥ್ರ್ಯ ಪರೀಕ್ಷೆ ನಡೆಸಿ ದಾಖಲಾತಿ ನಡೆಸಲಾಗುತ್ತದೆ. ಈ ಪರೀಕ್ಷೆ ಪಾಸ್ ಆದ ಬಳಿಕ ಅವರು ಹೇಳಿದಷ್ಟು ಲಕ್ಷ ಶುಲ್ಕ ಕಟ್ಟಿ ಸೇರಬೇಕು. ಮಹಾತ್ವಕಾಂಕ್ಷೆ ಇರುವವರು ಇದಕ್ಕಾಗಿ ಶೈಕ್ಷಣಿಕ ಸಾಲ ಇತ್ಯಾದಿಗಳನ್ನು ತೆಗೆದುಕೊಳ್ಳಬೇಕಾಗಬಹುದು.

ಕೆಲವು ಸರಕಾರಿ ವಿಮಾನ ಪೈಲೆಟ್ ತರಬೇತಿ ಸಂಸ್ಥೆಗಳಲ್ಲಿರುವ ಸೀಮಿತ ಸೀಟುಗಳನ್ನು ಹೊರತುಪಡಿಸಿ ಭಾರತದಲ್ಲಿಂದು ಪೈಲೆಟ್ ಲೈಸನ್ಸ್ ಕೋರ್ಸ್ ಕಲಿಕೆ ದುಬಾರಿಯಾಗಿ ಪರಿಣಮಿಸಿದೆ.

ಪೈಲೆಟ್ ತರಬೇತಿ ಪಡೆದ ಕೂಡಲೇ ನೀವು ವಿಮಾನ ಹಾರಾಟ ನಡೆಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಪೈಲೆಟ್ ಲೈಸನ್ಸ್ ಪಡೆಯಬೇಕು. ದೇಶದಲ್ಲಿಂದು ಮೂರು ರೀತಿಯ ಪೈಲೆಟ್ ಲೈಸನ್ಸ್ ಲಭ್ಯ ಇದೆ. ವಿದ್ಯಾರ್ಥಿ ಪೈಲೆಟ್ ಪರವಾನಿಗೆ, ಖಾಸಗಿ ಪೈಲೆಟ್ ಪರವಾನಿಗೆ ಮತ್ತು ಕಮರ್ಷಿಯಲ್ ಪೈಲೆಟ್ ಪರವಾನಿಗೆ ಎಂಬ ಮೂರು ಆಯ್ಕೆಗಳಿವೆ. ವಿದ್ಯಾರ್ಥಿಯಾಗಿದ್ದಾಗ ವಿಮಾನ ಹಾರಾಟ ನಡೆಸಲು ವಿದ್ಯಾರ್ಥಿ ಪೈಲೆಟ್ ಲೈಸನ್ಸ್ ಬೇಕಾಗುತ್ತದೆ. ಕಮರ್ಷಿಯಲ್ ಪೈಲೆಟ್ ಲೈಸನ್ಸ್ ದೊರಕಿದ ನಂತರ ವಿಮಾನ ಹಾರಾಟ ನಡೆಸಬಹುದು. ಬೆಂಗಳೂರಿನ ಜಕ್ಕೂರಿನಲ್ಲಿರುವ ಗವರ್ನ್‍ಮೆಂಟ್ ಫ್ಲೈಯಿಂಗ್ ಸ್ಕೂಲ್‍ನಲ್ಲಿ  ಕಮರ್ಷಿಯಲ್ ಮತ್ತು ಪ್ರೈವೇಟ್ ಪೈಲೆಟ್ ಲೈಸನ್ಸ್ ಪಡೆಯಬಹುದು. ಇಲ್ಲಿ ವರ್ಷಕ್ಕೆ ಸೀಮಿತ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಬಡ ವಿದ್ಯಾರ್ಥಿ ಪೈಲೆಟ್ ಆಗಬಹುದೇ?

ಈಗಾಗಲೇ ಹತ್ತಿಪ್ಪತ್ತು ಲಕ್ಷ ಶುಲ್ಕದ ವಿಷಯ ಕೇಳಿ ಬಡವರಾಗಿ ಹುಟ್ಟಿದ್ದೇ ತಪ್ಪು, ನಾವು ಪೈಲೆಟ್ ಆಗುವ ಕನಸು ಕಾಣುವಂತೆ ಇಲ್ಲವೆಂದು ಅಂದುಕೊಳ್ಳಬೇಡಿ. ಅವಕಾಶದ ಹುಡುಕಾಟ ಮತ್ತು ಪ್ರಯತ್ನಪಟ್ಟರೆ ಬಡ ವಿದ್ಯಾರ್ಥಿಯೂ ಪೈಲೆಟ್ ಆಗಬಹುದು. ಇದಕ್ಕಾಗಿ ವಾಯುಪಡೆ ನಡೆಸುವ (ಎನ್‍ಡಿಎ ಇತ್ಯಾದಿ) ಪರೀಕ್ಷೆ ಪಾಸಾಗಬೇಕು. ನೀವು ಸಾಮಾನ್ಯ ವಿಮಾನದ ಪೈಲೆಟ್ ಮಾತ್ರವಲ್ಲದೆ ಯುದ್ಧವಿಮಾನವನ್ನೇ ಆಕಾಶದಲ್ಲಿ ರೋಂಯ್ .. ಎಂದು ಹಾರಿಸಬಹುದು!

“ಬಹುತೇಕ ಜನರಿಗೆ ಆಕಾಶವೇ ಮಿತಿ. ಆದರೆ, ವೈಮಾನಿಕ ಕ್ಷೇತ್ರ ಇಷ್ಟಪಡುವವರಿಗೆ ಆಕಾಶವು ಮನೆ’’

– ಅನೊನ್

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.