ನಿಮ್ಮ ಜೊತೆಗೆ ಓದಿರುವ, ಜಸ್ಟ್ ಪಾಸ್ ಆಗುತ್ತಿದ್ದ ಸ್ನೇಹಿತನಿಗೆ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ದೊರಕಿದೆ. ನೀವು ಪದವಿ ಮುಗಿಸಿ ಒಂದು ವರ್ಷ ಕಳೆದರೂ ಉದ್ಯೋಗ ಪಡೆದಿಲ್ಲ, ಆದರೆ, ನಿಮ್ಮ ಜೂನಿಯರ್‌ಗಳಿಗೆ ಉದ್ಯೋಗ ಸಿಕ್ಕಿದೆ. ನೀವು ಹಲವು ಕಂಪನಿಗಳಿಗೆ ರೆಸ್ಯೂಂ ಕಳುಹಿಸಿದ್ದೀರಿ. ಲೆಕ್ಕವಿಲ್ಲದಷ್ಟು ಇಂಟರ್‌ವ್ಯೂಗಳನ್ನು ಅಟೆಂಡ್ ಆಗಿದ್ದೀರಿ. ಎಲ್ಲೆಡೆಯೂ ‘ಬೆಟರ್ ಲಕ್ ನೆಕ್ಸ್ಟ್ ಟೈಂ’ ಎಂಬ ಮಾತೇ ಕೇಳುತ್ತದೆ. ಯಾರೂ ಜಾಬ್ ನೀಡುತ್ತಿಲ್ಲ. ನಿಮಗೆ ಉದ್ಯೋಗ ದೊರಕದೆ ಇರಲು ಹತ್ತು ಹಲವು ಕಾರಣಗಳು ಇರಬಹುದು. ಆದರೆ, ಈ ಮುಂದಿನ ಅಂಶಗಳು ಕಾರಣಗಳಾಗದೆ ಇರುವಂತೆ ನೋಡಿಕೊಳ್ಳಿರಿ.
- ನಿರ್ದಿಷ್ಟವಾಗಿರದೆ ಇರುವ ಸಿವಿ
ಬೇರೆಬೇರೆ ಕ್ಷೇತ್ರಕ್ಕೆ ಬೇರೆ ಬೇರೆ ಬಗೆಯ ರೆಸ್ಯೂಂ ಮಾದರಿಗಳು ಇರುತ್ತವೆ. ನೀವು ರಚಿಸಿದ ರೆಸ್ಯೂಂ ಮಾದರಿಯು ನೀವು ಅರ್ಜಿ ಸಲ್ಲಿಸಿದ ಹುದ್ದೆಗೆ ಹೊಂದಾಣಿಕೆಯಾಗದೆ ಇರಬಹುದು. ಅದರಲ್ಲಿ, ಉದ್ಯೋಗದಾತರು ಬಯಸಿದ ಕೌಶಲ, ಶೈಕ್ಷಣಿಕ ಅರ್ಹತೆ, ಅನುಭವ ಇತ್ಯಾದಿ ಮಾಹಿತಿಗಳ ಜೋಡಣೆ ಸಮರ್ಪಕವಾಗಿರದೆ ಇರಬಹುದು. ನೀವು ಕೆಲಸ ಮಾಡಲು ಇಚ್ಚಿಸುವ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ರೆಸ್ಯೂಂ ಅಥವಾ ಸಿವಿಯನ್ನು ಸಿದ್ಧಪಡಿಸಿರಿ.
- ರೆಸ್ಯೂಂ ಗಮನಸೆಳೆಯುವಂತೆ ಇಲ್ಲ
ಉದ್ಯೋಗದಾತರಿಗೆ ಹಲವು ನೂರು ರೆಸ್ಯೂಂಗಳು ಬರುತ್ತವೆ. ಅವರ ಕಣ್ಣಿಗೆ ನಿಮ್ಮ ರೆಸ್ಯೂಂ ವಿಶೇಷವಾಗಿರುವಂತೆ ಕಾಣಿಸದೆ ಇರಬಹುದು. ಆದಷ್ಟು ಅತ್ಯುತ್ತಮವಾಗಿ ಮತ್ತು ವಿನೂತನವಾಗಿ ರೆಸ್ಯೂಂ ಬರೆದು ಕಳುಹಿಸಿರಿ.
- ಸಿದ್ಧತೆ ಇಲ್ಲದೆ ಇಂಟರ್‌ವ್ಯೂಗೆ ಹಾಜರು
ಸಾಕಷ್ಟು ಪ್ರತಿಭೆ ಇರುವ ಬಹುತೇಕ ಅಭ್ಯರ್ಥಿಗಳು ಸಂದರ್ಶನದ ವಿಷಯದಲ್ಲಿ ನರ್ವಸ್ ಆಗುತ್ತಾರೆ. ಬಹುತೇಕರು ಯಾವುದೇ ಸಿದ್ಧತೆ ನಡೆಸದೆ ಬಂದು ಸಂದರ್ಶಕರ ಮುಂದೆ ತಬ್ಬಿಬ್ಬಾಗುತ್ತಾರೆ. ಉದ್ಯೋಗ ಕ್ಷೇತ್ರಕ್ಕೆ ಸಂಬಂಧಪಟ್ಟ ಇತ್ತೀಚಿನ ಮಾಹಿತಿಗಳು ತಿಳಿಯದೆ ಇರುವುದು, ಕಂಪನಿಯ ವೆಬ್‌ಸೈಟ್‌ನಲ್ಲಿ ಕಂಪನಿಯ ಕುರಿತಾಗಿ ಇರುವ ಮಾಹಿತಿಗಳನ್ನು ಅಧ್ಯಯನ ಮಾಡದೆ ಇರುವುದು, ಅರ್ಜಿ ಸಲ್ಲಿಸಿದ ಉದ್ಯೋಗ ಏನು ಕೌಶಲ ಬಯಸುತ್ತದೆ ಎಂದು ತಿಳಿದುಕೊಳ್ಳದೆ ಇರುವುದು… ಹೀಗೆ ಹಲವು ವಿಷಯಗಳನ್ನು ಸಂದರ್ಶನಕ್ಕೆ ಬರುವ ಮೊದಲೇ ತಿಳಿದುಕೊಳ್ಳದೆ ಬಂದರೆ ಸಂದರ್ಶನದಲ್ಲ ವಿಫಲವಾಗುವ ಸಾಧ್ಯತೆ ಹೆಚ್ಚಿರುತ್ತದೆ. - ಉಡುಗೆ-ತೊಡುಗೆ ಆಕರ್ಷಕವಾಗಿಲ್ಲ
ನೀವು ಸಂದರ್ಶಕರಿಗೆ ಫಸ್ಟ್ ಇಂಪ್ರೆಷನ್ ಮೂಡಿಸುವಲ್ಲಿ ನಿಮ್ಮ ಉಡುಗೆತೊಡುಗೆ ಸಾಕಷ್ಟು ಕೊಡುಗೆ ನೀಡುತ್ತದೆ. ಆಯಾ ಕಂಪನಿಯ ಸಂಸ್ಕೃತಿಗಳನ್ನು ಗಮನದಲ್ಲಿಟ್ಟುಕೊಂಡು ನೀಟಾಗಿ ಡ್ರೆಸ್ ಮಾಡಿಕೊಂಡು ಸಂದರ್ಶನಕ್ಕೆ ಹೋಗಿ. ಆದಷ್ಟು ನಿಮ್ಮ ಉಡುಗೆ ತೊಡುಗೆ ವೃತ್ತಿಪರವಾಗಿರಲಿ.
- ವೃತ್ತಿಪರವಲ್ಲದ ವರ್ತನೆ
ಸಂದರ್ಶನದ ಸಮಯದಲ್ಲಿ ನಿಮ್ಮ ವರ್ತನೆಯು ವೃತ್ತಿಪರವಾಗಿರಬೇಕು. ನಿಮ್ಮ ವರ್ತನೆಯು ಆ ಕಂಪನಿಯ ಸಂಸ್ಕೃತಿಗೆ ಸೂಕ್ತವಾಗಿಲ್ಲವೆಂದು ಸಂದರ್ಶಕರಿಗೆ ಅನಿಸಿದರೆ ನೀವು ಅವಕಾಶವನ್ನು ಕಳೆದುಕೊಳ್ಳಬೇಕಾಗಬಹುದು. ಇದಕ್ಕಾಗಿ ನೀವು ಆಂಗಿಕ ಅಭಿನಯ ಮತ್ತು ಸಂದರ್ಶನ ಕೌಶಲಗಳನ್ನು ಕಲಿತುಕೊಳ್ಳಿ.
ವೆಬ್‌ಸೈಟ್ ವಿನ್ಯಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
- ನಿರುತ್ಸಾಹಿ
ಬಹುತೇಕ ಅಭ್ಯರ್ಥಿಗಳು ಸಂದರ್ಶನದಲ್ಲಿ ಸಪ್ಪೆ ಮುಖ ಮಾಡಿಕೊಂಡು ಇರುತ್ತಾರೆ. ನಿಮ್ಮಲ್ಲಿ ಕಂಪನಿಯ ಕುರಿತು, ಸಂದರ್ಶನದ ಕುರಿತು ಉತ್ಸಾಹ ಇರಬೇಕು. ಸಂದರ್ಶನದಲ್ಲಿ ಕೇಳಬಹುದಾದ ಒಂದಿಷ್ಟು ಪ್ರಶ್ನೆಗಳನ್ನು ಅಂದಾಜು ಮಾಡಿಕೊಂಡು ಅದಕ್ಕೆ ಹೇಗೆ ಉತ್ತರಿಸುವುದೆಂದು ಮನೆಯಲ್ಲಿಯೇ ಸಿದ್ಧತೆ ನಡೆಸಿಕೊಳ್ಳಿ.
- ಸುಳ್ಳು ಹೇಳುವುದು
ರೆಸ್ಯೂಂನಲ್ಲಿ ನೀವು ಯಾವುದಾದರೂ ವ್ಯಕ್ತಿಯ ಹೆಸರನ್ನು ರೆಫರೆನ್ಸ್ ಆಗಿ ನೀಡಿರಬಹುದು. ಆದರೆ, ಆ ರೆಫರೆನ್ಸ್ ಸಂಖ್ಯೆ ಅಸ್ತಿತ್ವದಲ್ಲಿ ಇರದೆ ಇರುವುದು, ಅಥವಾ ರೆಫರೆನ್ಸ್‌ನಲ್ಲಿ ತಿಳಿಸಿದ ವ್ಯಕ್ತಿಗೆ ನಿಮ್ಮ ಬಗ್ಗೆ ತಿಳಿಯದೆ ಇರುವುದು ಇತ್ಯಾದಿ ಅಂಶಗಳು ಉದ್ಯೋಗದಾತರಿಗೆ ನಿಮ್ಮ ಬಗ್ಗೆ ಇರುವ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ, ರೆಫರೆನ್ಸ್ ವಿಭಾಗದ ಕಡೆಗೂ ಗಮನ ನೀಡಿರಿ.
- ಫಾಲೊಅಪ್ ಮಾಡದೆ ಇರುವುದು
ಸಂದರ್ಶನ ಮುಗಿಸಿದ ನಂತರ ಕಂಪನಿಯ ಕಡೆಯಿಂದ ನಿಮಗೆ ಇಮೇಲ್ ಬರಬಹುದು. ಅದಕ್ಕೆ ಹೆಚ್ಚು ತಡಮಾಡದೆ ಉತ್ತರಿಸಿ. ಎಲ್ಲಾದರೂ ಇಮೇಲ್ ಬರದೆ ಇದ್ದರೂ, ಸಂದರ್ಶನಕ್ಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿ ಕಂಪನಿಗೊಂದು ಇಮೇಲ್ ಕಳುಹಿಸಿ. ಭವಿಷ್ಯದಲ್ಲಿ ನಿಮಗೆ ಅವಕಾಶ ನೀಡಲು ಈ ಸಂವಹನ ನೆರವಾಗಬಹುದು.̈
ಇದನ್ನೂ ಓದಿ: ಉದ್ಯೋಗ ಮತ್ತು ಸ್ಕಿಲ್ಸ್: ತಂತ್ರಜ್ಞಾನ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ಕೌಶಲಗಳು


















Got a Questions?
Find us on Socials or Contact Us and we’ll get back to you as soon as possible.