
ಸೇತುರಾಮ್ ನಾಟಕಗಳು ನನಗಿಷ್ಟ. ಅವರ “ಅತೀತ” ನಾಟಕವನ್ನು ರಂಗಶಂಕರದಲ್ಲಿ ನೋಡಿದ್ದೆ. ಕೆಲವೇ ಪಾತ್ರಗಳಾದರೂ ಇಡೀ ನಾಟಕಕ್ಕೆ ಇವರೇ ಪ್ರಮುಖ ಸೂತ್ರದಾರಿ. ಮಾತಿನಲ್ಲಿಯೇ ಮನಸ್ಸು ಮುಟ್ಟುತ್ತಿದ್ದ ಅವರ ನಟನೆ ಇಷ್ಟವಾಗಿತ್ತು.
ಇವರ “ನಾವಲ್ಲ” ಪುಸ್ತಕ ಓದಲು ಕುಳಿತರೂ ನಾಟಕದಲ್ಲಿ ಅವರೇ ಮಾತನಾಡಿದಂತೆ ಆಗುತ್ತಿತ್ತು. ಅತೀತದಲ್ಲಿ ಅವರ ಮಾತಿನ ಶೈಲಿ ಹೇಗಿತ್ತೋ, ಅವರ ಬರವಣಿಗೆಯ ಶೈಲಿಯೂ ಹಾಗೆಯೇ ಇದೆ. ಇತರರ ಬರವಣಿಗೆ ಶೈಲಿ ಅನುಕರಣೆಯೇ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ತನ್ನ ಸ್ವಂತ ಬರವಣಿಗೆ ಶೈಲಿ ಮೂಲಕ ಸೇತುರಾಮ್ ಇಷ್ಟವಾಗುತ್ತಾರೆ.
ಮೋಕ್ಷ ಎಂಬ ಕತೆಯಲ್ಲಿ ಒಂದು ಮಠ, ಮಠದ ಸ್ವಾಮೀಜಿಯೊಬ್ಬರ ಕತೆಯಿದೆ. ಮಠದ ಸುತ್ತಮತ್ತಲಿನ ರಾಜಕೀಯ ಸೇರಿದಂತೆ ಹಲವು ಸಂಗತಿಗಳನ್ನು ನಮ್ಮ ಮುಂದಿಡುತ್ತದೆ. ಮಗುವಾಗದೆ ಇರುವುದರಿಂದ ಕುಟುಂಬದವರ, ಗಂಡನ ತಾತ್ಸಾರಕ್ಕೆ ಈಡಾಗುವ ಮತ್ತು ಕೊನೆಗೆ ಮೌನಮುರಿದು ಬೆವರಿಳಿಸುವ “ಮೌನಿ” ಕತೆಯೂ ಹೃದಯತಟ್ಟುತ್ತದೆ. ಸ್ಮಾರಕ ಎಂಬ ಕತೆಯಲ್ಲಿ ಅಪ್ಪನೇ ಮಕ್ಕಳಿಗೆ ಆದರ್ಶವಾಗುವುದು ಮತ್ತು ಅಮ್ಮ ಮಾಡಿದ ತ್ಯಾಗ ಯಾರಿಗೂ ತಿಳಿಯದೇ ಹೋಗುವ ಸಂಗತಿಯನ್ನು ಹೇಳಲಾಗಿದೆ. ಸಲಿಂಗಕಾಮಿ ಗಂಡ, ಮುಗ್ಧ ಪ್ರೇಮಿ, ವಿಶೇಷ ಚೇತನ ಮಗ ಹೀಗೆ ವಿವಿಧ ವಿಷಯಗಳೊಂದಿಗೆ ಬದುಕಲಾಗದೆ ಬದುಕುವ ಕ್ಯಾತ್ಯಾಯಿನಿ ಕತೆ ಇನ್ನೊಂದು ರೀತಿಯಲ್ಲಿ ಮನಸ್ಸು ತಟ್ಟುತ್ತದೆ. ನಾವಲ್ಲ ಎಂಬ ಕಿರು ಕತೆಯಲ್ಲಿ ಏನಿಲ್ಲ, ಬರೀ ಬೋದನೆ, ಆಲಾಪ ಎಂದುಕೊಂಡು ಸುಮ್ಮನೆ ಓದುತ್ತ ಹೋದರೆ ಕೊನೆಗೆ ಬೆಚ್ಚಿಬೀಳಿಸುತ್ತದೆ.
ನಾವಲ್ಲ ಪುಸ್ತಕವನ್ನು ಆನ್ ಲೈನ್ ನಲ್ಲಿ ಖರೀದಿಸಬಹುದು.









Got a Questions?
Find us on Socials or Contact Us and we’ll get back to you as soon as possible.