ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆ !

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆ ಇಲ್ಲ ಎಂದು ಹೇಳಿದ ರಾಜ್ಯ ಸರಕಾರ, ಇದೀಗ ಆನ್ಲೈನ್ ನಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ.

ಪ್ರಥಮ ಪಿಯುಸಿ ಪರೀಕ್ಷೆ ಇಲ್ಲ ಎಂದ ಸರಕಾರ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುವುದನ್ನು ನಿಲ್ಲಿಸಿದ್ದರು‌. ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿಗೆ ಎರಡು ಮಾದರಿಯ ಪ್ರಶ್ನೆ ಪತ್ರಿಕೆ ರೂಪಿಸಿ ವೆಬ್‌ಸೈಟ್‌ ನಲ್ಲಿ ಬಿಡುಗಡೆ ಮಾಡಿದೆ. ಇದನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಂಡು ಉತ್ತರ ಬರೆದು ವಾಟ್ಸ್ ಅಪ್, ಇಮೇಲ್ ಅಂಚೆ ಮೂಲಕ ಉಪನ್ಯಾಸಕರಿಗೆ ಸಲ್ಲಿಸಬೇಕು. ಉಪನ್ಯಾಸಕರು ಇದನ್ನು ಮೌಲ್ಯ ಮಾಪನ ಮಾಡಿ ಸ್ಟೂಡೆಂಟ್ ಅಚೀವ್ ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ( ಎಸ್ ಎಟಿಎಸ್) ಅಪ್ ಲೋಡ್ ಮಾಡುವಂತೆ ಸೂಚಿಸಲಾಗಿದೆ.

ಮೊದಲ ಪ್ರಶ್ನೆ ಪತ್ರಿಕೆ ( ಅಸೈನ್ ಮೆಂಟ್) ಉತ್ತರಿಸಿ ವಿದ್ಯಾರ್ಥಿಗಳು ‌ಉಪನ್ಯಾಸಕರಿಗೆ ಸಲ್ಲಿಸಲು ಜೂ‌ನ್.20 ಕೊನೆಯ ದಿನವಾಗಿದೆ. ಜೂನ್ 25 ರೊಳಗೆ ಉಪನ್ಯಾಸಕರು ಮೌಲ್ಯಮಾಪನ ಮಾಡಬೇಕಾಗಿದೆ. ಇದೇ ರೀತಿ ಎರಡನೇ ಪತ್ರಿಕೆಯನ್ನು ಉತ್ತರಿಸಿ ಜೂನ್ 26 ರಿಂದ ಜುಲೈ 5 ರೊಳಗೆ ಸಲ್ಲಿಸಬೇಕು. ಉಪನ್ಯಾಸಕರು ಜುಲೈ 10 ರೊಳಗೆ ಮೌಲ್ಯಮಾಪನ‌ ಮಾಡಬೇಕು. ಎರಡು ಪರೀಕ್ಷೆಗಳ ಅಂಕಗಳ‌ ನವೀಕರಣವನ್ನು ಜುಲೈ 15 ರೊಳಗೆ ಮುಗಿಸಿ ಜುಲೈ 20 ರೊಳಗೆ ಎಸ್ ಎಟಿಎಸ್ ಗೆ ಅಪ್ ಲೋಡ್ ಮಾಡಬೇಕು. ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಕಡ್ಡಾಯವಾಗಿ ನೋಡಬೇಕು. ಪ್ರತಿ ಪತ್ರಿಕೆಗೆ 30 ರಂತೆ ಎರಡು ಪತ್ರಿಕೆಗೆ 60 ಅಂಕ ನೀಡಬೇಕು. ಆಂತರಿಕ ಮೌಲ್ಯಮಾಪನವಾಗಿ ಉಪನ್ಯಾಸಕರು 5 ಅಂಕಗಳನ್ನು ನೀಡಬೇಕು. ಪ್ರಯೋಗ ಸಹಿತ ವಿಷಯಗಳಿಗೆ ಪ್ರತ್ಯೇಕ ಅಂಕ ನೀಡಲು ಅವಕಾಶವಿದೆ. ಈ ಹಿಂದೆ ನಡೆದ ಪ್ರಾಯೋಗಿಕ ತರಗತಿಗಳ ಆಧಾರದ ಮೇಲೆ ನಿಷ್ಪಕ್ಷಪಾತವಾಗಿ ಅಂಕ ನೀಡಲು ಇಲಾಖೆ ಸೂಚಿಸಿದೆ.

error: Content is protected !!