ಉದ್ಯೋಗ ಮತ್ತು ಸ್ಕಿಲ್ಸ್‌: ತಂತ್ರಜ್ಞಾನ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ಕೌಶಲಗಳು

man wearing headset using laptop at the office
Photo by MART PRODUCTION on Pexels.com

ನೀವು ಕಾಲೇಜಿನಲ್ಲಿ ಓದುತ್ತಿರುವ ಸಮಯದಲ್ಲಿ ಹಲವು ವಿಷಯಗಳನ್ನು ಓದಿರಬಹುದು. ಆದರೆ, ಕಾಲೇಜು ಬಿಟ್ಟ ನಂತರ ಉದ್ಯೋಗಕ್ಕೆ ಸೇರಿದ ಬಳಿಕ ಅಲ್ಲಿ ಬೇರೆಯದ್ದೇ ಕೌಶಲವನ್ನು ಬಯಸಬಹುದು. ಇಂತಹ ಕೆಲವು ಸ್ಕಿಲ್‌ಗಳು ನೀವು ಕಾಲೇಜಿನಲ್ಲಿ ಓದುತ್ತಿರುವ ಸಮಯದಲ್ಲಿ ಅಸ್ತಿತ್ವದಲ್ಲಿ ಇಲ್ಲದೆಯೂ ಇದ್ದಿರಬಹುದು. ಕಾಲೇಜಿನಲ್ಲಿ ಕಷ್ಟಪಟ್ಟು ಕಲಿತ ಕೆಲವು ಟೆಕ್‌ ಸ್ಕಿಲ್‌ಗಳು ಇಂದು ಟೆಕ್‌ ಜಗತ್ತಿನಲ್ಲಿ ಅಸ್ತಿತ್ವದಲ್ಲಿ ಇಲ್ಲದೆಯೂ ಇರಬಹುದು. ಈಗ ಪ್ರತಿದಿನ ಹೊಸ ಕೌಶಲಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ಸದಾ ಅಪ್‌ಡೇಟ್‌ ಆಗುತ್ತಿರಬೇಕಾಗುತ್ತದೆ.
‘ಈಗಿನ ಯುವಜನಾಂಗವು ತಮ್ಮ ವಿದ್ಯಾಭ್ಯಾಸದ ಸಮಯದಲ್ಲೇ ಹೊಸ ಟೆಕ್‌ ಸ್ಕಿಲ್‌ ಕಲಿಯುತ್ತಾರೆ. ಇನ್ನು ಕೆಲವರು ಉದ್ಯೋಗಕ್ಕೆ ಸೇರಿದ ನಂತರ ಪಡೆದುಕೊಳ್ಳುತ್ತಾರೆ. ವಿಶೇಷವೆಂದರೆ, ಈಗಿನ ಕೆಲವು ಟೆಕ್‌ ಕೌಶಲಗಳು ವಿದ್ಯಾರ್ಥಿಗಳು ಓದುತ್ತಿರುವ ಯುನಿವರ್ಸಿಟಿಯ ಪಠ್ಯಕ್ರಮದಲ್ಲಿ ಇರುವುದಿಲ್ಲ. ಆನ್‌ಲೈನ್‌ನಲ್ಲಿ ಇತ್ತೀಚಿನ ಕೌಶಲಗಳು ಬೇಗ ದೊರಕುತ್ತವೆ’ ಎಂದು ಉದ್ಯೋಗ ಪರಿಣತರು ಹೇಳುತ್ತಾರೆ.

  • ಡೇಟಾ ಸೈನ್ಸ್‌: ಡೇಟಾ ಸೈಂಟಿಸ್ಟ್‌ ಎಂಬುದು ಈ ಶತಮಾನದ ಅತ್ಯಾಕರ್ಷಕ ಉದ್ಯೋಗವೆಂದು ಹಾರ್ವಡ್‌ ಬಿಸ್ನೆಸ್‌ ರಿವ್ಯೂ ಅಭಿಪ್ರಾಯಪಟ್ಟಿದೆ. ದೇಶದ ಪ್ರತಿ ವಲಯದಲ್ಲಿಯೂ ಈಗ ಡೇಟಾ ಸೈನ್ಸ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಉತ್ತಮ ವೇತನದ ಆಫರ್‌ ನೀಡುವ ಕೋರ್ಸ್‌ ಸಹ ಹೌದು.
  • ವೆಬ್‌ಸೈಟ್‌ ನಿರ್ಮಾಣ: ವೆಬ್‌ ಡೆವಲಪ್‌ಮೆಂಟ್‌ ಸಂಬಂಧಪಟ್ಟ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇಂತಹ ಕೋರ್ಸ್‌ಗಳನ್ನು ಕಲಿತರೆ ನೀವು ಬೇರೆ ಉದ್ಯೋಗದಲ್ಲಿದ್ದುಕೊಂಡು, ವಾರಾಂತ್ಯದಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ವೆಬ್‌ಸೈಟ್‌ ರಚಿಸಿ ಹಣ ಗಳಿಸಬಹುದಾಗಿದೆ. ಈಗ ಎಲ್ಲವೂ ಆನ್‌ಲೈನ್‌ಮಯವಾಗುತ್ತಿರುವುದರಿಂದ ಪ್ರತಿಯೊಬ್ಬ ವ್ಯವಹಾರಸ್ಥರೂ ವೆಬ್‌ಸೈಟ್‌ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಹೀಗಾಗಿ ವೆಬ್‌ಸೈಟ್‌ ನಿರ್ಮಿಸುವರಿಗೆ ಬೇಡಿಕೆ ಹೆಚ್ಚಾಗಿದೆ.
  • ಮೆಷಿನ್‌ ಲರ್ನಿಂಗ್‌: ಅತ್ಯುತ್ತಮ ಬೇಡಿಕೆ ಇರುವ ತಂತ್ರಜ್ಞಾನವಿದು ಕೌಶಲವಿದು. ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿ ನೀಡುವ ಮೆಷಿನ್‌ ಲರ್ನಿಂಗ್‌ ಕೋರ್ಸ್‌ಗೆ ಭಾರತದ ಆನ್‌ಲೈನ್‌ ಕಲಿಕಾ ತಾಣವೊಂದರಲ್ಲಿ ಪ್ರತಿದಿನ ಸರಾಸರಿ 140 ಜನರು ಸೇರುತ್ತಿದ್ದಾರೆ ಎನ್ನುವುದೇ ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
  • ಆರ್‌ ಪ್ರೋಗ್ರಾಮಿಂಗ್‌: ನೀವು ಖಂಡಿತವಾಗಿಯೂ ಕಲಿಯಲೇಬೇಕಾದ ಭವಿಷ್ಯದ ಪ್ರೋಗ್ರಾಮಿಂಗ್‌ ಭಾಷೆ ‘ಆರ್‌’ ಆಗಿದೆ. ಸಾಫ್ಟ್‌ವೇರ್‌ ಅಭಿವೃದ್ಧಿ, ಬಿಸ್ನೆಸ್‌ ಅನಾಲಿಸ್ಟ್‌, ಸ್ಟಟಿಸ್ಟಿಕಲ್‌ ರಿಪೋರ್ಟಿಂಗ್‌ ಮತ್ತು ಸೈಂಟಿಫಿಕ್‌ ರಿಸರ್ಚ್‌ ಸೇರಿದಂತೆ ವಿವಿಧ ವಿಭಾಗದಲ್ಲಿ ಈ ಕೋಡಿಂಗ್‌ ಭಾಷೆಯನ್ನು ಬಳಸಲಾಗುತ್ತಿದೆ. ಈಗ ಕೊರ್ಸೆರಾ ತಾಣದಲ್ಲಿ ದಿನಕ್ಕೆ 150 ಜನರು ಆರ್‌ ಪ್ರೋಗ್ರಾಮಿಂಗ್‌ ಕೋರ್ಸ್‌ಗೆ ದಾಖಲಾಗುತ್ತಿದ್ದಾರೆ.
  • ಪೈಥಾನ್‌ ಪ್ರೋಗ್ರಾಮಿಂಗ್‌: ನೀವು ಅಮೇಝಾನ್‌ ಇತ್ಯಾದಿ ಕಂಪನಿಗಳ ಉದ್ಯೋಗಾವಕಾಶಗಳ ಮಾಹಿತಿಯನ್ನು ನೋಡಿದರೆ ಅದರಲ್ಲಿ ‘ಪೈಥಾನ್‌ ಪ್ರೋಗ್ರಾಮರ್‌ಗಳು’ ಬೇಕೆಂಬ ಜಾಹೀರಾತುಗಳನ್ನು ನೋಡಬಹುದು. ಈಗಿನ ಆನ್‌ಲೈನ್‌ ಜಗತ್ತಿನಲ್ಲಿ ಪೈಥಾನ್‌ ಪ್ರೋಗ್ರಾಮಿಂಗ್‌ಗೆ ಬೇಡಿಕೆ ಹೆಚ್ಚಾಗಿದೆ. ಪ್ರೋಗ್ರಾಮರ್‌ ಆಗಬೇಕಾದವರು ಮೊದಲು ಕಲಿತಿರಬೇಕಾದ ಪ್ರೋಗ್ರಾಮಿಂಗ್‌ ಭಾಷೆ ಪೈಥಾನ್‌ ಎಂದು ಐಟಿ ಜಗತ್ತಿನ ತಜ್ಞರು ಅಭಿಪ್ರಾಯಪಡುತ್ತಾರೆ. ಭಾರತದ ಹಲವು ಕಂಪನಿಗಳು ಪೈಥಾನ್‌ ಪರಿಣತರನ್ನು ಹೆಚ್ಚು ಹೆಚ್ಚು ನೇಮಕ ಮಾಡಿಕೊಳ್ಳುತ್ತಿವೆ.
    ಮೊಬೈಲ್‌ ಡೆವಲಪ್‌ಮೆಂಟ್‌: ಈಗ ಬೇಡಿಕೆಯಲ್ಲಿರುವ ಪ್ರಮುಖ ಕೋರ್ಸ್‌ ಇದಾಗಿದೆ. ಜಗತ್ತಿನಲ್ಲಿ 250 ಕೋಟಿಗೂ ಹೆಚ್ಚು ಜನರು ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ವರ್ಷಕ್ಕೆ ಒಂದು ಹೊಸ ಫೋನ್‌ ಖರೀದಿಸುವವರೂ ಹೆಚ್ಚಾಗುತ್ತಿದ್ದಾರೆ. ಹೀಗಾಗಿ, ಮೊಬೈಲ್‌ ಅಭಿವೃದ್ಧಿಪಡಿಸುವವರಿಗೆ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಸಂಬಂಧಪಟ್ಟ ಕೌಶಲ ಕಲಿಯಲು ಆದ್ಯತೆ ನೀಡಿರಿ.
    ಎಸ್‌ಇಒ/ಎಸ್‌ಇಎಂ ಮಾರ್ಕೆಟಿಂಗ್‌: ಡಿಜಿಟಲ್‌ ಮಾರ್ಕೆಟಿಂಗ್‌ಗೆ ಸಂಬಂಧಪಟ್ಟಂತೆ ಎಸ್‌ಇಒ/ಎಸ್‌ಇಎಂ ಇತ್ಯಾದಿ ಇತ್ತೀಚಿನ ಕೌಶಲಗಳನ್ನು ಕಲಿಯಿರಿ.

ಕೆಲಸ ಮಾಡುತ್ತ ಕಲಿಯಿರಿ
ಉದ್ಯೋಗ ದೊರಕಿದೆ ಎಂದು ಓದುವುದನ್ನು, ಕಲಿಯುವುದನ್ನು ನಿಲ್ಲಿಸಿಬಿಡಬಾರದು. ಕೆಲಸದಲ್ಲಿ ಇರುವಾಗಲೇ ಬದಲಾಗುತ್ತಿರುವ ಹೊಸ ಕೌಶಲಗಳನ್ನು ಕಲಿಯಲು ಆದ್ಯತೆ ನೀಡಬೇಕು. ಈಗ ಆನ್‌ಲೈನ್‌ ಮುಖಾಂತರವೇ ಇಂತಹ ಕೋರ್ಸ್‌ಗಳಿಗೆ ಸೇರಿ, ಬಿಡುವಿನ ವೇಳೆಯಲ್ಲಿ ಕಲಿಯಬಹುದಾಗಿದೆ.

error: Content is protected !!