ಎಐ ಎಂದರೇನು? ಮನುಷ್ಯನ ಮೆದುಳಿನಂತೆ ಯೋಚಿಸುವ ಕೃತಕ ಬುದ್ಧಿಮತ್ತೆ ಬಗ್ಗೆ ತಿಳಿಯೋಣ

AI Explained in Kannada
Learn AI

ಈಗ ಎಲ್ಲೆಡೆ ಎಐ ಆವರಿಸಿಕೊಂಡಿದೆ. ಗೂಗಲ್‌ ಸರ್ಚ್‌ನಲ್ಲಿ ಮೊದಲೆಲ್ಲ ಹುಡುಕಾಟ ನಡೆಸಿದಾ ಸಾಕಷ್ಟು ವೆಬ್‌ಸೈಟ್‌ಗಳ ಲಿಂಕ್‌ಗಳು ದೊರಕುತ್ತಿದ್ದವು. ಈಗ ಗೂಗಲ್‌ನೊಳಗಿರುವ ಎಐಯು ಈ ಲಿಂಕ್‌ಗಳನ್ನು ತಾನೇ ಓದಿ ಅದರ ಸಾರಾಂಶವನ್ನ ಗೂಗಲ್‌ ಸರ್ಚ್‌ನ ಮೇಲ್ಬಾಗದಲ್ಲಿ ನೀಡುತ್ತಿದೆ. ಗೂಗಲ್‌ ಸರ್ಚ್‌ನಲ್ಲಿ ಈಗ ನಾರ್ಮಲ್‌ ಮೋಡ್‌ ಮತ್ತು ಎಐ ಮೋಡ್‌ ಎಂಬ ಎರಡು ವಿಭಾಗವಿದೆ. ನಾವು ಬಳಸುವ ಮೊಬೈಲ್‌, ನಾವು ಕೆಲಸ ಮಾಡುವ ಕಂಪನಿಗಳಲ್ಲಿ ಸೇರಿದಂತೆ ಎಲ್ಲೆಡೆ ಎಐ ಬಳಕೆ ಹೆಚ್ಚುತ್ತಿದೆ. ಎಐ ಕಾರಣದಿಂದ ಸಾಕಷ್ಟು ಜನರು ಉದ್ಯೋಗವನ್ನೂ ಕಳೆದುಕೊಳ್ಳುತ್ತಿದ್ದಾರೆ. ಜಗತ್ತಿನಲ್ಲಿ ಎಐ ಕ್ರಾಂತಿ ನಡೆಯುತ್ತಿದ್ದು, ಜಗತ್ತು ಹೊಸ ಬದಲಾವಣೆಯತ್ತ ಮುಖ ಮಾಡುತ್ತಿದೆ. ಓದುಗರಿಗೆ ಈಗಿನ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡುವ ಕರ್ನಾಟಕ ಬೆಸ್ಟ್‌ ಇದೀಗ ಎಐ ಕುರಿತು ಸರಣಿ ಲೇಖನಗಳನ್ನೇ ಬರೆಯುತ್ತಿದೆ. ಗಮನಸಿ: ಇದು ಎಐ ಮೂಲಕ ತಯಾರಿಸಿದ ಪಠ್ಯವಲ್ಲ. ನಾನೇ ಕುಳಿತು ಯೋಚಿಸಿ ಬರೆದಿರುವ ಲೇಖನಗಳು.

ಎಐ ಎಂದರೇನು?

ಡೆಫಿನೇಷನ್‌ ಅಥವಾ ವ್ಯಾಖ್ಯಾನ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಕೃತಕ ಬುದ್ಧಿಮತ್ತೆಗೆ ಸಂಕ್ಷಿಪ್ತವಾಗಿ ಎಐ ಎನ್ನುತ್ತಾರೆ. ಅಂದರೆ ಆರ್ಟಿಫಿಶಿಯಲ್‌ ಇಂಟಲಜೆನ್ಸ್‌. ಇದು ಮನುಷ್ಯರಂತೆ ಯೋಚಿಸಲು ಮತ್ತು ಕಲಿಯಲು ಪ್ರೋಗ್ರಾಮಿಂಗ್‌ ಮಾಡಲಾದ ಒಂದು ತಂತ್ರಜ್ಞಾನ. ಮನುಷ್ಯರು ಯೋಚಿಸಿ ಮಾಡುವ ಕೆಲಸವನ್ನು ಈ ಎಐ ಕಡ ಮಡಬಲ್ಲದು. ಇದು ಮನುಷ್ಯರಂತೆ ಕಲಿಯುತ್ತದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತದೆ. ನಿರ್ಧಾರ ತೆಗೆದುಕೊಳ್ಳುತ್ತದೆ. ಎಐ ಎಂದರೆ ಕೇವಲ ಎಐ ಅಲ್ಲ. ಇದರ ಹಿಂದೆ ಮುಂದೆ ಮೆಷಿನ್‌ ಲರ್ನಿಂಗ್‌ ಇತ್ಯಾದಿ ಸಾಕಷ್ಟು ಟೆಕ್‌ ವಿಭಾಗಗಳು ಇವೆ.

ಎಐ ದಿನನಿತ್ಯ ಎಲ್ಲಿ ಉಪಯೋಗವಾಗುತ್ತಿದೆ?

ಗೂಗಲ್‌ನಲ್ಲಿ ಏನಾದರೂ ಟೈಪ್‌ ಮಾಡಲು ಆರಂಭಿಸಿದಾಗಲೇ ಅದು ನಮಗೆ ಊಹಿಸಿ ಒಂದಿಷ್ಟು ವಾಕ್ಯಗಳನ್ನು ನೀಡುತ್ತದೆ. ಅಂದರೆ, ನೀವು ಏನು ಹುಡುಕುವಿರೋ ಎಂದು ಅದು ನಿಮಗಿಂತ ಮೊದಲೇ ಅಲ್ಲಿ ತಿಳಿಸುತ್ತದೆ. ಫೋನ್‌ನಲ್ಲಿ ಮೆಸೆಜ್‌ ಟೈಪ್‌ ಮಾಡುವಾಗ ಅದು ಮುಂದಿನ ಪದಗಳನ್ನು ಊಹಿಸುವುದನ್ನು ನೋಡಿರಬಹುದು. ಯೂಟ್ಯೂಬ್‌ನಲ್ಲಿ ನಿಮಗೆ ವಿವಿಧ ವಿಡಿಯೋಗಳನ್ನು ಶಿಫಾರಸು ಮಾಡುವುದು ಕೂಡ ಇದೇ ಎಐ. ಅಂದರೆ, ಇಂತಹ ಕೆಲಸವನ್ನು ಮನುಷ್ಯರು ಮಾಡುತ್ತಿಲ್ಲ. ಎಐ ಮಾಡುತ್ತದೆ. ಎಐ ಬದಲಿಗೆ ನಿಮಗೆ ಮನುಷ್ಯರು ಈ ರೀತಿಯ ಶಿಫಾರಸು ಮಾಡಿದರೆ ಹೇಗಿರುತ್ತದೆ. ಲಕ್ಷಾಂತರ ಜನರ ಆಲೋಚನೆಗಳಿಗೆ ತಕ್ಕಂತೆ ಲಕ್ಷಾಂತರ ಉದ್ಯೋಗಿಗಳು ಕುಳಿತು ಈ ರೀತಿ ವಿಡಿಯೋ ಶಿಫಾರಸು ಮಾಡಬೇಕಿತ್ತು.

ಎಐ ಅಂದರೆ ಸರಳವಾಗಿ ಈ ಮುಂದಿನತೆ ಹೇಳಬಹುದು. ಎಐ ಎಂದರೆ “ಕಂಪ್ಯೂಟರ್ ಅಥವಾ ಯಂತ್ರಗಳಿಗೆ ಮಾನವನಂತೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನೀಡುವುದು”.

ನೀವು ಗೂಗಲ್‌ನಲ್ಲಿ ನನ್ನ ಮನೆ ಸಮೀಪ ಇರುವ ರೆಸ್ಟೂರೆಂಟ್‌ಗಳು ಎಂದು ಹುಡುಕಿದರೆ ಅತ್ಯುತ್ತಮ ರೆಸ್ಟೂರೆಂಟ್‌ಗಳ ಪಟ್ಟಿ ದೊರಕುತ್ತದೆ. ಗೂಗಲ್‌ ಮ್ಯಾಪ್‌ ಬಳಸಿ ಸಾಗಿದಾಗ ಟ್ರಾಫಿಕ್‌ ವಿವರ ಇತ್ಯಾದಿಗಳು ದೊರಕುತ್ತದೆ. ನಿಮಗೆ ಗೊತ್ತೆ, ಬೆಂಗಳೂರು ಟ್ರಾಫಿಕ್‌ ಪೊಲೀಸರು ಕೂಡ ಎಐ ಮೂಲಕ ಜನರಿಗೆ ಟ್ರಾಫಿಕ್‌ ಫೈನ್‌ಗಳನ್ನು ಹಾಕುತ್ತಾರೆ. ಎಐ ತಂತ್ರಜ್ಞಾನ ಆಧರಿತ ವ್ಯವಸ್ಥೆಯು ವಾಹನಗಳ ದಟ್ಟಣೆ ನೋಡಿಕೊಂಡು ಸ್ವಯಂಚಾಲಿತವಾಗಿ ಎಐ ಟ್ರಾಫಿಕ್‌ ಲೈಟ್‌ಗಳನ್ನು ಆನ್‌ ಆಫ್‌ ಮಾಡುತ್ತದೆ.

ಇತ್ತೀಚೆಗೆ ನನ್ನ ಗೆಳೆಯರೊಬ್ಬರು ಹೇಳುತ್ತಿದ್ದರು. ಅವರ ಮಗಳು ಈಗ ಎಐನಲ್ಲಿ ಏನೆಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದಾಳಂತೆ. ನಾನು ಈ ವಿಷಯ ಓದಿದರೆ ಯಾವ ಉದ್ಯೋಗ ದೊರಕುತ್ತದೆ, ನಾನು ಈ ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಎಷ್ಟು ದಿನ ಬೇಕಾಗಬಹುದು. ನನಗೆ ಈ ಕೋರ್ಸ್‌ ಕಲಿಯಲು ಕಲಿಕಾ ಕ್ಯಾಲೆಂಡರ್‌ ರೆಡಿ ಮಾಡು… ಹೀಗೆ ಎಲ್ಲವನ್ನೂ ಎಐ ಮೂಲಕವೇ ಕೇಳುತ್ತಾ ಕಲಿಯುತ್ತಿದ್ದಾಳಂತೆ ಜಾಣೆ. ಈಗ ಎಐ ಮೂಲಕ ಸ್ಟೋರಿಗಳನ್ನು ಬರೆಯಬಹುದು. ವಿಡಿಯೋ ಸೃಷ್ಟಿಸಬಹುದು. ಗಿಬ್ಲಿ ಆರ್ಟ್‌ ಮಾಡಬಹುದು. ಅನುವಾದ ಮಾಡಬಹುದು. ಸಿರಿ, ಅಲೆಕ್ಸಾ, ಗೂಗಲ್‌ ವಾಯ್ಸ್‌ ಮೂಲಕ ನಿಮ್ಮ ಜತೆ ಮಾತನಾಡುತ್ತದೆ. ನಮ್ಮ ಫೋಟೋಗಳನ್ನು ಇನ್ನಷ್ಟು ಸುಂದರಗೊಳಿಸುತ್ತದೆ.

ಎಐ ಹೇಗೆ ಕೆಲಸ ಮಾಡುತ್ತದೆ?

ಮನುಷ್ಯರು ತನ್ನ ಅನುಭವ, ಓದು ಇತ್ಯಾದಿಗಳಿಂದ ಕಲಿಯಬಹುದು. ಆದರೆ, ಎಐ ಹೇಗೆ ಇಷ್ಟೆಲ್ಲ ಕಲಿಯುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಎಐಯು ಡಾಟಾ ಮೂಲಕ ಕಲಿಯುತ್ತದೆ. ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಡೇಟಾ ನೀಡಲಾಗಿರುತ್ತದೆ. ಅದರಲ್ಲಿರುವ ವಿಷಯಗಳ ಮೂಲಕ ಸ್ವಯಂ ಕಲಿಯಲು ತಿಳಿಸಲಾಗಿರುತ್ತದೆ. ಉದಾಹರಣೆಗೆ ಚಿತ್ರದಲ್ಲಿ ಇರುವುದು ನಾಯಿ ಎಂದು ತಿಳಿಯಲು ಅದಕ್ಕೆ ಸಾವಿರಾರು ಪ್ರಾಣಿಗಳ ಚಿತ್ರ ನೀಡಿರಬಹುದು. ಇದಕ್ಕೆ 1000 ನಾಯಿ ಮತ್ತು ಬೆಕ್ಕಿನ ಚಿತ್ರಗಳನ್ನು ತೋರಿಸಿದಾಗ ಅದು ಅದರ ಮಾದರಿಗಳನ್ನು ಗುರುತಿಸುತ್ತದೆ. ಅಂದರೆ, ಕಣ್ಣು, ಕಿವಿ, ಬಣ್ಣ, ಬಾಲ ಇತ್ಯಾದಿ ಮಾದರಿಗಳನ್ನು ಗುರುತಿಸುತ್ತದೆ. ಮುಂದಿನ ಬಾರಿ ನೀವು ಅದಕ್ಕೆ ಒಂದು ನಾಯಿಯ ಚಿತ್ರ ತೋರಿಸಿದರೆ ಅದು ತಕ್ಷಣವೇ ಅದನ್ನು ಗುರುತಿಸಿ “ಇದು ನಾಯಿ” ಎನ್ನುತ್ತದೆ. ಬೆಕ್ಕಿನ ಚಿತ್ರ ತೋರಿಸಿದರೆ ಇದು ಬೆಕ್ಕು ಎನ್ನುತ್ತದೆ. ಇದನ್ನು ಮೆಷಿನ್‌ ಲರ್ನಿಂಗ್‌ ಎನ್ನುತ್ತಾರೆ. ಮೆಷಿನ್‌ ಲರ್ನಿಂಗ್‌ ಎನ್ನುವುದು ಎಐನ ಭಾಗವಾಗಿದೆ.

ಮನುಷ್ಯ ಮತ್ತು ಎಐ ನಡುವಿನ ವ್ಯತ್ಯಾಸ

  • ಮನುಷ್ಯ ತನ್ನ ಜೀವನದಿಂದ ಕಲಿಯುತ್ತಾನೆ. ಎಐ ಡೇಟಾದಿಂದ ಕಲಿಯುತ್ತದೆ.
  • ಮನುಷ್ಯ ಸೃಜನಾತ್ಮಕವಾಗಿ ಯೋಚಿಸುತ್ತಾನೆ. ಎಐ ಮಾದರಿಗಳನ್ನು ಅನುಸರಿಸುತ್ತದೆ.
  • ಮನುಷ್ಯನಿಗೆ ಭಾವನೆಗಳು ಇರುತ್ತವೆ. ಎಐಗೆ ಭಾವನೆಗಳು ಇರುವುದಿಲ್ಲ. ಭಾವನೆ ಇರುವಂತೆ ನಾಟಕ ಮಾಡಬಹುದು.
  • ಮನುಷ್ಯನಿಗೆ ತನ್ನ ಕೆಲಸ ಕಾರ್ಯದಲ್ಲಿ ಸುಸ್ತಾಗಬಹುದು. ಆದರೆ, ಎಐ 24×7 ಕೆಲಸ ಮಾಡುತ್ತದೆ.
  • ಎಐ ನಮ್ಮಿಂದ ಕಲಿಯುತ್ತಾ ಮುಂದೆ ಹೋಗುತ್ತದೆ. ನಾವು ನಮ್ಮ ಜ್ಞಾನವನ್ನು ಎಐಗೆ ನೀಡಿ ಬಳಿಕ ಎಐನಿಂದಲೇ ನಮಗೆ ಬೇಕಾದ್ದನ್ನು ಕಲಿಯುತ್ತೇವೆ.

ಎಐ ಕೆಲಸ ಕಾರ್ಯಗಳನ್ನು ನೋಡುತ್ತಾ, ಅಣಕಿಸುತ್ತಾ ಕಾಲ ಕಳೆಯಬೇಡಿ. ಇದರ ಬದಲು ನಿಮ್ಮ ಭವಿಷ್ಯದ ಉದ್ಯೋಗಕ್ಕೆ ಪೂರಕವಾದ ಎಐ ಕೌಶಲಗಳನ್ನು ಕಲಿಯಲು ಗಮನ ನೀಡಿ.

error: Content is protected !!