ಗೂಗಲ್‌ ಸರ್ಚ್‌ನಲ್ಲಿ ಎಐ ಸಾರಾಂಶ, ವೆಬ್‌ಸೈಟ್‌ಗಳಿಗೆ ಆರ್ಗ್ಯಾನಿಕ್‌ ಟ್ರಾಫಿಕ್‌ ನಷ್ಟ; ಡಿಜಿಟಲ್‌ ಬರಹಗಾರರೇ ಎಚ್ಚೆತ್ತುಕೊಳ್ಳಿ

Google AI summary snippet tips
Google AI summary snippet

ಮೊದಲೆಲ್ಲ ಗೂಗಲ್‌ ಕೋರ್‌ ಅಪ್‌ಡೇಟ್‌ ಬಿಡುಗಡೆಯ ಕುರಿತು ಗೂಗಲ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದಾಗ ಎಸ್‌ಇಒ ತಜ್ಞರು, ಬ್ಲಾಗರ್‌ಗಳು, ವೆಬ್‌ಸೈಟ್‌ ಕಂಟೆಂಟ್‌ ಕ್ರಿಯೆಟರ್‌ಗಳು ಶ್ರದ್ಧೆಯಿಂದ ಗಮನಿಸುತ್ತಿದ್ದರು. ಈಗ ಗೂಗಲ್‌ ಹಂಚಿಕೊಳ್ಳುವ ಕೋರ್‌ ಅಪ್‌ಡೇಟ್‌ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳ ಕಾಮೆಂಟ್‌ ವಿಭಾಗದಲ್ಲಿ ಜನರ ಆಕ್ರೋಶ ಸ್ಪೋಟಗೊಂಡಿರುವುದು ಕಾಣಿಸುತ್ತಿದೆ. ಎಐ ಬಂದು ಎಲ್ಲವೂ ಹಾಳಾಯಿತು. ನೀವು ಆಗಾಗ ಕೋರ್‌ ಅಪ್‌ಡೇಟ್‌ ಮಾಡುತ್ತ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ಗೆ ಹೆಚ್ಚು ಜಾಗ ನೀಡಿ. ನಾವು ಕಂಟೆಂಟ್‌ ಕ್ರಿಯೆಟರ್‌ಗಳು ಆರ್ಗಾನಿಕ್‌ ಟ್ರಾಫಿಕ್‌ ಇಲ್ಲದೆ ಪರಿತಪಿಸುತ್ತಿದ್ದೇವೆ ಎಂದು ಪರಿತಪಿಸುತ್ತಿದ್ದಾರೆ.

ಏನಾಗುತ್ತಿದೆ ಸರ್ಚ್‌ನಲ್ಲಿ?

ಮೊದಲೆಲ್ಲ ಗೂಗಲ್‌ ಸರ್ಚ್‌ನಲ್ಲಿ ಏನಾದರೂ ಹುಡುಕಾಟ ನಡೆಸಿದರೆ ವಿವಿಧ ವೆಬ್‌ಸೈಟ್‌ಗಳ ಲಿಂಕ್‌ಗಳು ಕಾಣಿಸುತ್ತಿದ್ದವು. ಉತ್ತಮ ರಾಕಿಂಗ್‌ ಇದ್ದ ವೆಬ್‌ಸೈಟ್‌ ಸ್ಟೋರಿಗಳು ಮೊದಲ ಪುಟಗಳಲ್ಲಿ ಕಾಣಿಸುತ್ತಿದ್ದವು. ಈಗ ಗೂಗಲ್‌ನ ಎಐ ಲ್ಯಾಬ್‌ ಈ ಎಲ್ಲಾ ಕಂಟೆಂಟ್‌ಗಳನ್ನು ಓದಿ ಸಮ್ಮರಿ ನೀಡುತ್ತದೆ. ಪಕ್ಕದಲ್ಲಿ ವೆಬ್ಸೈಟ್‌ನ ಲಿಂಕ್‌ ನೀಡುತ್ತದೆ. ಆದರೆ, ಆ ಸಮ್ಮರಿ ಅಥವಾ ಸಾರಾಂಶದಲ್ಲಿಯೇ ಜನರಿಗೆ ಬೇಕಾದ್ದಷ್ಟು ವಿಷಯಗಳು ಇರುವುದರಿಂದ ಲಿಂಕ್‌ ಕ್ಲಿಕ್‌ ಮಾಡುವ ಗೋಜಿಗೆ ಹೆಚ್ಚಿನವರು ಹೋಗುವುದಿಲ್ಲ. ಇದರಿಂದ ವೆಬ್‌ಸೈಟ್‌ಗಳಿಗೆ ಆರ್ಗಾನಿಕ್‌ ಟ್ರಾಫಿಕ್‌ ದೊರಕುತ್ತಿಲ್ಲ. ಸಣ್ಣ ವೆಬ್‌ಸೈಟ್‌ಗಳಿಗೆ, ಬ್ಲಾಗರ್‌ಗಳಿಗೆ ಇದರಿಂದ ಹೆಚ್ಚು ತೊಂದರೆಯಾಗಿದೆ.

ಗೂಗಲ್‌ನಂತಹ ಸರ್ಚ್‌ ಎಂಜಿನ್‌ಗಳು ಇಡೀ ಸರ್ಚ್‌ ಜಗತ್ತನ್ನು ಆಳುತ್ತಿರುವುದರಿಂದ ವೆಬ್‌ಸೈಟ್‌ಗೆ ಹಣ ಮತ್ತು ಶ್ರಮ ಹೂಡಿಕೆ ಮಾಡಿದವರಿಗೆ ಪ್ರಯೋಜನ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ನ್ಯೂಸ್‌ ವೆಬ್‌ಸೈಟ್‌ಗಳಲ್ಲಿ ಜಾಬ್‌ ಕಟ್‌ ಪರ್ವ ನಡೆಯುತ್ತಿದೆ. ಗೂಗಲ್‌ನ ಎಐ ಸ್ನಿಪ್ಪೆಟ್‌ನಲ್ಲಿ ಜನರು ಎಲ್ಲಾ ಮಾಹಿತಿ ಪಡೆಯುವುದರಿಂದ ಕಷ್ಟಪಟ್ಟು ಕಂಟೆಂಟ್‌ ಬರೆದವರ ಲಿಂಕ್‌ ಅನ್ನು ಯಾರೂ ಕ್ಲಿಕ್‌ ಮಾಡುತ್ತಿಲ್ಲ. ವೆಬ್‌ಸೈಟ್‌ ಅನ್ನು ಯಾರಾದರೂ ಕ್ಲಿಕ್‌ ಮಾಡಿದರೆ ಅಲ್ಲಿರುವ ಜಾಹೀರಾತುಗಳಿಂದ ಕೊಂಚ ಹಣ ಬರುತ್ತದೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಇದರಿಂದ ಬೇಸರವಾಗುವುದು ಸಹಜ. ಆರ್ಗ್ಯಾನಿಕ್‌ ಟ್ರಾಫಿಕ್‌ ತಪ್ಪಿ ಹೋಗಿರುವುದರಿಂದ ಸಾಕಷ್ಟು ವೆಬ್‌ಸೈಟ್‌ಗಳಿಗೆ ಆಗಮಿಸುವ ಯೂಸರ್ಸ್‌ಗಳ ಪ್ರಮಾಣದಲ್ಲಿ ಗಣನೀಯ ಏರುಪೇರು ಆಗುತ್ತಿದೆ. ಕೆಲವು ದಿನ ಸಾಕಷ್ಟು ಜನರು ಆಗಮಿಸಿದರೆ, ಇನ್ನು ಕೆಲವು ಸಮಯ ಕಡಿಮೆ ಸಂಖ್ಯೆಯಲ್ಲಿ ಯೂಸರ್ಸ್‌ ಆಗಮಿಸುತ್ತಾರೆ. ಅಂಗಡಿ ತೆರೆದಿಟ್ಟು ಕಸ್ಟಮರ್‌ ಬಾರದೆ ಹೇಗೆ ಆಗುತ್ತದೆಯೋ ಅದೇ ರೀತಿಯ ಪರಿಸ್ಥಿತಿಯನ್ನು ಕಂಟೆಂಟ್‌ ಕ್ರಿಯೆಟ್‌ ಮಾಡುವ ವೆಬ್‌ಸೈಟ್‌ಗಳು ಅನುಭವಿಸುತ್ತಿವೆ.

Google AI Search Example in Kannada

Photo Caption: ಮೇಲಿನ ಚಿತ್ರ ಗಮನಿಸಿ. ಇಲ್ಲಿ ಎಐ ಎಂದರೇನು ಎಂದು ಗೂಗಲ್‌ ಸರ್ಚ್‌ ಮಾಡಲಾಗಿದೆ. ಕನ್ನಡಲ್ಲಿ ಚಂದದ ಗೂಗಲ್‌ ಸ್ನಿಪ್ಪೆಟ್‌ ಬಂದಿದೆ. ಅದರ ಪಕ್ಕದಲ್ಲಿ ಎರಡು ಲಿಂಕ್‌ಗಳು ಕಾಣಿಸುತ್ತವೆ. ಕನ್ನಡ ಮಾಹಿತಿಗೆ ಅದು ಇಂಗ್ಲಿಷ್‌ ವೆಬ್‌ಸೈಟ್‌ ಅನ್ನು ಅನುವಾದ ಮಾಡಿಕೊಂಡು ನೀಡಿದೆ. ಅದೇ ಸ್ನಿಪ್ಪೆಟ್‌ನ ಕೆಳಭಾಗದಲ್ಲಿ ಮೂಲ ಕನ್ನಡದಲ್ಲಿಯೇ ಬರೆದಿರುವ ಲಿಂಕ್‌ ಇದೆ. ಅತ್ಯುತ್ತಮ ಎಸ್‌ಇಒ ಏಕೆ ಅಗತ್ಯ ಎನ್ನುವುದಕ್ಕೆ ಇದು ಉದಾಹರಣೆ.

ಗೂಗಲ್‌ ಪ್ರಕಾರ ಇದು ಕೇವಲ ಸೋಲಿನ ಕಥೆಯಲ್ಲ. ಇದರಲ್ಲಿ ಯಶಸ್ಸಿನ ಕಥೆಯೂ ಇದೆಯಂತೆ. ವೆಬ್‌ಸೈಟ್‌ಗೆ ಗುಣಮಟ್ಟದ ಟ್ರಾಫಿಕ್‌ ಬರಲು ಇದು ನೆರವಾಗುತ್ತದೆ ಎಂದು ಹೇಳುತ್ತಾ ಬಂದಿದೆ. ಎಐ ನೀಡುವ ಸಮ್ಮರಿಯನ್ನು ಹೊರತುಪಡಿಸಿ ಇನ್ನಷ್ಟು ವಿಷಯವನ್ನು ತಿಳಿಯಲು ಬಯಸುವ ಯೂಸರ್‌ ಖಂಡಿತಾವಾಗಿಯೂ ನಿಮ್ಮ ವೆಬ್‌ಸೈಟ್‌ ಅನ್ನು ಕ್ಲಿಕ್‌ ಮಾಡುತ್ತಾರೆ. ಇದರಿಂದ ನಿಮಗೆ ಹೆಚ್ಚು ಗುಣಮಟ್ಟದ ಟ್ರಾಫಿಕ್‌ ದೊರಕುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಹೆಚ್ಚು ಗುಣಮಟ್ಟದ, ಆಳವಾದ, ಸಾಕಷ್ಟು ರಿಸರ್ಚ್‌ ಮಾಡಿರುವ ಆರ್ಟಿಕಲ್‌ ಬರೆಯಿರಿ ಎಂದು ಗೂಗಲ್‌ ಹೇಳುತ್ತಾ ಬಂದಿದೆ. ಆದರೆ, ಇದು ಸಾಕಷ್ಟು ಕಂಟೆಂಟ್‌ ಕ್ರಿಯೆಟರ್‌ಗಳಿಗೆ ಸವಾಲು ತಂದಿರುವ ವಿಷಯ.

ಇದನ್ನೂ ಓದಿ: ಎಐ ಎಂದರೇನು? ಮನುಷ್ಯನ ಮೆದುಳಿನಂತೆ ಯೋಚಿಸುವ ಕೃತಕ ಬುದ್ಧಿಮತ್ತೆ ಬಗ್ಗೆ ತಿಳಿಯೋಣ

ಈ ಸಮಯದಲ್ಲಿ ಏನು ಮಾಡಬಹುದು?

ಗೂಗಲ್‌ ಎಐಗೆ ಆಳವಾದ, ವಿಶ್ಲೇಷಣಾತ್ಮಕ, ಉತ್ತಮ ಗುಣಮಟ್ಟದ ಕಂಟೆಂಟ್‌ ಬೇಕು. ಮುಖ್ಯವಾಗಿ ಮನುಷ್ಯರು ತಯಾರಿಸಿದ ತಪ್ಪಿಲ್ಲದ ಕಂಟೆಂಟ್‌ ಬೇಕು. ಸಾಕಷ್ಟು ರಿಸರ್ಚ್‌ ಮಾಡಿ ಬರೆದ ಕಂಟೆಂಟ್‌ ಬೇಕು. ಚಾಟ್‌ಜಿಪಿಟಿ, ಜೆಮಿನಿ ಇತ್ಯಾದಿಗಳು ಮಾಹಿತಿಯನ್ನು ನೀಡಬಹುದು. ಮನುಷ್ಯರಂತೆ ವೈಯಕ್ತಿಕ ಅನುಭವ, ತಜ್ಞರಂತೆ ಮಾಹಿತಿಗಳನ್ನು ಕ್ರೋಡೀಕರಿಸಿ ವಿಷಯ ತಿಳಿಸಲು ಅದಕ್ಕೆ ಸಾಧ್ಯವಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ಕಂಟೆಂಟ್‌ಗೆ ಆದ್ಯತೆ ನೀಡಬೇಕು.

ಗೂಗಲ್‌ ಸದಾ E-E-A-T ಮಂತ್ರ ಪಠಿಸುತ್ತಿದೆ. ಅಂದರೆ ಕಂಟೆಂಟ್‌ನಲ್ಲಿ Experience, Expertise, Authoritativeness, and Trustworthiness (E-E-A-T) ಇರಬೇಕು ಎಂದು ಅದು ಹೇಳುತ್ತದೆ. ನೀವು ಬರೆಯುವ ಬರಹದಲ್ಲಿ ಅನುಭವ, ಪರಿಣತಿ, ವಿಶ್ವಾಸಾರ್ಹತೆ ಇತ್ಯಾದಿಗಳು ಇರಬೇಕು ಎಂದು ಹೇಳುತ್ತದೆ.
ಇದೇ ಸಮಯದಲ್ಲಿ ಎಐಗಿಂತ ಭಿನ್ನವಾಗಿ ಯೋಚಿಸಿ ಬರೆಯುವ ಅವಶ್ಯಕತೆ ಇದೆ. ಎಐ ಕಂಟೆಂಟ್‌ ನೀಡುತ್ತದೆ ಎಂದು ನಿಮ್ಮ ಕಂಟೆಂಟ್‌ನಲ್ಲಿ ಎಐ ಕಂಟೆಂಟ್‌ಗಳನ್ನು ತುಂಬಿಸಬೇಡಿ. ಲಾಂಗ್‌ ಟೇಲ್‌ ಅಥವಾ ಉದ್ದ ಬಾಲದ ಕೀವರ್ಡ್‌ ಕೆಲವು ಇರಲಿ. ನಿಮ್ಮ ಕಂಟೆಂಟ್‌ಗೆ ನಿರ್ದಿಷ್ಟವಾಗಿರುವ ಕೀವರ್ಡ್‌ಗಳನ್ನು ಬಳಸಿ.

ಸ್ಟ್ರಕ್ಚರಲ್‌ ಮತ್ತು ಟೆಕ್ನಿಕಲ್‌ ವಿಷಯಗಳು

ಈಗ ಯಾರು ಬೇಕಾದರೂ ವೆಬ್‌ಸೈಟ್‌ ನಿರ್ಮಿಸಬಹುದು. ಯಾರು ಬೇಕಾದರೂ ಕಂಟೆಂಟ್‌ ಬರೆಯಬಹುದು. ಆದರೆ, ಈ ಕಾಲಕ್ಕೆ ತಕ್ಕಂತೆ ಕಂಟೆಂಟ್‌ ಬರೆಯುವ ಛಾತಿ ಎಲ್ಲರಿಗೂ ಇದೆ ಎಂದು ಹೇಳಲಾಗದು. ಮೊದಲು ಸರ್ಚ್‌ ಎಂಜಿನ್‌ ಕೆಲವು ಅಲ್ಗಾರಿದಮ್‌ಗಳಿಗೆ ಅರ್ಥವಾಗುವಂತೆ ಬರೆದರೆ ಸಾಕಿತ್ತು. ಈಗ ಸರ್ಚ್‌ ಎಂಜಿನ್‌ನಲ್ಲಿರುವ ಎಐಗೂ ಅರ್ಥವಾಗುವಂತೆ ಬರೆಯುವ ಅಗತ್ಯವಿದೆ.

ಎಐಗೆ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಹೆಡ್ಡಿಂಗ್‌ಗಳು (ಎಚ್‌1, ಎಚ್‌2, ಎಚ್‌3), ಬುಲೆಟ್‌ ಪಾಯಿಂಟ್‌ಗಳು, ನಂಬರ್‌ ಪಾಯಿಂಟ್‌ಗಳು, ಸಂಕ್ಷಿಪ್ತ ಪ್ಯಾರಾಗಳು ಇರಲಿ. ಗೂಗಲ್‌ನ ಆಲ್ಗಾರಿದಂಗಳಿಗೆ ಸುಲಭವಾಗಿ ವಿಷಯ ಮತ್ತು ಮಾಹಿತಿ ಹೊರತೆಗೆಯಲು ಸಾಧ್ಯವಾಗುವಂತೆ ನಿಮ್ಮ ಪೋಸ್ಟ್‌ನ ರಚನೆ ಇರಬೇಕು.

ಇದನ್ನೂ ಓದಿ: ಎಸ್‌ಇಒ ಮಾರ್ಗದರ್ಶಿ 2025: ಕೀವರ್ಡ್‌ಗಳು ಎಂದರೇನು? ಎಸ್‌ಇಒ-ಸ್ನೇಹಿ ಡಿಜಿಟಲ್‌ ನ್ಯೂಸ್‌ ಅಥವಾ ಕಂಟೆಂಟ್‌ ಬರೆಯಲು ಕಲಿಯಿರಿ

ಸರ್ಚ್‌ ಎಂಜಿನ್‌ ಹೊರತುಪಡಿಸಿ ಬೇರೆ ರೀತಿಯಲ್ಲಿ ಓದುಗರ ಬಳಗವನ್ನು ಸೃಷ್ಟಿಸಿಕೊಳ್ಳಲು ವೆಬ್‌ಸೈಟ್‌ಗಳು ಆದ್ಯತೆ ನೀಡಬೇಕು. ಸೋಷಿಯಲ್‌ ಮೀಡಿಯಾಗಳು (ಅಲ್ಲೂ ಕೂಡ ಲಿಂಕ್‌ ಹಾಕಿದಾಗ ಹೆಚ್ಚು ಜನರಿಗೆ ತಲುಪುತ್ತಿಲ್ಲ), ವಾಟ್ಸಪ್‌ ಗ್ರೂಪ್‌ಗಳು, ನ್ಯೂಸ್‌ ಲೆಟರ್‌ಗಳು, ನೋಟಿಫಿಕೇಷನ್‌ಗಳು, ಕಮ್ಯುನಿಟಿ ಫೋರಮ್‌ಗಳ ಮೂಲಕವೂ ಜನರಿಗೆ ನಿಮ್ಮ ಕಂಟೆಂಟ್‌ ತಲುಪಿಸಿ. ಸದಾ ಗೂಗಲ್‌ ಡಿಸ್ಕವರಿಯನ್ನೇ ನಂಬಿಕೊಂಡು ಇರಬೇಡಿ. ಏಕೆಂದರೆ, ಗೂಗಲ್‌ ಕೋರ್‌ ಅಪ್‌ಡೇಟ್‌ಗೆ ತಕ್ಕಂತೆ ವೆಬ್‌ಸೈಟ್‌ಗಳು ಬುಡ ಅಲ್ಲಾಡುತ್ತ ಇರುತ್ತದೆ.

ಎಐ ಕಾಲದಲ್ಲಿ ಬ್ಲಾಗರ್‌ಗಳು, ಕಂಟೆಂಟ್‌ ಕ್ರಿಯೆಟರ್‌ಗಳು ತಮ್ಮ ಮೆದುಳನ್ನು ಹೆಚ್ಚು ಚುರುಕುಗೊಳಿಸಬೇಕು. ಎಐ ಎನ್ನುವುದು ಮನುಷ್ಯ ಸೃಷ್ಟಿತ. ಎಐ ಮನುಷ್ಯನ ಮೆದುಳನ್ನು ನೋಡಿ ಅನುಕರಣೆ ಮಾಡುತ್ತದೆ. ಆದರೆ, ಅದು ಮನುಷ್ಯನ ಮೆದುಳು ಅಲ್ಲ. ಮನುಷ್ಯನ ಮೆದುಳು ಎನ್ನುವುದು ನಮ್ಮ/ನಿಮ್ಮ ತಲೆಯೊಳಗೆ ಇದೆ ಅಲ್ಲವೇ?

error: Content is protected !!