ಎಸ್‌ಎಸ್‌ಎಲ್‌ಸಿ ಬಳಿಕ ಮುಂದೆ ಏನು ಓದಬೇಕು? ಪಿಯುಸಿ ಆಯಿತು ಮುಂದೆ ಯಾವ ಕೋರ್ಸ್ ಕಲಿಯಬೇಕು ಎಂದು ಆಲೋಚಿಸುತ್ತಿರುವ ವಿದ್ಯಾರ್ಥಿ ಸಮುದಾಯಕ್ಕೆ ಸುದ್ದಿಜಾಲ.ಕಾಂ ಮೂಲಕ ಕರಿಯರ್ ಮಾರ್ಗದರ್ಶಿ ಲೇಖನಗಳನ್ನು ನೀಡಲಾಗುತ್ತದೆ. ಇಂದಿನ ಸಂಚಿಕೆಯಲ್ಲಿ ಹೋಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಕುರಿತು ಸಂಪೂರ್ಣ ವಿವರ ಪಡೆಯೋಣ ಬನ್ನಿ.
ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲೆಲ್ಲ ಇಂದು ಹೋಟೆಲ್ ಉದ್ಯಮವು ಅತ್ಯಂತ ಜನಪ್ರಿಯ ಕರಿಯರ್ ಕ್ಷೇತ್ರ. ಮೊದಲೆಲ್ಲ ಹೋಟೆಲ್ ಉದ್ಯೋಗವೆಂದರೆ ತಾತ್ಸರದಿಂದ ಜನರು ನೋಡುತ್ತಿದ್ದರು. ಆದರೆ, ಈಗ ಹೋಟೆಲ್ ಕ್ಷೇತ್ರದ ಅಗಾಧ ಅವಕಾಶ ನೋಡಿ ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳನ್ನು ಕಲಿಯಲು ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ.
ಏನಿದು ಹೋಟೆಲ್ ಮ್ಯಾನೇಜ್‍ಮೆಂಟ್?

ಹೋಟೆಲ್ ಮ್ಯಾನೇಜ್‍ಮೆಂಟ್ ಎನ್ನುವುದು ಆತಿಥ್ಯ ವಲಯದ ಒಂದು ವಿಭಾಗ. ಅತಿಥಿಗಳಿಗೆ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಸೇವೆ ನೀಡುವ ವಿಭಾಗ ಇದಾಗಿದೆ. ವಿವಿಧ ಹೋಟೆಲ್‍ಗಳು ತಾವು ನೀಡುವ ಸೇವೆಗಳಿಗೆ ಮತ್ತು ಐಷಾರಾಮ್ಯಕ್ಕೆ ತಕ್ಕಂತೆ ಐದು ಸ್ಟಾರ್‍ವರೆಗೆ ವಿವಿಧ ಗ್ರೇಡ್‍ಗಳನ್ನು ಹೊಂದಿವೆ. ಸಾಮಾನ್ಯ ಪಂಚತಾರ ಹೋಟೆಲ್‍ನಲ್ಲಿ ಮುಖ್ಯವಾಗಿ 4 ಪ್ರಮುಖ ವಿಭಾಗಗಳು ಇವೆ. 1. ಫ್ರಂಟ್ ಆಫೀಸ್ ಅಥವಾ ರಿಸೆಲ್ಷನ್. 2. ಹೌಸ್‍ಕೀಪಿಂಗ್. 3. ಆಹಾರ ಮತ್ತು ಪಾನೀಯ ಸೇವೆಗಳು. 4. ಕಿಚನ್ ಅಥವಾ ಅಡುಗಮನೆ. ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನಲ್ಲಿ ವಿದ್ಯಾರ್ಥಿಗಳು ಈ ನಾಲ್ಕು ವಿ`Áಗಗಳ ಕುರಿತು ಪ್ರಮುಖವಾಗಿ ಕಲಿಯುತ್ತಾರೆ. ಈ ನಾಲ್ಕು ವಿಭಾಗಗಳು ಹೇಗೆ ಒಂದಕ್ಕೊಂದು ಸಂಬಂಧ ಹೊಂದಿವೆ ಮತ್ತು ಹೇಗೆ ಜೊತೆಯಾಗಿ ಕೆಲಸ ಮಾಡಬೇಕು ಎನ್ನುವುದನ್ನೂ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್ ಮುಗಿಸಿದ ಬಳಿಕ ವಿದ್ಯಾರ್ಥಿಗಳು ಈ ನಾಲ್ಕು ವಿಭಾಗಗಳಲ್ಲಿ ಯಾವ ವಿಭಾಗದಲ್ಲಿ ಕರಿಯರ್ ರೂಪಿಸಿಕೊಳ್ಳಬೇಕು ಎಂದು ಯೋಚಿಸಿ ಆ ವಿಭಾಗದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಹೋಟೆಲಿಗರು ಏನು ಮಾಡುತ್ತಾರೆ?

ಮೇಲೆ ತಿಳಿಸಿದ ನಾಲ್ಕು ವಿಭಾಗಗಳನ್ನು ನಿರ್ವಹಣೆ ಮಾಡುವುದು ಹೋಟೆಲಿಗರ (ಹೋಟೆಲಿಯರ್) ಕೆಲಸ. ಅಂದರೆ, ಹೌಸ್‍ಕೀಪಿಂಗ್‍ನಿಂದ ಕಿಚನ್‍ವರೆಗೆ ಎಲ್ಲವನ್ನೂ ನೋಡಿಕೊಳ್ಳಬೇಕು. ಒಟ್ಟಾರೆ ಹೋಟೆಲ್‍ನ ಕಾರ್ಯನಿರ್ವಹಣೆ ಸರಾಗವಾಗಿ ನಡೆಯುವಂತೆ ಇವರು ನೋಡಿಕೊಳ್ಳಬೇಕು. ಅಂದರೆ, ಅತಿಥಿಯನ್ನು ಸ್ವಾಗತಿಸುವುದರಿಂದ ಹಿಡಿದು, ರೆಸ್ಟೂರೆಂಟ್‍ನಲ್ಲಿ ಆಹಾರ ಮತ್ತು ಪಾನೀಯ ಸರಬರಾಜು ಮಾಡುವುದು, ಅತಿಥಿಯ ಕೊಠಡಿಯನ್ನು ಸ್ವಚ್ಛವಾಗಿ ಮತ್ತು ಆಹ್ಲಾದಕರವಾಗಿ ಇಡುವುದು ಸೇರಿದಂತೆ ಹೋಟೆಲ್‍ನ ಸಮಸ್ತ ವಿಭಾಗದ ಕುರಿತು ಕಾಳಜಿ ವಹಿಸುವುದು ಹೋಟೆಲಿಯರ್ ಕೆಲಸವಾಗಿದೆ.
ಯಾಕೆ ಈ ಕರಿಯರ್?

ಭಾರತದಲ್ಲಿ ಹೋಟೆಲ್ ಉದ್ಯಮವು ವೇಗವಾಗಿ ಪ್ರಗತಿ ಕಾಣುತ್ತಿದೆ. ಇದರಿಂದ ಈ ವಿಭಾಗಗದಲ್ಲಿ ಕೆಲಸ ಮಾಡಲು ಬಯಸುವವರಿಗೆ ಹೆಚ್ಚಿನ ಅವಕಾಶ ಸೃಷ್ಟಿಯಾಗುತ್ತಿದೆ. ಈ ಪ್ರಗತಿಯು ದೇಶದ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ ಹೋಟೆಲ್ ಉದ್ಯಮಕ್ಕೂ ಸಾಕಷ್ಟು ಕೊಡುಗೆಯನ್ನು ನೀಡುತ್ತಿದೆ.
ಹೋಟೆಲ್ ಮ್ಯಾನೇಜ್‍ಮೆಂಟ್ ವ್ಯಾಪ್ತಿ
* ಫ್ರಂಟ್ ಆಫೀಸ್
* ಹೌಸ್ ಕೀಪಿಂಗ್
* ಆಹಾರ ಮತ್ತು ಪಾನೀಯ
* ಕಿಚನ್
* ಮಾರ್ಕೆಟಿಂಗ್
* ಫೈನಾನ್ಸ್
* ಖರೀದಿ
ಫ್ರಂಟ್ ಆಫೀಸ್ ಪ್ರಮುಖವಾಗಿ ಅತಿಥಿಗಳು ಮತ್ತು ಚೆಕ್‍ಇನ್ ಪ್ರಕ್ರಿಯೆಯ ಕುರಿತು ಗಮನ ನೀಡುತ್ತದೆ. ಹೋಟೆಲ್ ನಿರ್ವಹಣೆ ಮತ್ತು ಸ್ವಚ್ಛತೆಯ ಉಸ್ತುವಾರಿಯನ್ನು ಹೌಸ್ ಕೀಪಿಂಗ್ ವಿಭಾಗ ನೀಡಿಕೊಳ್ಳುತ್ತದೆ. ಎಫ್‍ಆಂಡ್‍ಬಿ ವಿಭಾಗವು ಆಹಾರ ಮತ್ತು ಪಾನೀಯಗಳ ಸೇವೆಯನ್ನು ನೋಡಿಕೊಳ್ಳುತ್ತದೆ. ಆಹಾರ ಸಿದ್ಧಪಡಿಸುವುದು ಕಿಚನ್ ವಿಭಾಗದ ಕೆಲಸ.
ಹೋಟೆಲ್ ಮ್ಯಾನೇಜ್ಮೆಂಟ್ ಉದ್ಯೋಗದ ಗುಣ ಮತ್ತು ಅವಗುಣ

ಗುಣಗಳು: ಸ್ಪಷ್ಟ ಕರಿಯರ್ ಹಾದಿಯಾಗಿದೆ. ಜಗತ್ತಿನೆಲ್ಲೆಡೆ ಬರುವ ಜನರೊಂದಿಗೆ ಮಾತುಕತೆ ನಡೆಸಬಹುದು. ಬೋರ್ ಹೊಡೆಸುವ ಡೆಸ್ಕ್ ಉದ್ಯೋಗದಂತೆ ಅಲ್ಲ. ಕಲಿಯುವ ಅವಕಾಶ ಹೆಚ್ಚಿರುತ್ತದೆ.
ಅವಗುಣಗಳು: ಕೆಲಸದ ಅವಧಿ ಸುದೀರ್ಘವಾದದ್ದು. ಡೆಸ್ಕ್ ಜಾಬ್‍ನಂತೆ 8 ಗಂಟೆಯಲ್ಲಿ ಮುಗಿಯದು. ದೈಹಿಕ ಶ್ರಮ ಬೇಡುತ್ತದೆ. ಹಬ್ಬದ ದಿನಗಳಲ್ಲಿ ರಜೆ ಸಿಗದು. ಕೆಲಸವು ಒತ್ತಡದಿಂದ ಕೂಡಿರುತ್ತದೆ.
ಹೊರಗಿನಿಂದ ನೋಡಲು ಹೋಟೆಲ್‍ಗಳು ಗ್ಲಾಮರ್ ಆಗಿ, ಲಗ್ಷುರಿಯಾಗಿ ಕಾಣಿಸಬಹುದು. ಆದರೆ, ಆ ಹೋಟೆಲ್‍ಗಳಲ್ಲಿ ಕೆಲಸ ಮಾಡುವವರ ಬದುಕು ಅಷ್ಟು ಗ್ಲಾಮರಸ್ ಆಗಿರುವುದಿಲ್ಲ. ಕೆಲಸದ ಪಾಳಿ ಹೆಚ್ಚಿರುತ್ತದೆ, ಮುಂಜಾನೆ ಶಿಫ್ಟ್ ಇರುತ್ತದೆ. ಶ್ರಮ ಬೇಡುವ ಕೆಲಸ ಮಾಡಬೇಕಾಗುತ್ತದೆ. ದೀಪಾವಳಿ, ಕ್ರಿಸ್‍ಮಸ್‍ಗೆ ರಜೆ ಕೇಳುವಂತೆ ಇರುವುದಿಲ್ಲ. ಯಾಕೆಂದರೆ, ಇಂತಹ ಹಬ್ಬ ಹರಿದಿನಗಳ ಸಮಯದಲ್ಲಿಯೇ ಹೋಟೆಲ್‍ಗೆ ಆಗಮಿಸುವ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿವು ಹೋಟೆಲ್ ಉದ್ಯಮವನ್ನು ನಿಮ್ಮ ಕರಿಯರ್ ಆಗಿ ಆಯ್ಕೆ ಮಾಡಿಕೊಳ್ಳಬಹುದು.
ಆದರೆ, ಡೆಸ್ಕ್ ಕೆಲಸ ಬಯಸದವರಿಗೆ ಹೋಟೆಲ್ ಕೆಲಸ ತುಂಬಾ ಆನಂದದಾಯಕವಾಗಿರುತ್ತದೆ. ಪ್ರತಿದಿನ ಆಗಮಿಸುವ ಅತಿಥಿಗಳೊಂದಿಗೆ ಮಾತನಾಡಬಹುದು (ನೀವು ಸವೀರ್ಸ್ ಮಾಡುವ ಉದ್ಯೋಗಿಯಾಗಿದ್ದರೆ ಅಥವಾ ಫ್ರಂಟ್ ಡೆಸ್ಕ್‍ನಲ್ಲಿದ್ದರೆ). ಹೊಸ ಹೊಸ ಅತಿಥಿಗಳು ಆಗಮಿಸುವುದರಿಂದ ಪ್ರತಿದಿನವೂ ಕೆಲಸವು ಹೊಸ ಸವಾಲುಗಳನ್ನು ಹೊಂದಿರುತ್ತದೆ. ಹೀಗಾಗಿ, ಪ್ರತಿದಿನ ಕೆಲಸ ಬೋರ್ ಹೊಡೆಸದು. ಇಂತಹ ಹಲವು ಸಕಾರಾತ್ಮಕ ಅಂಶಗಳು ಹೋಟೆಲ್ ಮ್ಯಾನೇಜ್‍ಮೆಂಟ್ ಉದ್ಯೋಗದಲ್ಲಿದೆ.
ಏನು ಓದಿರಬೇಕು?

ಏನೂ ಓದದೆಯೂ ಪಂಚತಾರ ಹೋಟೆಲ್‍ಗಳನ್ನು ಕಟ್ಟಿದವರು ಇದ್ದಾರೆ. ನೀವು ಹೋಟೆಲ್ ಉದ್ಯಮದಲ್ಲಿ ಉದ್ಯೋಗ ಮಾಡಲು ಹೋಟೆಲ್ ಮ್ಯಾನೇಜ್‍ಮೆಂಟ್‍ನಲ್ಲಿ ಬಿಎ ಅಥವಾ ಬಿಎಸ್ಸಿ ಅಥವಾ ಡಿಪ್ಲೊಮಾ ಕೋರ್ಸ್‍ಗಳನ್ನು ಮಾಡಬಹುದು. ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗಳನ್ನು ಕಲಿಸುವ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಇವೆ. ಕೆಲವು ಸಂಸ್ಥೆಗಳು ದುಬಾರಿ ಶುಲ್ಕ ಪಡೆಯಬಹುದು. ಯಾವುದೇ ಕಾಲೇಜು ಆಯ್ಕೆ ಮಾಡಿಕೊಳ್ಳುವ ಮೊದಲು ಅಲ್ಲಿ ನೀಡುವ ಕೋರ್ಸ್‍ಗಳ ಕುರಿತು ಮತ್ತು ಶಿಕ್ಷಣದ ಗುಣಮಟ್ಟದ ಕುರಿತು ತಿಳಿದುಕೊಳ್ಳಿ. ಈ ಕೋರ್ಸ್ ಕಲಿತರೆ ಹೋಟೆಲ್‍ನಲ್ಲಿ ಫ್ರಂಟ್ ಡೆಸ್ಕ್, ಕಿಚನ್, ಆಹಾರ ಮತ್ತು ಪಾನೀಯ, ಅಡುಗೆಮನೆ ಕೆಲಸ ಮಾತ್ರವಲ್ಲದೆ ವಿಮಾನಯಾನ ಕಂಪನಿಗಳು, ರೈಲ್ವೆ, ಆರೋಗ್ಯ ಸೇವಾ ಸಂಸ್ಥೆಗಳು ಸೇರಿದಂತೆ ಇತರ ಕಡೆಗಳಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ.
ಹೋಟೆಲ್ ಮ್ಯಾನೇಜ್ಮೆಂಟ್‌ನ ವಿವಿಧ ಪದವಿಗಳು
ಬಿಎಚ್‍ಎಂ: ಆಹಾರ ತಯಾರಿಕೆ, ಬೇಕರಿ, ಆಹಾರ ಮತ್ತು ಪಾನೀಯ, ಹೌಸ್ ಕೀಪಿಂಗ್, ಫೆಸಿಲಿಟಿ ಪ್ಲ್ಯಾನಿಂಗ್, ಫ್ರಂಟ್ ಆಫೀಸ್ ಇತ್ಯಾದಿ ವಿಭಾಗಗಳಲ್ಲಿ ಉದ್ಯೋಗ ಪಡೆಯಬಹುದು.
ಬಿಎಚ್‍ಎಂಸಿಡಿ: ನ್ಯೂಟ್ರಿಷಿಯನ್, ಫ್ರಂಟ್ ಆಫೀಸ್, ಆಹಾರ ಸಿದ್ಧಪಡಿಸುವಿಕೆ, ಹೌಸ್ ಕೀಪಿಂಗ್, ಕಮ್ಯುನಿಕೇಷನ್ ಇತ್ಯಾದಿ ವಿಭಾಗಗಳಲ್ಲಿ ಉದ್ಯೋಗ ಪಡೆಯಬಹುದು.
ಎಚ್‍ಎಚ್‍ಎಂನಲ್ಲಿ ಬಿಎಸ್ಸಿ: ಫುಡ್ ಪ್ರೊಡಕ್ಷನ್, ಫ್ರಂಟ್ ಆಫೀಸ್, ಬೇಕರಿ, ಹೌಸ್ ಕೀಪಿಂಗ್, ಕಮ್ಯುನಿಕೇಷನ್ ವಿಭಾಗಗಳಲ್ಲಿ ಕೆಲಸ ಮಾಡಬಹುದು.
ಹೋಟೆಲ್ ಮ್ಯಾನೇಜ್ಮೆಂಟ್ ಓದಿರುವವರಿಗೆ ವಿವಿಧ ಹುದ್ದೆಗಳು
ಸ್ಟಿವರ್ಡ್ಸ್: ರೆಸ್ಟೂರೆಂಟ್‍ಗಳಲ್ಲಿ ಮತ್ತು ಕೊಠಡಿಯೊಳಗೆ ಅತಿಥಿಗಳಿಗೆ ಆಹಾರ, ಪಾನೀಯ ಸರ್ವ್ ಮಾಡುವುದು ಮತ್ತು ಅಟೆಂಡ್ ಮಾಡುವುದು.
ಫ್ರಂಟ್ ಆಫೀಸ್ ಅಟೆಂಡೆಂಟ್: ರಿಸೆಪ್ಷನ್ ವಿಭಾಗದಲ್ಲಿ ಅತಿಥಿಗಳೊಂದಿಗೆ ಸಂವಹನ ನಡೆಸುವುದು. ಚೆಕ್ ಇನ್ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡುವುದು.
ಹೌಸ್‍ಕೀಪಿಂಗ್ ಅಟೆಂಡೆಂಟ್: ಲಾಬೀಗಳು, ಕಾರಿಡಾರ್‍ಗಳು ಮತ್ತು ಅತಿಥಿಯ ಕೊಠಡಿಗಳನ್ನು ಸ್ವಚ್ಛಗೊಳಿಸುವುದು.
ಅಡುಗೆ ಸಹಾಯಕ: ಹೋಟೆಲ್ ಅಡುಗೆಯವರಿಗೆ (ಶೆಫ್) ಆಹಾರ, ಬಫೆಟ್ ಇತ್ಯಾದಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುವುದು.
ಇವೆಲ್ಲ ಆರಂಭಿಕ ಹುದ್ದೆಗಳು. ಹೆಚ್ಚು ಅನುಭವ, ಶಿಕ್ಷಣ ಪಡೆದಂತೆ ನೀವು ಫ್ರಂಟ್ ಆಫೀಸ್ ಮ್ಯಾನೇಜರ್, ಎಫ್‍ಆ್ಯಂಡ್‍ಬಿ ಮ್ಯಾನೇಜರ್, ಹೌಸ್‍ಕೀಪಿಂಗ್ ಮ್ಯಾನೇಜರ್, ಶೆಫ್ ಇತ್ಯಾದಿ ಹುದ್ದೆಗಳನ್ನೂ ಪಡೆಯಬಹುದಾಗಿದೆ.
***
ಹೋಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ಉತ್ತಮ ಕರಿಯರ್ ಪಡೆಯಲು ಯಾವೆಲ್ಲ ಕೌಶಲದ ಅಗತ್ಯವಿದೆ?

ಸಂವಹನ: ಇಂಗ್ಲಿಷ್‍ನಲ್ಲಿ ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಅತಿಥಿಯೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಜ್ಞಾನ ಅವಶ್ಯ.
ಶಿಷ್ಟ ವರ್ತನೆ: ಆತಿಥ್ಯ ವಲದಯದಲ್ಲಿ ಸೌಮ್ಯವಾದ ನಡವಳಿಕೆ ಅತ್ಯಂತ ಅವಶ್ಯ.
ದೈಹಿಕ ಸಾಮರ್ಥ್ಯ: ದೀರ್ಘಾವಧಿಯ ಕೆಲಸ ಮಾಡಲು ಮತ್ತು ಶ್ರಮದಾಯಕ ಕೆಲಸ ಮಾಡಲು ದೈಹಿಕ ಶಕ್ತಿಯೂ ಉತ್ತಮವಾಗಿರಬೇಕು.
ಟೀಮ್ ಸ್ಪೀರಿಟ್: ತಂಡದೊಂದಿಗೆ ಮತ್ತು ಇತರೆ ತಂಡದ ಜೊತೆಗೆ ಕೆಲಸ ಮಾಡುವ ಸಾಮಥ್ರ್ಯ ಇರಬೇಕು.
ಶಿಸ್ತು: ಆತಿಥ್ಯ ವಲಯದಲ್ಲಿ ಕೆಲಸ ಮಾಡುವಾಗ ನೀಟಾದ ಉಡುಗೆ ತೊಡುಗೆ, ದೈಹಿಕ ಸೌಂದರ್ಯದ ಕುರಿತು ಕಾಳಜಿ ಹೊಂದಿರಬೇಕು.
***

















Got a Questions?
Find us on Socials or Contact Us and we’ll get back to you as soon as possible.