ಶಿಕ್ಷಣ ಮಾರ್ಗದರ್ಶಿ: ಹೆಲಿಕಾಪ್ಟರ್ ಪೈಲೆಟ್ ಆಗುವುದು ಹೇಗೆ?

ಹೆಲಿಕಾಪ್ಟರ್ ಪೈಲೆಟ್ ಆಗಲು ಬಯಸುವವರಿಗೆ ಕಮರ್ಷಿಯಲ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಸಿಎಚ್‍ಪಿಎಲ್) ಮತ್ತು ಪ್ರೈವೇಟ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಪಿಎಚ್‍ಪಿಎಲ್) ಕೋರ್ಸ್‍ಗಳು ಲಭ್ಯ ಇರುತ್ತವೆ. ಈ ಕೋರ್ಸ್‍ಗಳ ಅವ ಬಹುತೇಕ 1 ಅಥವಾ 2 ವರ್ಷದ ಒಳಗೆ ಇರುತ್ತದೆ. ಈ ಕೋರ್ಸ್ ಅನ್ನು ಪುರುಷರು ಅಥವಾ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಆಯಾ ತರಬೇತಿ ಸಂಸ್ಥೆಗಳಿಗೆ ಅನುಗುಣವಾಗಿ ಕನಿಷ್ಠ 17 ಅಥವಾ 18 ವರ್ಷ ಪೂರ್ಣಗೊಳಿಸಿದವರು ಈ ತರಬೇತಿಗೆ ಸೇರಬಹುದು. ಫಿಸಿಕ್ಸ್ ಮತ್ತು ಮ್ಯಾಥಮೆಟಿಕ್ಸ್‌ನಲ್ಲಿ 10+2 ವಿದ್ಯಾರ್ಹತೆ ಹೊಂದಿರಬೇಕು. ಡಿಜಿಸಿಎ ಬಯಸಿದಂತೆ ದೈಹಿಕ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಈ ಮಾಹಿತಿಯನ್ನು ಡಿಜಿಸಿಎ ವೆಬ್‍ಸೈಟ್ (www.dgca.nic.in)ನಿಂದ ಪಡೆದುಕೊಳ್ಳಬಹುದು.

[rml_read_more]

ಸಿಎಚ್‍ಪಿಎಲ್ ಅಥವಾ ಪಿಎಚ್‍ಪಿಎಲ್ ವಿದ್ಯಾರ್ಥಿಗಳು ಏರ್ ರೆಗ್ಯುಲೇಷನ್ಸ್, ಏರ್ ನ್ಯಾವಿಗೇಷನ್, ಏವಿಯೇಷನ್ ಮೆಥಾಡಲಾಜಿ, ಟೆಕ್ನಿಕಲ್ (ಏರ್‍ಕ್ರಾಫ್ಟ್ ಮತ್ತು ಎಂಜಿನ್ಸ್) ಮತ್ತು ಸಿಗ್ನಲ್ಸ್ ಸಿಲಬಸ್‍ಗೆ ತಕ್ಕಂತೆ ಲಿಖಿತ ಪರೀಕ್ಷೆ ಬರೆಯಬೇಕು. ನೀವು ಯಾವ ಹೆಲಿಕಾಪ್ಟರ್ ತರಬೇತಿ ಸಂಸ್ಥೆಗೆ ಸೇರುವಿರೋ ಆ ಸಂಸ್ಥೆಯೇ ಈ ವಿಷಯಗಳನ್ನು ಬೋಧಿಸುತ್ತದೆ. ಈ ಪರೀಕ್ಷೆಯಲ್ಲಿ ಪಾಸ್ ಆದವರು ಮುಂದಿನ ಹಂತದ ತರಬೇತಿ ಪಡೆಯಲು ಅರ್ಹತೆ ಪಡೆಯುತ್ತಾರೆ.

ಈಗಿರುವ ಡಿಜಿಸಿಎ ನಿಯಮಗಳಂತಗೆ ವಿದ್ಯಾರ್ಥಿಯು ಹಲವು ಗಂಟೆಗಳ ಕಾಲ ಹೆಲಿಕಾಪ್ಟರ್ ಹಾರಾಟ ನಡೆಸಿದ ಅನುಭವ ಹೊಂದಿರಬೇಕು. ಸಾಮಾನ್ಯವಾಗಿ 30 ಗಂಟೆ ಅಥವಾ 40 ಗಂಟೆ ಗಂಟೆ ಇತ್ಯಾದಿ ಹಾರಾಟ ಅನುಭವವನ್ನು ಬಯಸಲಾಗುತ್ತದೆ. ಬೆಂಗಳೂರಿನ ತರಬೇತಿ ಸಂಸ್ಥೆಯು ಎಷ್ಟು ಗಂಟೆಯ ತರಬೇತಿ ನೀಡುತ್ತದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈ ಕುರಿತು ಇರುವ ಸಾಮಾನ್ಯ ನಿಯಮಗಳನ್ನೂ ಡಿಜಿಸಿಎ ವೆಬ್‍ಸೈಟ್‍ನಿಂದ ಪಡೆಯಬಹುದು. ಸೂಕ್ತವಾದ ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಿ. ಪೂರ್ಣ ಪ್ರಮಾಣದಲ್ಲಿ ಖಾಸಗಿ ಸಂಸ್ಥೆಯಾದರೆ ದುಬಾರಿ ಶುಲ್ಕ ಪಾವತಿಸಬೇಕಾದೀತು.

ಪೈಲೆಟ್ ತರಬೇತಿ ಪಡೆದ ಕೂಡಲೇ ನೀವು ವಿಮಾನ ಹಾರಾಟ ನಡೆಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಪೈಲೆಟ್ ಲೈಸನ್ಸ್ ಪಡೆಯಬೇಕು. ದೇಶದಲ್ಲಿಂದು ಮೂರು ರೀತಿಯ ಪೈಲೆಟ್ ಲೈಸನ್ಸ್ ಲಭ್ಯ ಇದೆ. ವಿದ್ಯಾರ್ಥಿ ಪೈಲೆಟ್ ಪರವಾನಿಗೆ, ಖಾಸಗಿ ಪೈಲೆಟ್ ಪರವಾನಿಗೆ ಮತ್ತು ಕಮರ್ಷಿಯಲ್ ಪೈಲೆಟ್ ಪರವಾನಿಗೆ ಎಂಬ ಮೂರು ಆಯ್ಕೆಗಳಿವೆ. ವಿದ್ಯಾರ್ಥಿಯಾಗಿದ್ದಾಗ ಹೆಲಿಕಾಪ್ಟರ್ ಹಾರಾಟ ನಡೆಸಲು ವಿದ್ಯಾರ್ಥಿ ಪೈಲೆಟ್ ಲೈಸನ್ಸ್ ಬೇಕಾಗುತ್ತದೆ. ಕಮರ್ಷಿಯಲ್ ಪೈಲೆಟ್ ಲೈಸನ್ಸ್ ದೊರಕಿದ ನಂತರ ವಿಮಾನ ಹಾರಾಟ ನಡೆಸಬಹುದು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಮತ್ತು ಹೆಲಿಕಾಪ್ಟರ್ ಸೇವಾ ಕಂಪನಿ ಪವನ್ ಹನ್ಸ್ ಜೊತೆಯಾಗಿ ನೀಡುವ ಹೆಲಿಕಾಪ್ಟರ್ ತರಬೇತಿ ಕುರಿತು ಮಾಹಿತಿಯನ್ನು www.pawanhans.co.in ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದಾಗಿದೆ.

ಹೆಲಿಕಾಪ್ಟರ್ ಕಲಿಕಾ ಶುಲ್ಕ
ಕೆಲವು ಗಂಟೆಯ ಪ್ರಯಾಣಕ್ಕೆ ಹೆಲಿಕಾಪ್ಟರ್ ಬಳಸಲು ಹಲವು ಸಾವಿರ ರೂ. ನೀಡಬೇಕಾಗುತ್ತದೆ. ಇದರ ನಿರ್ವಹಣಾ ವೆಚ್ಚ ಇತ್ಯಾದಿಗಳು ಹೆಚ್ಚಿರುವುದರಿಂದ ಇದರ ಕಲಿಕಾ ವೆಚ್ಚವೂ ಹೆಚ್ಚಿದೆ. ವಿಮಾನ, ಹೆಲಿಕಾಪ್ಟರ್ ತರಬೇತಿಗೆ ಕೆಲವು ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಹಾಗಾದರೆ ಬಡವರೂ ಪೈಲೆಟ್‍ಗಳಾಗುವುದು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ನಮ್ಮ ದೇಶದ ವಿಮಾನ ಅಥವಾ ಹೆಲಿಕಾಪ್ಟರ್ ನಡೆಸುವವರಲ್ಲಿ ಸಾಕಷ್ಟು ಜನರು ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ವಿದ್ಯಾರ್ಥಿಗಳು ಈ ತರಬೇತಿಗೆ ಬ್ಯಾಂಕ್ ಲೋನ್ ಪಡೆಯಬಹುದು. ಸ್ಕಾಲರ್ ಷಿಪ್ ನೆರವೂ ಪಡೆಯಬಹುದು. ವಿವಿಧ ಸ್ಕಾಲರ್‍ಷಿಪ್‍ಗಳ ಬಗ್ಗೆ ಮಾಹಿತಿ ಪಡೆಯಲು ಈ ಮುಂದಿನ ವೆಬ್‍ಸೈಟ್‍ಗಳಿಗೆ ಭೇಟಿ ನೀಡಬಹುದು. ವೆಬ್ ಲಿಂಕ್: www.scholarshipsinindia.com/civil.html ಮತ್ತು http://tribal.nic.in/cpladvt.pdf

ಹೆಲಿಕಾಪ್ಟರ್ ಮತ್ತು ವಿಮಾನ ಪೈಲೆಟ್ ಆಗಲು ಇರುವ ಇನ್ನೊಂದು ಅತ್ಯುತ್ತಮ ಆಯ್ಕೆ ಭಾರತೀಯ ವಾಯುಪಡೆ’. ಇದಕ್ಕಾಗಿ ನೀವು ಭಾರತೀಯ ವಾಯುಪಡೆ ನಡೆಸುವ ಎನ್‍ಡಿಎ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು. ಈಗಾಗಲೇ ಈ ಪತ್ರಿಕೆಯಲ್ಲಿ ಎನ್‍ಡಿಎ ಪರೀಕ್ಷೆ ಕುರಿತು ಸಾಕಷ್ಟು ಮಾಹಿತಿ ನೀಡಲಾಗಿದೆ. ಎನ್‍ಡಿಎ ಪರೀಕ್ಷೆ ಮತ್ತು ಫಿಸಿಕಲ್ ಟೆಸ್ಟ್ ಪಾಸ್ ಆದ ನಂತರ ನಿಮಗೆ ಏರ್‌ಫೋರ್ಸ್ ಪೈಲೆಟ್ ತರಬೇತಿ ನೀಡುತ್ತದೆ. ತರಬೇತಿ ಮುಗಿದ ನಂತರ ನಿಮಗೆ 50 ಸಾವಿರ ರೂ.ಗಿಂತ ಹೆಚ್ಚಿನ ವೇತನವೂ ದೊರಕುತ್ತದೆ. ಶುಭವಾಗಲಿ.