ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯುವಂತಿದ್ದರೆ…

ಕನ್ನಡಿಗರ ಹೋರಾಟದ ಫಲವಾಗಿ ಕೆಲವು ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಿದೆ. ಆದರೂ, ಕೇಂದ್ರ ಸರಕಾರದ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವಂತೆ ಇಲ್ಲ.

ಉದಾಹರಣೆಗೆ ಇತ್ತೀಚೆಗೆ ಡಿಆರ್‌ಡಿಒ ೨೫೦ಕ್ಕೂ ಹೆಚ್ಚು ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ವಿದ್ಯಾರ್ಹತೆಯಾಗಿದೆ. ಕರ್ನಾಟಕದ ಬಹುತೇಕ ಗ್ರಾಮೀಣ ಭಾಗದ ಯುವಕರು ಹೆಚ್ಚಾಗಿ ಐಟಿಐ ಓದಿರುತ್ತಾರೆ. ಅವರಲ್ಲಿ ಬಹುತೇಕರ ಇಂಗ್ಲಿಷ್‌ ಜ್ಞಾನ ಅತ್ಯುತ್ತಮವಾಗಿರುವುದಿಲ್ಲ ಅಥವಾ ಸಮರ್ಥವಾಗಿ ಪರೀಕ್ಷೆ ಬರೆಯುವಷ್ಟು ಇರುವುದಿಲ್ಲ. ಆದರೆ, ಈ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಅವಕಾಶವಿದೆ.

ಇಲ್ಲಿ ಹಿಂದಿ ಮಾತೃಭಾಷೆಯಾಗಿರುವವರಿಗೆ ಹಿಂದಿಯಲ್ಲಿ ಪರೀಕ್ಷೆ ಬರೆಯುವುದು ಕಷ್ಟವಲ್ಲ. ಹಿಂದಿಯನ್ನು ೧೦ನೇ ತರಗತಿಯವರೆಗೆ ಓದಿರುವವರು ಹಿಂದಿಯಲ್ಲಿಯೇ ಐಟಿಐ ಪಠ್ಯಗಳಿಗೆ ಸಂಬಂಧಪಟ್ಟ ಪರೀಕ್ಷೆಯನ್ನು ಬರೆಯುವುದು ಸುಲಭವಲ್ಲ. ಹೀಗಾಗಿ, ಡಿಆರ್‌ಡಿಒ ಅಸಿಸ್ಟೆಂಟ್‌ ಹುದ್ದೆಗಳು ಕನ್ನಡಿಗರ ಪಾಲಾಗದೆ ಹಿಂದಿ ಭಾಷಿಕರ ಪಾಲಾಗುತ್ತದೆ.

ಇಲ್ಲಿ ಡಿಆರ್‌ಡಿಒ ಒಂದು ಉದಾಹರಣೆಯಷ್ಟೇ. ಬಹುತೇಕ ಕೇಂದ್ರ ಸರಕಾರದ ಹುದ್ದೆಗಳು, ಪಿಎಸ್‌ಯುಗಳ ಹುದ್ದೆಗಳು… ಇತರೆ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಇರುತ್ತವೆ.

ಐಟಿಐ ಹಂತದ, ಪಿಯುಸಿ ಹಂತದ, ಎಸ್ಎಸ್‌ಎಲ್‌ಸಿ ಹಂತದ ಹುದ್ದೆಗಳಿಗೆ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯುವಷ್ಟು ಸಾಮರ್ಥ್ಯ ಎಲ್ಲರಲ್ಲಿಯೂ ಇರುವುದಿಲ್ಲ. ಡಿಗ್ರಿ ಮುಗಿಸಿದರೂ, ಅಷ್ಟೇ ಏಕೆ ಸ್ನಾತಕೋತ್ತರ ಪದವಿ ಮುಗಿಸಿದರೂ ಇಂಗ್ಲಿಷ್‌ನಲ್ಲಿ ಸಮರ್ಥವಾಗಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲದವರು ಸಾಕಷ್ಟು ಜನರು ಇರುವುದು ಸುಳ್ಳಲ್ಲ.

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿಯೇ ಇರುವಂತೆ ನಮ್ಮ ರಾಜಕಾರಣಿಗಳು, ಕನ್ನಡದ ಹೋರಾಟಗಾರರು, ನಾಯಕರು, ಕನ್ನಡಿಗರು ಪ್ರಯತ್ನ ಮಾಡಬೇಕಿದೆ. ಹೀಗಿದ್ದರೆ ಮಾತ್ರ ಕನ್ನಡ ಅಸ್ಮಿತೆಗೆ ಬೆಲೆ ಬರಲಿದೆ.

ಎಲ್ಲಾದರೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯುವಂತಿದ್ದರೆ ರಾಜ್ಯದ ಯುವಕರು ಕೇಂದ್ರ ಸರಕಾರದ, ಪಿಎಸ್‌ಯುಗಳ ವಿವಿಧ ಹುದ್ದೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಅಲ್ಲವೇ?