Moral Story: ವಜ್ರ ಮತ್ತು ರೈತ

By | 01/12/2018
acres of diamonds story

ಈ ಸ್ಫೂರ್ತಿದಾಯಕ ಕತೆಯ ತುಣುಕು ಇಂಟರ್ನೆಟ್ ನಲ್ಲಿ ದೊರಕಿತು. ಅದನ್ನು ಒಂದಿಷ್ಟು ವಿಸ್ತರಿಸಿ, ಹೊಸತನದಿಂದ ಇಲ್ಲಿ ಮರುರಚನೆ ಮಾಡಲಾಗಿದೆ. ಈ ಕತೆಯ ಹೆಸರು ವಜ್ರ ಮತ್ತು ರೈತ ಎಂದಿರಲಿ

ಒಂದೂರಲ್ಲಿ ಒಬ್ಬ ರೈತನಿದ್ದ. ಆತ ಸಂತೃಪ್ತ. ಆತ ಸದಾ ನಗುನಗುತ್ತ ಕೆಲಸ ಮಾಡುತ್ತಿದ್ದ. ಹೊಲದಲ್ಲಿ ಕಷ್ಟಪಟ್ಟು ದುಡಿದರೂ ಆತ ದುಃಖಿತನಾಗಿರಲಿಲ್ಲ.

ಒಂದು ದಿನ ವಿವೇಕಿಯೊಬ್ಬ ರೈತನಲ್ಲಿಗೆ ಬಂದ. ಆತ ಬಂದು ಜೋಳದ ರೊಟ್ಟಿ ತಿಂದು ಸಂತೃಪ್ತನಾದ. ಆತನು ಈ ರೈತನ ಗುಡಿಸಲು, ಅಲ್ಲಿನ ಬಡತನ ಗಮನಿಸಿದ. ಏನೋ ಮಾತನಾಡುತ್ತ ವಜ್ರದ ಕುರಿತು ವರ್ಣಿಸಿದ.

ವಜ್ರದ ದಿವ್ಯಪ್ರಭೆ, ಜ್ವಾಜಲ್ಯ, ಮಹತ್ವವನ್ನು ರೈತನ ಮುಂದೆ ವಿವರಿಸಿದ. ವಜ್ರವನ್ನು ಹೊಂದಿದರೆ ಪಡೆಯಲು ಸಾಧ್ಯವಿರುವ ಅಧಿಕಾರದ ಬಗ್ಗೆ ತಿಳಿಸಿದ. “ನಿನ್ನ ಬಳಿ ಪುಟ್ಟ ಗೋಲಿ ಗಾತ್ರದ ವಜ್ರವಿದ್ದರೆ ನೀನು ನಿನ್ನದೇ ಆದ ನಗರ ಹೊಂದಬಹುದು, ನಿನ್ನ ಬಳಿ ಮುಷ್ಠಿ ಗಾತ್ರದ ವಜ್ರವಿದ್ದರೆ ನೀನು ಬೆಂಗಳೂರಿನಂತಹ ನಗರವನ್ನೇ ನಿರ್ಮಿಸಬಹುದು. ನಿನ್ನಲ್ಲಿ ದೊಡ್ಡ ಗಾತ್ರದ ವಜ್ರದ ಕಲ್ಲು ಇದ್ದರೆ ಒಂದು ದೇಶವನ್ನೇ ನಿರ್ಮಿಸಬಹುದು’’ ಎಂದು ಹೇಳಿದ ವಿವೇಕಿ ಬೇರೆ ಇತರೆ ಮಾತುಗಳನ್ನೂ ಆಡಿ ಹೊರಟ.

ಆ ರೈತನಿಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲ.

ಆತನ ಮನಸ್ಸಿನಲ್ಲಿ ಆ ವಜ್ರಗಳೇ ಕಾಣಿಸುತ್ತಿತ್ತು. ನನ್ನಲ್ಲೂ ಅಂತಹ ವಜ್ರವಿರುತ್ತಿದ್ದರೆ, ಎಂದು ಆಸೆಪಟ್ಟ.

ಸಂತೃಪ್ತ ರೈತ ಅಸಮಾಧಾನಿಯೂ, ಅಸಂತುಷ್ಟನೂ ಆಗಿ ಬದಲಾದ.

ಮರುದಿನ ಆ ರೈತ ತನ್ನ ಹೊಲವನ್ನು ಮಾರಿ, ವಜ್ರವನ್ನು ಅರಸುತ್ತಾ ಎಲ್ಲೆಡೆ ಸುತ್ತಾಡತೊಡಗಿದ. ಹೀಗೆ, ದಿನಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ಅಲೆದರೂ ಆತನಿಗೆ ವಜ್ರ ದೊರಕಲಿಲ್ಲ.

ಇಷ್ಟು ಸಮಯದಲ್ಲಿ ಆತ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ದ. ದೈಹಿಕವಾಗಿಯೂ ಕೃಶನಾಗಿದ್ದ. ಕೈಯಲ್ಲಿದ್ದ ಹಣವೂ ಖಾಲಿಯಾಗಿತ್ತು.

ಆತ ಎಷ್ಟೊಂದು ಹತಾಶನಾಗಿದ್ದ ಎಂದರೆ ಆ ನಗರದ ಹೊರಭಾಗದಲ್ಲಿ ಹರಿಯುತ್ತಿದ್ದ ಬೃಹತ್ ನದಿಗೆ ಹಾರಿ ಪ್ರಾಣ ಬಿಟ್ಟ.

ಕತೆ ಇಲ್ಲಿಗೆ ಮುಗಿಯಲಿಲ್ಲ.

ಈ ರೈತನ ಜಮೀನು ಖರೀದಿಸಿದ ವ್ಯಕ್ತಿ ಆ ಜಮೀನಿನ ನದಿಯಲ್ಲಿ ಒಂಟೆಯನ್ನು ತೊಳೆಯುತ್ತಿದ್ದ.

ಆ ನದಿಯಲ್ಲಿ ಒಂಟೆಯನ್ನು ತೊಳೆಯಲು ನದಿಗಳಲ್ಲಿದ್ದ ಕಲ್ಲನ್ನು ಬಳಸುತ್ತಿದ್ದ.

ಆ ಕಲ್ಲಿನಿಂದ ಒಂಟೆಯ ಮೈ ಉಜ್ಜುತ್ತಿದ್ದಾಗ ಆ ಕಲ್ಲು ಹೊಳೆಯುವುದನ್ನು ಗಮನಿಸಿದ.

ದಡದಲ್ಲಿದ್ದ ಇನ್ನಷ್ಟು ಕಲ್ಲುಗಳನ್ನು ತೊಳೆದು ನೋಡಿದ. ಅವುಗಳೂ ಹೊಳೆಯುತ್ತಿದ್ದವು.

ಕುತೂಹಲದಿಂದ ಆ ಕಲ್ಲನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸೂರ್ಯನ ಕಿರಣಕ್ಕೆ ಹಿಡಿದಾಗ ಕಣ್ಣು ಕುಕ್ಕಿದಂತೆ ಆಯಿತು. ಅಷ್ಟೊಂದು ಪ್ರಕಾಶಮಾನವಾಗಿತ್ತು ಆ ಕಲ್ಲು.

ಆ ಕಲ್ಲನ್ನು ಆತ ಮನೆಯಲ್ಲಿ ತಂದಿಟ್ಟ.

ಮರುದಿನ ಈತನ ಮನೆಗೆ ವಿವೇಕಿ ಬಂದ. ಈ ಹೊಳೆಯುವ ಕಲ್ಲನ್ನು ನೋಡಿದ. “ರೈತ ಮನೆಗೆ ಬಂದನೇ’ ಎಂದು ಕೇಳಿದ.

ಇಲ್ಲವೆಂದು ಜಮೀನು ಖರೀದಿಸಿದ ವ್ಯಕ್ತಿ ಹೇಳಿದ.

“ಇದು ಕಲ್ಲಲ್ಲ. ವಜ್ರ. ಆ ರೈತನ ಜಮೀನಿನಲ್ಲಿ ವಜ್ರಗಳು ಇರುವುದು ನನಗೆ ಗೊತ್ತಿತ್ತು.’ ಎಂದು ವಿವೇಕಿ ಹೇಳಿದ.

“ಆ ನದಿಯ ದಂಡೆಯಲ್ಲಿ ಇಂತಹ ಕಲ್ಲುಗಳು ಸಾಕಷ್ಟು ಇವೆ. ಬನ್ನಿ ತೋರಿಸುತ್ತೇನೆ’ ಎಂದು ಆ ವ್ಯಕ್ತಿ ವಿವೇಕಿಯನ್ನು ಕರೆದುಕೊಂಡು ಹೋದ.

ಏನಶ್ಚರ್ಯ, ಆ ಜಮೀನಿನ ಎಕರೆಯಷ್ಟು ಭೂಮಿಯಲ್ಲಿ ವಜ್ರದ ಖನಿಯೇ ಇತ್ತು.

ಆ ಜಮೀನು ಖರೀದಿಸಿದ ವ್ಯಕ್ತಿ ಶ್ರೀಮಂತನಾದ ಎಂದು ವಿವರಿಸಿಹೇಳಬೇಕಾಗಿಲ್ಲ ತಾನೇ.

***

ಈ ಕತೆ ಓದಿದಾಗ ನನ್ನ ಮನಸ್ಸಿನಲ್ಲಿಯೂ ಹಲವು ಭಾವಗಳು ಹಾದು ಹೋದವು. ನಮ್ಮಲ್ಲಿಯೇ ಇರುವ ದೇವರನ್ನು ಎಲ್ಲೆಲ್ಲೋ ಹುಡುಕುವೆವು ಎಂಬ ಹಾಡೂ ನೆನಪಾಯಿತು.

  • ಪ್ರತಿಯೊಬ್ಬರೂ ಒಳ್ಳೆಯ ಅವಕಾಶವನ್ನು ಎಲ್ಲೆಲ್ಲೋ ಹುಡುಕುತ್ತ ಇರುತ್ತಾರೆ. ಆದರೆ, ಅಂತಹ ಅವಕಾಶಗಳು ನಮ್ಮಲ್ಲಿಯೇ ಇರುತ್ತವೆ. ಅವುಗಳನ್ನು ಬಳಸಲು ತಿಳಿಯಬೇಕು.
  • ನಮಗೆ ಪಕ್ಕದ ಮನೆಯವನ ಹೆಂಡತಿ ಚೆನ್ನಾಗಿ ಕಾಣಿಸುತ್ತಾಳೆ. ಪಕ್ಕದ ಮನೆಯ ಸಂಪತ್ತು ನಮ್ಮ ಕಣ್ಣು ಕುಕ್ಕುತ್ತದೆ. ಆದರೆ, ನಮ್ಮಲ್ಲಿ ಎಷ್ಟು ಸಂಪತ್ತು ಇದ್ದರೂ ತೃಪ್ತಿ ಇರುವುದಿಲ್ಲ.
  • ನಾವೆಲ್ಲರೂ ವಜ್ರದ ಖನಿಗಳು. ಅದನ್ನು ಬಳಸಲು ತಿಳಿಯೋಣ.

ಈ ಕತೆಯ ಮೂಲವು acres of diamonds ಎಂಬ ಹೆಸರಿನಲ್ಲಿ ಇಂಟರ್ನೆಟ್ ನಲ್ಲಿ ಲಭ್ಯವಿದೆ. ಓದಿಕೊಳ್ಳಿರಿ.

ಈ ಮುಂದಿನ ನೀತಿಕತೆಗಳನ್ನೂ ಓದಿ

ನೀತಿಕತೆ: ಪರೀಕ್ಷೆ ತಪ್ಪಿಸಿದ ಹುಡುಗರು

ನೀತಿಕತೆ: ದಾರಿಯ ನಡುವೆ ಇರುವ ದೊಡ್ಡ ಕಲ್ಲು

ನೀತಿಕತೆ: ಚಿಟ್ಟೆಮರಿ ಮತ್ತು ಪರೋಪಕಾರಿ ಹುಡುಗ

ನೀತಿಕತೆ: ಕುಂಟ ನಾಯಿಮರಿಗೆ ಬೆಲೆ ಎಷ್ಟು?

ನೀತಿಕತೆ: ನಮ್ಮ ಮೌಲ್ಯ ಕಡಿಮೆಯಾಗದು

ನೀತಿಕತೆ: ದೊಡ್ಡ ಆನೆಯನ್ನು ಕಟ್ಟಿರುವ ಸಣ್ಣ ಹಗ್ಗ

ಕೆಂಟುಕಿ ಚಿಕನ್ ಸ್ಥಾಪಕನ ಯಶೋಗಾಥೆ

ಬಾವಿಗೆ ಬಿದ್ದ ಕತ್ತೆ, ಎದ್ದುಬಂದ ಕತೆ

 

One thought on “Moral Story: ವಜ್ರ ಮತ್ತು ರೈತ

  1. Pingback: Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು | ಕರ್ನಾಟಕ Best

Comments are closed.