ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಸೆಟ್ಟಿಂಗ್ಸ್, ಸೆಟಪ್ ಗಳನ್ನು ಕಲಿಯಿರಿ

ನಮಸ್ಕಾರ. ವರ್ಡ್ ಪ್ರೆಸ್ ವೆಬ್ ಸೈಟ್ ರಚನೆ ಕುರಿತು ಸರಣಿ ಲೇಖನಗಳನ್ನು ಓದುತ್ತಿದ್ದೀರಿ.  ಈ ಹಿಂದಿನ ವರ್ಡ್ ಪ್ರೆಸ್ ವೆಬ್ ಸೈಟ್ ಗೈಡ್ ಲೇಖನಗಳನ್ನು ಓದದೆ ಇರುವವರು ಎಲ್ಲಾ ಲೇಖನಗಳನ್ನು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಓದಬಹುದು. ವರ್ಡ್ ಪ್ರೆಸ್ ಮೂಲಕ ಬ್ಲಾಗ್ ರಚನೆ, ಡೊಮೈನ್ ಖರೀದಿ, ಹೋಸ್ಟಿಂಗ್ ಖರೀದಿ, ಬ್ಲಾಗರ್ ಮೂಲಕ ವಿನ್ಯಾಸ ಸೇರಿದಂತೆ ಹಲವು ವಿಷಯಗಳನ್ನು ಕಲಿತಿದ್ದೀರಿ. ಯಾವುದೇ ಖರೀದಿ ಮಾಡದೆ ಆಫ್ ಲೈನ್ ಮೂಲಕ ಪೋರ್ಟೆಬಲ್ ವರ್ಡ್ ಪ್ರೆಸ್ ಮೂಲಕ ಕಂಪ್ಯೂಟರ್ ಡೆಸ್ಕ್ ಟಾಪ್ ನಲ್ಲಿಯೇ ಇಂಟರ್ನೆಟ್ ಇಲ್ಲದೆಯೂ ವೆಬ್ ವಿನ್ಯಾಸ ಮಾಡಬಹುದಾದ ಸಾಧ್ಯತೆಯನ್ನೂ ಈ ಹಿಂದಿನ ಲೇಖನದಲ್ಲಿ ಓದಿದ್ದೀರಿ. ಈ ಹಿಂದಿನ ಕೆಲವು ಲೇಖನಗಳನ್ನು ಈ ಮುಂದಿನಂತೆ ನೆನಪಿಸಿಕೊಳ್ಳಬಹುದು.

ವರ್ಡ್ ಪ್ರೆಸ್ ಬ್ಲಾಗ್ ರಚನೆ ಹೇಗೆ?

ವರ್ಡ್ ಪ್ರೆಸ್.ಕಾಂ ಮೂಲಕ ಖರೀದಿ

ವರ್ಡ್ ಪ್ರೆಸ್. ಆರ್ಗ್ ಯಾಕೆ ಬೆಸ್ಟ್?

ಡೊಮೈನ್ ಖರೀದಿಗೆ ಟಿಪ್ಸ್

ವರ್ಡ್ ಪ್ರೆಸ್ ವೆಬ್ ಸೈಟ್ ಗೈಡ್ ಎಲ್ಲಾ ಲೇಖನಗಳ ಸಂಗ್ರಹ

ಇವಿಷ್ಟು ಲೇಖನಗಳನ್ನು ಓದಿದ್ದೀರಿ ಎಂದುಕೊಳ್ಳೋಣ. ಈಗ ಕಲಿಕೆಯ ಅತ್ಯಂತ ಮುಖ್ಯವಾದ ಘಟ್ಟಕ್ಕೆ ಬಂದಿದ್ದೇವೆ. ಈಗ ನಾವು ನಿಜವಾದ ವೆಬ್ ಸೈಟ್ ವಿನ್ಯಾಸಕ್ಕೆ ಪ್ರವೇಶಿಸುತ್ತಿದ್ದೇವೆ. ಅದಕ್ಕೂ ಮೊದಲು ನೀವು ಡೊಮೈನ್ ಮತ್ತು ಹೋಸ್ಟಿಂಗ್ ಖರೀದಿಸಬೇಕು. ನೀವು ಯಾವುದೇ ತಾಣದಿಂದ ಬೇಕಾದರೂ ಡೊಮೈನ್ ಮತ್ತು ಹೋಸ್ಟಿಂಗ್ ಖರೀದಿಸಬಹುದು. ನಾನು ಶಿಫಾರಸು ಮಾಡುವುದು ಬ್ಲೂಹೋಸ್ಟ್. ಕರ್ನಾಟಕಬೆಸ್ಟ್ ನಲ್ಲಿ ನೀಡಲಾದ ಲಿಂಕ್ ಮೂಲಕ ಖರೀದಿಸಿದರೆ ಒಂದಿಷ್ಟು ವಿನಾಯಿತಿ ದೊರಕಬಹುದು. ಮುಂದೆ ನಿಮಗೆ ವೆಬ್ ವಿನ್ಯಾಸದಲ್ಲಿ ತೊಂದರೆಗಳಾದಗ ಮಾರ್ಗದರ್ಶನವೂ ಸುಲಭವಾಗಿ ದೊರಕುತ್ತದೆ.

ನಿಮಗೆ ಸೂಕ್ತವಾದ ಡೊಮೈನ್ ಹೆಸರನ್ನು ಈ ಕೆಳಗೆ ನೀಡಲಾದ ಬಾಕ್ಸ್ ಮೂಲಕ ಹುಡುಕಾಡಿ.

ನೆನಪಿಡಿ, ಸುಂದರವಾದ ಹೆಸರನ್ನು ನಿಮ್ಮ ವೆಬ್ ಸೈಟ್ ಗೆ ನೀಡಿ. (ಓದಿ: ಡೊಮೈನ್ ಖರೀದಿಗೆ ಟಿಪ್ಸ್). ಅದಾದ ಬಳಿಕ ಈ ಲಿಂಕ್ ಪ್ರವೇಶಿಸಿ ಹೋಸ್ಟಿಂಗ್ ಖರೀದಿಸಬಹುದು. ಇವೆರಡು ಖರೀದಿ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ನಿಮ್ಮ ಇಮೇಲ್ ಗೆ ಸಾಕಷ್ಟು ಇಮೇಲ್ ಗಳು ಹೋಸ್ಟಿಂಗ್ ಮತ್ತು ಡೊಮೈನ್ ಕಂಪನಿಯಿಂದ ಬರುತ್ತವೆ. ಅವುಗಳಲ್ಲಿ ನೀಡಲಾದ ಪಾಸ್ ವರ್ಡ್ ಮತ್ತು ಯೂಸರ್ ನೇಮ್ ನೆರವಿನಿಂದ ಸಿ-ಪ್ಯಾನೆಲ್ ಗೆ ಲಾಗಿನ್ ಆಗಿ. ನೀವೇ ಪಾಸ್ ವರ್ಡ್ ರಚಿಸಿಯೂ ಲಾಗಿನ್ ಆಗಬಹುದು. ಮುಂದಿನ ಹಂತಗಳನ್ನು ಗಮನಿಸಿ.

  • ಕಂಟ್ರೋಲ್ ಪ್ಯಾನೆಲ್ ಗೆ ಲಾಗಿನ್ ಆಗಿ
  • ವೆಬ್ ಸೈಟ್ ಎಂಬ ವಿಭಾಗದಲ್ಲಿ ವರ್ಡ್ ಪ್ರೆಸ್ ಐಕಾನ್ ಇರುತ್ತದೆ. ಅಲ್ಲಿ ಇನ್ ಸ್ಟಾಲ್ ವರ್ಡ್ ಪ್ರೆಸ್ ಎಂಬ ಆಯ್ಕೆ ಇರುತ್ತದೆ.
  • ಯಾವ ಡೊಮೈನ್ ನೀವು ಖರೀದಿಸಿದ್ದೀರೋ ಅದಕ್ಕೆ ಆ ವರ್ಡ್ ಪ್ರೆಸ್ ಅನ್ನು ಇನ್ ಸ್ಟಾಲ್ ಮಾಡಬೇಕು.
  • ನೀವು ಬ್ಲೂಹೋಸ್ಟ್ ಹೊರತುಪಡಿಸಿ ಬೇರೆಯಾವುದಾದರೂ ಕಂಪನಿಯಲ್ಲಿ ಖರೀದಿಸಿದರೆ ಈ ರೀತಿ ಸರಳವಾಗಿ ವರ್ಡ್ ಪ್ರೆಸ್ ಇನ್ ಸ್ಟಾಲ್ ಮಾಡುವ ಸೌಲಭ್ಯ ಇದೆ ಎನ್ನುವಂತೆ ಇಲ್ಲ. ಒನ್ ಕ್ಲಿಕ್ ವರ್ಡ್ ಪ್ರೆಸ್ ಇನ್ ಸ್ಟಾಲ್ ಸೌಲಭ್ಯವನ್ನು ಕೆಲವು ಕಂಪನಿಗಳು ಮಾತ್ರ ನೀಡುತ್ತವೆ.
  • ಇನ್ ಸ್ಟಾಲ್ ನೌ ಕ್ಲಿಕ್ ಮಾಡಿದ ಬಳಿಕ ವರ್ಡ್ ಪ್ರೆಸ್ ಇನ್ ಸ್ಟಾಲ್ ಆಗುತ್ತದೆ.
  • ಇವಿಷ್ಟು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೀವು ವರ್ಡ್ ಪ್ರೆಸ್ ವೆಬ್ ಸೈಟ್ ವಿನ್ಯಾಸ ಮಾಡುವ ಕೆಲಸ ಆರಂಭಿಸಬಹುದು.

ವರ್ಡ್ ಪ್ರೆಸ್ ಥೀಮ್ ಇನ್ ಸ್ಟಾಲ್ ಮಾಡುವುದು ಹೇಗೆ?

ನೀವು ವರ್ಡ್ ಪ್ರೆಸ್ ಇನ್ ಸ್ಟಾಲ್ ಮಾಡಿದ ಬಳಿಕ ವಿನ್ಯಾಸದ ಕಡೆಗೆ ಗಮನ ಹರಿಸಬೇಕು. ಇದಕ್ಕಾಗಿ ನೀವು ಡಬ್ಲ್ಯುಪಿ ಅಡ್ಮಿನ್ ಗೆ ಹೋಗಬೇಕು. ಉದಾಹರಣೆಗೆ https://karnatakabest.com/wp-admin

ಇಲ್ಲಿ ಕರ್ನಾಟಕ ಬೆಸ್ಟ್ ಬದಲಿಗೆ ನಿಮ್ಮ ಡೊಮೈನ್ ಹೆಸರು ನಮೂದಿಸಿ. ಅಂದರೆ ನಿಮ್ಮಸೈಟ್ ಹೆಸರು.ಕಾಂ/ಡಬ್ಲ್ಯುಪಿ-ಅಡ್ಮಿನ್ ಎಂದು ಬ್ರೌಸರ್ ನಲ್ಲಿ ಬರೆಯಬೇಕು.

ಅಲ್ಲಿ ನಿಮಗೆ ನೀಡಲಾದ ಅಥವಾ ನೀವು ರಚಿಸಿರುವ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಮೂಲಕ ಲಾಗಿನ್ ಆಗಬೇಕು. ಈ ರೀತಿ ಲಾಗಿನ್ ಆದ ಬಳಿಕ ನಿಮ್ಮ ವರ್ಡ್ ಪ್ರೆಸ್ ಡ್ಯಾಷ್ ಬೋರ್ಡ್ ಈ ಮುಂದಿನಂತೆ ಇರುತ್ತದೆ.

ಡ್ಯಾಷ್ ಬೋರ್ಡ್ ಸರಳವಾಗಿದೆ. ಒಮ್ಮೆ ಎಲ್ಲಾ ವಿಭಾಗವನ್ನು ಕ್ಲಿಕ್ ಮಾಡಿ ನೋಡಿ. ನೀವು ಪೋರ್ಟೆಬಲ್ ವರ್ಡ್ ಪ್ರೆಸ್ ಮೂಲಕ ಈಗಾಗಲೇ ಕಲಿತಿದ್ದರೆ ಇದು ಇನ್ನೂ ಸರಳ. (ಓದಿ: ಪೋರ್ಟೆಬಲ್ ವರ್ಡ್ ಪ್ರೆಸ್ ಮೂಲಕ ಆಪ್ ಲೈನ್ ನಲ್ಲಿ ವೆಬ್ ಸೈಟ್ ರಚನೆ ಕಲಿಕೆ ಹೇಗೆ?)

wordpress dashboard

ಅಪಿಯರೆನ್ಸ್ ಎಂಬ ವಿಭಾಗವನ್ನು ಕ್ಲಿಕ್ ಮಾಡಿ. ಅಲ್ಲಿ ಥೀಮ್ಸ್ ಎಂಬ ಆಯ್ಕೆ ಇದೆ. ಅದನ್ನು ಕ್ಲಿಕ್ ಮಾಡಿ. ಅಲ್ಲಿ ನೂರಾರು ಉಚಿತ ಥೀಮ್ ಗಳು ಕಾಣಿಸುತ್ತವೆ. ಯಾವ ಥೀಮ್ ಆಗಬಹುದು ಎಂದು ಮೊದಲೇ ನಿರ್ಧರಿಸಿ. ಆಫ್ ಲೈನ್ ಥೀಮ್ ನಲ್ಲಿ ನಿರ್ಧರಿಸಿದರೆ ಉತ್ತಮ. ಇಲ್ಲಿ ಇನ್ ಸ್ಟಾಲ್, ಅನ್ ಇನ್ ಸ್ಟಾಲ್ ಹೆಚ್ಚು ಮಾಡಬೇಡಿ. ನಿಮಗೆ ಇಷ್ಟವಾದ ಒಂದು ಥೀಮ್ ಆಯ್ಕೆ ಮಾಡಿಕೊಳ್ಳಿ. ಇಲ್ಲಿ ಉಚಿತವಾಗಿ ದೊರಕುವ ಬಹುತೇಕ ಥೀಮ್ ಗಳು ವರ್ಡ್ ಪ್ರೆಸ್.ಕಾಂನ ಬೇಸಿಕ್ ಮತ್ತು ಪ್ರೀಮಿಯಂ ಆಯ್ಕೆಗಳಲ್ಲಿ ದೊರಕುವುದಿಲ್ಲ. ಅಲ್ಲಿ ಬಿಸ್ನೆಸ್ ಪ್ಲ್ಯಾನ್ ನಲ್ಲಿ ದೊರಕುವ ಎಲ್ಲಾ ಥೀಮ್ ಗಳು ಇಲ್ಲಿ ಉಚಿತವಾಗಿ ದೊರಕುತ್ತವೆ (ಉಚಿತವೆಂದರೆ, ಫ್ರೀ ವರ್ಷನ್).

ಇಲ್ಲಿ ನಿಮಗೆ ಇಷ್ಟವಾದ ಯಾವುದಾದರೂ ಥೀಮ್ ಅನ್ನು ಆಯ್ಕೆ ಮಾಡಿಕೊಂಡು ಇನ್ ಸ್ಟಾಲ್ ನೌ ಎಂದು ಕೊಡಿ. ಬಳಿಕ ಆ್ಯಕ್ಟಿವೇಟ್ ಬಟನ್ ಕ್ಲಿಕ್ ಮಾಡಿ. ಆ ವಿನ್ಯಾಸದ ಥೀಮ್ ಸಕ್ರೀಯಗೊಳ್ಳುತ್ತದೆ. ಬಳಿಕ ನಿಮಗೆ ಬೇಕಾದಂತೆ ಈ ಥೀಮ್ ಅನ್ನು ಬಳಸಬಹುದು. ನೀವು ಯಾವುದಾದರೂ ಥೀಮ್ ಡಿಲೀಟ್ ಮಾಡಿದರೆ ನೀವು ಪೋಸ್ಟ್ ಮಾಡಿದ ಯಾವುದೇ ಲೇಖನಗಳು ಡಿಲೀಟ್ ಆಗುವುದಿಲ್ಲ. ಬೇರೆ ಥೀಮ್ ಇನ್ ಸ್ಟಾಲ್ ಮಾಡಿದಾಗಲೂ ಅವು ಇರುತ್ತವೆ.

ಪೋಸ್ಟ್ ಮಾಡುವುದು ಹೇಗೆ?

ಈಗ ನಿಮ್ಮ ವೆಬ್ ಸೈಟ್ ಗಳಿಗೆ ಲೇಖನ ಬರೆಯುವ ಸಮಯ. ನೀವು ಬ್ಲಾಗ್ ಅಥವಾ ನ್ಯೂಸ್ ಪೋರ್ಟಲ್ ರಚಿಸುತ್ತೀರಿ ಎಂದುಕೊಂಡು ಮೊದಲಿಗೆ ಪೋಸ್ಟ್ ಬರೆಯುವುದು ಹೇಗೆ ಎನ್ನುವುದನ್ನು ಸಂಕ್ಷಿಪ್ತವಾಗಿ ತಿಳಿಸುತ್ತೇನೆ.

ಡ್ಯಾಷ್ ಬೋರ್ಡ್ ನಲ್ಲಿ ಪೋಸ್ಟ್ ಎಂಬ ವಿಭಾಗ ಇರುತ್ತದೆ. ಅಲ್ಲಿ ನ್ಯೂಪೋಸ್ಟ್ ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಹೆಡ್ ಲೈನ್ ಇರುವಲ್ಲಿ ಹೆಡ್ ಲೈನ್ ಬರೆಯಿರಿ. ಲೇಖನ ಹಾಕಬೇಕಾದ್ದಲ್ಲಿ ಲೇಖನ ಪೇಸ್ಟ್ ಮಾಡಿ. ನೀವು ಅಲ್ಲಿಯೇ ಲೇಖನ ಬರೆಯಬಹುದು ಅಥವಾ ಬೇರೆ ಕಡೆ ಬರೆದು ನಂತರ ಪೇಸ್ಟ್ ಮಾಡಬಹುದು. ಪೋಸ್ಟ್ ನಲ್ಲಿ ಇರುವ ಮೀಡಿಯಾ ವಿಭಾಗಕ್ಕೆ ಹೋಗಿ ಫೋಟೊಗಳನ್ನು ಹಾಕಬಹುದು. ಪೋಸ್ಟ್ ಬರೆಯುವ ಪ್ರಕ್ರಿಯೆ ಈಗ ಗುಟೆನ್ ಬರ್ಗ್ ನ ಬ್ಲಾಕ್ ವಿನ್ಯಾಸವನ್ನು ಹೊಂದಿದೆ. ಗುಟೆನ್ ಬರ್ಗ್ ಬಳಕೆ ಹೇಗೆ ಎಂದು ತಿಳಿಯಬೇಕಾದರೆ “ವರ್ಡ್ ಪ್ರೆಸ್ ನಲ್ಲಿ ಈಗ ಗುಟೆನ್ ಬರ್ಗ್ ಹವಾ’ ಎಂಬ ಲೇಖನವನ್ನು ಓದಿರಿ.

ಬಲಭಾಗದಲ್ಲಿ ಕೆಟಗರಿ, ಟ್ಯಾಗ್, ಫೀಚರ್ಡ್ ಫೋಟೊ ಇತ್ಯಾದಿ ವಿಭಾಗಗಳು ಇರುತ್ತವೆ. ಕೆಟಗರಿ ಎಂದರೆ ಒಂದು ವಿಭಾಗ.  ನೀವು ನ್ಯೂಸ್ ಪೋರ್ಟಲ್ ಮಾಡುತ್ತಿದ್ದರೆ, ನೀವು ನ್ಯೂಸ್ ಎಂಬ ಕೆಟಗರಿ ಕ್ರಿಯೆಟ್ ಮಾಡಿ. ಅಥವಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಇತ್ಯಾದಿ ಕೆಟಗರಿ ರಚಿಸಬಹುದು. ನೀವು ಬರೆದ ಲೇಖನ ರಾಷ್ಟ್ರೀಯ ವಿಭಾಗಕ್ಕೆ ಸಂಬಂಧಪಟ್ಟಿದ್ದರೆ ರಾಷ್ಟ್ರೀಯ ಕೆಟಗರಿ ರಚಿಸಿ. ಮುಂದೆ ಯಾವುದೇ ರಾಷ್ಟ್ರೀಯ ಲೇಖನಗಳನ್ನು ಬರೆದಾಗ ರಾಷ್ಟ್ರೀಯ ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ವೆಬ್ ಸೈಟ್ ನಲ್ಲಿ ರಾಷ್ಟ್ರೀಯ ವಿಭಾಗದಲ್ಲಿ ಈ ವಿಭಾಗದ ಎಲ್ಲಾ ಲೇಖನಗಳು ಕಾಣಿಸುತ್ತವೆ.  ನಿಮ್ಮ ಪರ್ಮಲಿಂಕ್ ಯುಆರ್ ಎಲ್ ಅನ್ನು ಕನ್ನಡದಿಂದ ಇಂಗ್ಲಿಷ್ ಗೆ ಬದಲಾಯಿಸಿಕೊಳ್ಳುವುದು ಸೂಕ್ತ. ಅಂದರೆ ಲೇಖನದ ಯುಆರ್ ಎಲ್ ಕನ್ನಡದಲ್ಲಿ ಇದ್ದರೆ ಅದನ್ನು ಇಂಗ್ಲಿಷ್ ಗೆ ಪರಿವರ್ತಿಸಿ. ಅದನ್ನು ಸ್ಲಗ್ ಮೂಲಕ ಬದಲಾಯಿಸಿಕೊಳ್ಳಬಹುದು. ಯಾವುದೇ ಸಂದೇಹ ಇದ್ದರೂ ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಪೋಸ್ಟ್ ಗಳಲ್ಲಿ ಟೈಟಲ್ ಮತ್ತು ಟ್ಯಾಗ್ ಲೈನ್ ರಚಿಸುವುದು ಅತ್ಯಂತ ಅವಶ್ಯ.

ಇದೇ ರೀತಿ ಪೇಜ್ ಎಂಬ ವಿಭಾಗಕ್ಕೆ ಹೋಗಿ ನಿಮಗೆ ಬೇಕಾದ ಪುಟಗಳನ್ನು ರಚಿಸಬಹುದು (ಉದಾಹರಣೆಗೆ, ನಮ್ಮ ಬಗ್ಗೆ, ಸಂಪರ್ಕಿಸಿ, ಷರತ್ತುಗಳು ಮತ್ತು ನಿಯಮಗಳು ಇತ್ಯಾದಿ ಪುಟ ರಚಿಸಬಹುದು)

ಮೆನು ರಚಿಸುವುದು ಹೇಗೆ?

ಮೆನು ಎಂದರೆ ಏನೆಂಬುದನ್ನು ತಿಳಿಯಲು ಈ ಮುಂದಿನ ಚಿತ್ರ ನೋಡಿ.

wordpress menu

ಮುಖಪುಟ, ವಿಭಾಗ 1 ವಿಭಾಗ 2 ಇತ್ಯಾದಿಗಳು ಮೆನು. ಇದನ್ನು ರಚಿಸಲು ನೀವು ಅಪಿಯರೆನ್ಸ್ ನಲ್ಲಿ ಇರುವ ಮೆನು ವಿಭಾಗಕ್ಕೆ ಹೋಗಿ. ಮೆನುವಿಗೆ ಒಂದು ಹೆಸರು ನೀಡಿ, ನಿಮಗೆ ಬೇಕಾದ ವಿಭಾಗಗಳನ್ನು ಮೆನುವಿಗೆ ಹಾಕುತ್ತ ಹೋಗಿ.

ಕಸ್ಟಮೈಸ್ ಮಾಡುವುದು

wordpress customize

ಅಪಿಯರೆನ್ಸ್ ಆಯ್ಕೆಯಲ್ಲಿರುವ ಕಸ್ಟಮೈಸ್ ವಿಭಾಗಕ್ಕೆ ಹೋಗಿ. ಅಲ್ಲಿರುವ ಪ್ರತಿಯೊಂದು ವಿಭಾಗದಲ್ಲಿ ನಿಮಗೆ ಬೇಕಾದ ಬದಲಾವಣೆ ಮಾಡುತ್ತ ಹೋಗಬಹುದು. ಅಂದರೆ, ವಿಡ್ಜೆಟ್ ಗಳನ್ನು ಸೈಡ್ ಬಾರ್‍ ಗೆ ಜೋಡಿಸುವುದು, ಮುಖಪುಟದಲ್ಲಿ ಪೋಸ್ಟ್ ಇರಬೇಕೋ, ಸ್ಟ್ಯಾಟಿಕ್ ಪುಟ ಇರಬೇಕೋ ಎಂದು ನಿರ್ಧರಿಸಬಹುದು.

ಸಾಮಾನ್ಯ ಸೆಟ್ಟಿಂಗ್ ಗಳು

ವರ್ಡ್ ಪ್ರೆಸ್ ಡ್ಯಾಷ್ ಬೋರ್ಡ್ ಗೆ ಬನ್ನಿ. ಅಲ್ಲಿ ಸೆಟ್ಟಿಂಗ್ ವಿಭಾಗದಲ್ಲಿ ಜನರಲ್ ಸೆಟ್ಟಿಂಗ್ ಗೆ ಹೋಗಿ. ಅಲ್ಲಿ ಸೈಟ್ ಟೈಟಲ್, ಟ್ಯಾಗ್ ಲೈನ್ ಇತ್ಯಾದಿಗಳು ಇರುತ್ತವೆ. ಅವಶ್ಯಕತೆ ಇರುವಲ್ಲಿ ಬದಲಾವಣೆ ಮಾಡುತ್ತ ಬನ್ನಿ. ಅದೇ ರೀತಿ, ರೈಟಿಂಗ್, ರೀಡಿಂಗ್, ಡಿಸ್ಕಷನ್ ಇತ್ಯಾದಿ ವಿಭಾಗಗಳಲ್ಲಿ ನಿಮಗೆ ಬೇಕಾದಂತೆ ಬದಲಾವಣೆ ಮಾಡಿ. ಪರ್ಮಲಿಂಕ್ ಯಾವ ರೀತಿ ಇರಬೇಕು ಎಂದು ಆಯ್ಕೆ ಮಾಡಿ(ನಿಮ್ಮ ವೆಬ್ ಸೈಟ್ ಯುಆರ್ ಎಲ್ ಯಾವ ರೀತಿ ಇರಬೇಕು ಎನ್ನುವ ಕುರಿತು). ಬಹುತೇಕ ವೆಬ್ ಸೈಟ್ ಗಳ ಯುಆರ್ ಎಲ್ ಗಳು ಪೋಸ್ಟ್ ಸಂಖ್ಯೆಯಲ್ಲಿ ಇರುತ್ತದೆ. ಈ ರೀತಿ ಇದ್ದರೆ ಗೂಗಲ್ ಸರ್ಚ್ ಗೆ ಸೂಕ್ತವಲ್ಲ. ಅದರ ಬದಲು ಪೋಸ್ಟ್ ನೇಮ್ ಅನ್ನು ಒಳಗೊಂಡ ಯುಆರ್ ಎಲ್ ಸೂಕ್ತ.

ಇಲ್ಲಿಗೆ ನಿಮ್ಮ ಬೇಸಿಕ್ ವರ್ಡ್ ಪ್ರೆಸ್ ವೆಬ್ ಸೈಟ್ ಸಿದ್ಧವಾಯಿತು. ಇನ್ನು ಮುಂದೆ ಪ್ಲಗಿನ್ ಸೇರಿದಂತೆ ಸಾಕಷ್ಟು ಮಾಹಿತಿಯನ್ನು ಕಲಿಯಲಿದ್ದೀರಿ. ಅದನ್ನು ಮುಂದಿನ ಲೇಖನದಲ್ಲಿ ತಿಳಿಸುತ್ತೇನೆ.  

ಹಿಂದಿನ ಲೇಖನ: ವರ್ಡ್ ಪ್ರೆಸ್ ವೆಬ್ ಸೈಟ್ ರಚನೆ ಕಲಿಯಲು ಆಫ್ ಲೈನ್ ಟೂಲ್

ಮುಂದಿನ ಲೇಖನ: ವರ್ಡ್ ಪ್ರೆಸ್ ವೆಬ್ ಸೈಟ್ ನಲ್ಲಿ ಇರಬೇಕಾದ ಪ್ಲಗಿನ್ ಗಳು