ವಿಜಯ ಕರ್ನಾಟಕ ಮಿನಿ: ಮೆದುಳು ಬಳಸಲು ಮರೆಯದಿರಿ

vijaya karnataka mini

ಉದ್ಯೋಗಿಗಳಿಗೆ ಈಗ ಇಂಟರ್‌ನೆಟ್‌, ಎಐ ಎನ್ನುವುದು ಬಯಸಿದ್ದನ್ನು ಕೊಡುವ ಕಾಮಧೇನು. ಕಂಪನಿಗಳಿಗೆ ಟೆಕ್ನೋಕ್ರಾಟ್‌ಗಳ ಜತೆಗೆ ಸ್ವಂತ ಮೆದುಳು ಬಳಸುವವರ ಅಗತ್ಯ ಹಿಂದೆದಿಗಿಂತಲೂ ಹೆಚ್ಚಾಗಿದೆ. ನಿಮ್ಮ ಕ್ರಿಟಿಕಲ್‌ ಥಿಂಕಿಂಗ್‌ ಮತ್ತು ಪ್ರಾಬ್ಲಂ ಸಾಲ್ವಿಂಗ್‌ ಕೌಶಲ ಹೆಚ್ಚಿಸಿಕೊಳ್ಳಿ. (ವಿಜಯ ಕರ್ನಾಟಕ ಮಿನಿಯಲ್ಲಿ ಪ್ರಕಟಿತ)


ನಾಸಾದವರು ಒಮ್ಮೆ ಸ್ಪೇಸ್‌ ಪೆನ್‌ ಕುರಿತು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಗಗನಯಾತ್ರಿಗಳಿಗೆ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಪೆನ್‌ ಮೂಲಕ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಝೀರೋ ಗ್ರಾವಿಟಿಯಲ್ಲಿ ಇಂಕ್‌ ಹರಿಯುತ್ತಿರಲಿಲ್ಲ. ಹೀಗಾಗಿ, ವಿಜ್ಞಾನಿಗಳೆಲ್ಲ ತಲೆಕೆಡಿಸಿಕೊಂಡು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸ್ಪೇಸ್‌ ಪೆನ್‌ ಅಭಿವೃದ್ಧಿಪಡಿಸಿದರು. ಇದೇ ಸಮಸ್ಯೆ ಸೋವಿಯತ್‌ ಯೂನಿಯನ್‌ಗೂ ಉಂಟಾಗಿತ್ತು. ಆದರೆ, ಅವರು ಹಣ ಖರ್ಚು ಮಾಡಿ ಸ್ಪೇಸ್‌ ಪೆನ್‌ ಅಭಿವೃದ್ಧಿಪಡಿಸಲಿಲ್ಲ. ಅಂತರಿಕ್ಷದಲ್ಲಿ ಪೆನ್‌ ಬದಲು ಪೆನ್ಸಿಲ್‌ ಬಳಸಿದರು.


ಏರ್‌ಬಸ್‌ ವಿಮಾನದಲ್ಲಿ ಎಂಜಿನ್‌ ಬಿಸಿ ಹೆಚ್ಚಾಗುತ್ತಿತ್ತು. ಹಲವು ಎಂಜಿನಿಯರ್‌ಗಳು ಎಂಜಿನ್‌ನ ಹಲವು ಭಾಗಗಳನ್ನು ಬದಲಿಸಿ ಸರಿಪಡಿಸಲು ಯತ್ನಿಸಿದರು. ಸಮಸ್ಯೆ ಬಗೆಹರಿಯಲಿಲ್ಲ. ಒಬ್ಬ ಟೆಕ್ನಿಷಿಯನ್‌ ಮಾತ್ರ ಎಂಜಿನ್‌ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದ. ಫ್ಯಾನ್‌ ಬ್ಲೇಡ್‌ಗಳ ಮೇಲೆ ಕಸ ತುಂಬಿರುವುದನ್ನು ಗಮನಿಸಿದ. ಫ್ಯಾನ್‌ ಸ್ವಚ್ಛಗೊಳಿಸಿದ. ಸಮಸ್ಯೆ ಬಗೆಹರಿಯಿತು.

ಟ್ರಾವಿಸ್ ಕಲಾನಿಕ್, ಗ್ಯಾರೆಟ್ ಕ್ಯಾಂಪ್ ಎಂಬ ಇಬ್ಬರು ಗೆಳೆಯರಿಗೆ ಎಲ್ಲಿಗೋ ಹೋಗಬೇಕಿತ್ತು. ಆದರೆ, ಟ್ಯಾಕ್ಸಿ ಸಿಗದೆ ಕಂಗಲಾದರು. “ನಮ್ಮ ಸ್ಮಾರ್ಟ್‌ಫೋನ್‌ ಬಳಸಿಕೊಂಡು ಸುತ್ತಮುತ್ತ ಇರುವ ಟ್ಯಾಕ್ಸಿಗಳು ನಮ್ಮ ಬಳಿಗೆ ಬರುವಂತೆ ಮಾಡಿದರೆ ಹೇಗೆ?” ಎಂದು ಯೋಚಿಸಿದರು. ಉಬರ್‌ ಕಂಪನಿ ಸ್ಥಾಪಿಸಿದರು.

ಭಾರತದಲ್ಲಿ ನೋಟು ರದ್ಧತಿಯಾದ ಸಮಯದಲ್ಲಿ ಜನರ ಕಿಸೆಯಲ್ಲಿ ಹಣ ಇರಲಿಲ್ಲ. ಈ ಸಮಯದಲ್ಲಿ ಪೇಟಿಎಂ ಕಂಪನಿಯು ಸ್ಕ್ಯಾನ್‌ ಮಾಡಬಹುದಾದ ಕ್ಯೂಆರ್‌ ಕೋಡ್‌ ಪರಿಚಯಿಸಿತು. ಜನರು ಚಿಲ್ಲರೆ, ನೋಟು ಹುಡುಕುವ ಬದಲು ಪೇಟಿಎಂ ಬಳಸಲು ಆರಂಭಿಸಿದರು.

ನಿಮ್ಮ ವಾಹನವನ್ನು ರಿಪೇರಿ ಮಾಡಲು ಶೋರೂಂಗೆ ತೆಗೆದುಕೊಂಡು ಹೋದರೆ ಸಾಮಾನ್ಯವಾಗಿ ಹಾಳಾದ ಬಿಡಿಭಾಗವನ್ನು ಸರಿಪಡಿಸುವ ಬದಲು ಹೊಸ ಬಿಡಿಭಾಗ ಹಾಕಿಕೊಡುತ್ತಾರೆ. ಇದು ಬಿಡಿಭಾಗ ಮಾರಾಟದ ತಂತ್ರ ಎನ್ನುವುದು ಸರಿ. ಆದರೆ, ಅಲ್ಲಿನ ಬಹುತೇಕರಿಗೆ ಆ ಬಿಡಿಭಾಗವನ್ನು ಸರಿಪಡಿಸಲು ತಿಳಿದಿರುವುದಿಲ್ಲ. ಇದರ ಬದಲು ಸ್ಥಳೀಯ ಮೆಕ್ಯಾನಿಕ್‌ ಬಳಿಗೆ ಹೋದರೆ ಹಳೆಯ ಬಿಡಿಭಾಗವನ್ನೇ ಬಿಡಿಸಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಾನೆ.

ಕ್ರಿಟಿಕಲ್‌ ಥಿಂಕಿಂಗ್‌ ಮತ್ತು ಪ್ರಾಬ್ಲಂ ಸಾಲ್ವಿಂಗ್‌

ಉದ್ಯೋಗ ತಾಣಗಳಲ್ಲಿ ಕಾಣಸಿಗುವ ಉದ್ಯೋಗಾವಕಾಶಗಳಲ್ಲಿ “ಅಭ್ಯರ್ಥಿಗಳಿಂದ ಬಯಸುವ ಕೌಶಲ” ವಿಭಾಗದಲ್ಲಿ ಸಾಮಾನ್ಯವಾಗಿ ಕ್ರಿಟಿಕಲ್‌ ಥಿಂಕಿಂಗ್‌ ಮತ್ತು ಪ್ರಾಬ್ಲಂ ಸಾಲ್ವಿಂಗ್‌ ಕೌಶಲವನ್ನು ಬಯಸಲಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆ, ಮೆದುಳಿನ ಅಗತ್ಯ ಕಂಪನಿಗೆ ಇದೆ ಎಂದರ್ಥ. ಆದರೆ, ಈಗಿನ ತಲೆಮಾರು ಕೃತಕ ಬುದ್ಧಿವಂತಿಕೆಯನ್ನು (ಎಐ) ಹೆಚ್ಚು ಬಳಸುತ್ತಿದ್ದಾರೆ. ಸ್ವಂತ ಮೆದುಳನ್ನು ಕಡಿಮೆ ಬಳಸುತ್ತಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಮಾತ್ರವಲ್ಲದೆ ಎಲ್ಲರೂ ಕ್ರಿಟಿಕಲ್‌ ಥಿಂಕಿಂಗ್‌ ಮತ್ತು ಪ್ರಾಬ್ಲಂ ಸಾಲ್ವಿಂಗ್‌ ಕೌಶಲವನ್ನು ಕಲಿಯಬೇಕಿದೆ. ಈ ಗುಣವನ್ನು ಕಲಿಯಲು ಯಾವುದೇ ಕೋರ್ಸ್‌ಗೆ ಸೇರಬೇಕಿಲ್ಲ. ಮನೆಯಲ್ಲಿ, ಶಾಲೆಯಲ್ಲಿ, ರಸ್ತೆಯಲ್ಲಿ, ತಾವಿರುವಲ್ಲಿ ಎಲ್ಲಿ ಬೇಕಾದರೂ ಸದಾ ಕಲಿಯುತ್ತ ಇರಬಹುದಾಗಿದೆ.

ಮನೆಯಲ್ಲಿ ಒಬ್ಬರು ಹೃದಯಘಾತವಾಗಿ ಕುಸಿದುಬಿದ್ದರು ಎಂದಿರಲಿ. ಆಗ ಮನೆಯಲ್ಲಿದ್ದವರು ಗೋಳೋ ಎಂದು ಅಳುತ್ತಾ ಟೆನ್ಷನ್‌ನಲ್ಲಿ ಇರುತ್ತಾರೆ. ತಕ್ಷಣ ಮನೆಯ ಸದಸ್ಯರೊಬ್ಬರು ಗೋಲ್ಡನ್‌ ಅವರ್‌ ನೆನಪಿಸಿಕೊಂಡು ಸಿಪಿಆರ್‌ ಮಾಡುತ್ತಾರೆ, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡುತ್ತಾರೆ. ಬೇರೊಂದು ಘಟನೆಯಲ್ಲಿ, ರಸ್ತೆಯಲ್ಲಿ ಅಪಘಾತವಾಗಿದೆ ಎಂದಿರಲಿ. ಸಾಕಷ್ಟು ಜನರು ಗುಂಪು ಸೇರಿರುತ್ತಾರೆ. ಕೆಲವರು ವಿಡಿಯೋ ಮಾಡುತ್ತ ಇರುತ್ತಾರೆ. ಇನ್ನು ಕೆಲವರು ರಸ್ತೆ ಗುಂಡಿಗೆ, ತಿರುವಿಗೆ ಬಯ್ಯುತ್ತಾ ಇರುತ್ತಾರೆ. ಅವನ ತಪ್ಪು ಇವನ ತಪ್ಪು ಎಂದು ಹೇಳುತ್ತಿರುತ್ತಾರೆ. ಗುಸುಗುಸು ಪಿಸುಪಿಸು ಲೊಚಗುಟ್ಟುವ ಆ ಗುಂಪಿನ ನಡುವೆ ಒಂದಿಬ್ಬರು ಮಾತ್ರ ತಕ್ಷಣ ಕಾರ್ಯಪ್ರವೃತರಾಗುತ್ತಾರೆ. ಅಂಬ್ಯುಲೆನ್ಸ್‌ಗೆ ಕರೆ ಮಾಡುತ್ತಾರೆ. ರಕ್ತ ಅತಿಯಾಗಿ ಸೋರುತ್ತಿದ್ದರೆ ತಡೆಯಲು ಯತ್ನಿಸುತ್ತಾರೆ. ಪ್ರಥಮ ಚಿಕಿತ್ಸೆ ಮಾಡಲು ಪ್ರಯತ್ನಿಸುತ್ತಾರೆ. ಅಂಬ್ಯುಲೆನ್ಸ್‌ ಬರುವುದು ತಡವಾಗುತ್ತಿದೆ ಎಂದಾದರೆ ತಕ್ಷಣವೇ ಬೇರೆ ವಾಹನದ ವ್ಯವಸ್ಥೆ ಮಾಡುತ್ತಾರೆ. ಅಪಘಾತದ ಸ್ಥಳದಲ್ಲಿ ಸೇರಿರುವ ನೂರಾರು ಜನರನ್ನು ಒಂದು ಕಂಪನಿಯ ಉದ್ಯೋಗಿಗಳು ಎಂದುಕೊಂಡರೆ ತಕ್ಷಣ ಕಾರ್ಯಪ್ರವೃತರಾದ ಆ ಕೆಲವು ಜನರು “ಕ್ರಿಟಿಕಲ್‌ ಥಿಂಕಿಂಗ್‌ ಮತ್ತು ಪ್ರಾಬ್ಲಂ ಸಾಲ್ವಿಂಗ್‌” ಗುಣವುಳ್ಳವರು ಎಂದುಕೊಳ್ಳಬಹುದು.

ಇದನ್ನೂ ಓದಿ: ಕ್ಷಣಾರ್ಧದಲ್ಲಿ ಸಾಫ್ಟ್‌ವೇರ್‌ ನಿರ್ಮಿಸುವ ಎಐ; ಸಾಫ್ಟ್‌ವೇರ್ ಎಂಜಿನಿಯರ್‌ಗಳ ಯುಗ ಮುಗಿಯಿತೇ?

ಕರಿಯರ್‌ಗೆ ಅವಶ್ಯಕ ಸ್ಕಿಲ್‌

ಉದ್ಯೋಗಿಗಳಿಗೆ ಈಗ ಇಂಟರ್‌ನೆಟ್‌, ಎಐ ಎನ್ನುವುದು ಬಯಸಿದ್ದನ್ನು ಕೊಡುವ ಕಾಮಧೇನು. ಬಹುತೇಕರು ತಮ್ಮ ಮೆದುಳನ್ನು ಮರೆತು ಎಐ ಮೆದುಳನ್ನು ಅತಿಯಾಗಿ ಬಳಸುತ್ತಿದ್ದಾರೆ. ತಮ್ಮೆಲ್ಲ ಪ್ರಶ್ನೆಗಳಿಗೆ, ಕಷ್ಟಗಳಿಗೆ, ನೋವುಗಳಿಗೆ ತಂತ್ರಜ್ಞಾನದ ಮೂಲಕ ಉತ್ತರ ಪಡೆಯುತ್ತಿದ್ದಾರೆ. ತಮ್ಮ ಬುದ್ಧಿಮತ್ತೆ ಬಳಸುವುದನ್ನು ಮರೆತು ಕೃತಕ ಬುದ್ಧಿಮತ್ತೆ ಬಳಸುತ್ತಿದ್ದಾರೆ. ಈಗಿನ ಉದ್ಯೋಗ ಜಗತ್ತಿಗೆ ತಂತ್ರಜ್ಞಾನ ಬಲ್ಲವರು ಬೇಕು ನಿಜ. ಟೆಕ್ನೋಕ್ರಾಟ್‌ ಜತೆಗೆ ಸ್ವಂತ ಮೆದುಳು ಬಳಸುವವರಿಗೆ ಕಂಪನಿಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ. ಸರಕಾರಿ ಉದ್ಯೋಗ ಇರಲಿ, ಖಾಸಗಿ ಉದ್ಯೋಗ ಇರಲಿ, ಎಲ್ಲೆಡೆ ಈಗ ಉದ್ಯೋಗಿಗಳ ಪ್ರಾಬ್ಲಂ ಸಾಲ್ವಿಂಗ್‌ ಗುಣವನ್ನು ಒರೆಗೆ ಹಚ್ಚುತ್ತಾರೆ. ಬ್ಯಾಂಕಿಂಗ್‌ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಲಾಜಿಕಲ್‌ ರೀಸನಿಂಗ್‌ ಇತ್ಯಾದಿ ಪರೀಕ್ಷೆಗಳು ಇರುವುದು ಇದೇ ಕಾರಣಕ್ಕೆ.
ವಿವಿಧ ಉದ್ಯೋಗ ಸಂದರ್ಶನಗಳಲ್ಲಿ “ನಮ್ಮ ಉತ್ಪನ್ನಕ್ಕೆ ಗ್ರಾಹಕರು ಈ ರೀತಿ ದೂರು ನೀಡುತ್ತಿದ್ದಾರೆ. ಇದನ್ನು ನೀವು ಹೇಗೆ ಪರಿಹರಿಸುವಿರಿ?” ಎಂದು ಕೇಳಬಹುದು. ಕೆಲಸ ಮಾಡುವಾಗ ಉಂಟಾದ ಸಮಸ್ಯೆಯ ಉದಾಹರಣೆಯನ್ನು ಹೇಳಿ, ಇದನ್ನು ನೀವು ಹೇಗೆ ನಿರ್ವಹಿಸಿದ್ದೀರಿ ಎಂದು ಕೇಳಬಹುದು. ಕೆಲವೊಂದು ಉದ್ಯೋಗ ನೇಮಕದಲ್ಲಿ ಗುಂಪು ಚರ್ಚೆ ಅಥವಾ ಗ್ರೂಪ್‌ ಡಿಸ್ಕಷನ್‌ ಇರುತ್ತದೆ. ಇಲ್ಲಿ ಅಭ್ಯರ್ಥಿಗಳ ಗುಂಪಿನಲ್ಲಿ ಯಾರ ಆಲೋಚನಾ ಕ್ರಮ ಉತ್ತಮವಾಗಿದೆ ಎಂದು ಗಮನಿಸುತ್ತಾರೆ.

ಇದನ್ನೂ ಓದಿ: ಎಐ ಜತೆ ಸಂಬಂಧ ಬೆಳೆಸುವಾಗ ಇರಲಿ ಎಚ್ಚರ; ಚಾಟ್‌ಜಿಪಿಟಿ, ಜೆಮಿನಿ, ಗ್ರೋಕ್‌ ಜತೆಗಿನ ಆತ್ಮೀಯತೆ ಪ್ರೀತಿಯಾಗದಿರಲಿ

ಈ ರೀತಿಯ ಗುಣ ಇರುವವರು ತಮ್ಮ ಕರಿಯರ್‌ನಲ್ಲಿ ವೇಗವಾಗಿ ಪ್ರಗತಿ ಕಾಣುತ್ತಾರೆ. ಮ್ಯಾನೇಜರ್‌, ನಾಯಕತ್ವ ಸ್ಥಾನ ತಲುಪುತ್ತಾರೆ. ಕಂಪನಿಯಲ್ಲಿ ಹೊಸ ಆವಿಷ್ಕಾರದಲ್ಲಿ ಹೆಸರು ಮಾಡುತ್ತಾರೆ. ಸಮಸ್ಯೆ ಬಂದಾಗ ಅದನ್ನು ಬಗೆಹರಿಸಿ ಸಹೋದ್ಯೋಗಿಗಳ ವಿಶ್ವಾಸ ಹೆಚ್ಚಿಸಿಕೊಂಡು ತಂಡಕ್ಕೆ ಹೀರೋ ಆಗುತ್ತಾರೆ. ಕಂಪನಿಗೆ ಅಗತ್ಯ ಉದ್ಯೋಗಿಯಾಗುತ್ತಾರೆ. ಕೆಲಸ ಮಾಡಲು ಹತ್ತು ಜನರು ಸಿಗಬಹುದು. ಆದರೆ, ಕ್ರಿಟಿಕಲ್‌ ಥಿಂಕರ್‌ ಮತ್ತು ಪ್ರಾಬ್ಲಂ ಸಾಲ್ವರ್‌ ಸಿಗುವುದು ಅಪರೂಪ. ಇಂತಹ ಅಪರೂಪದ ವ್ಯಕ್ತಿತ್ವ ನಿಮ್ಮದಾಗಲಿ.


ಮೆದುಳು ಹೀಗೆ ಬಳಸಿ

  • ಪ್ರಶ್ನಿಸಿ: “ಏಕೆ?”, “ಹೇಗೆ?”, “ಇನ್ನೊಂದು ದಾರಿ ಇದೆಯೇ?” ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ.
  • ಸಮಸ್ಯೆಯ ಮೂಲವನ್ನು ಹುಡುಕಿ: ಲಕ್ಷಣಗಳನ್ನು ಮಾತ್ರ ನೋಡದೆ, ಆ ಸಮಸ್ಯೆಯ ಮೂಲ ಕಾರಣ ಪರಿಶೀಲಿಸಿ.
  • ವಿವಿಧ ದೃಷ್ಟಿಕೋನಗಳಿಂದ ಯೋಚಿಸಿ ಪರಿಹಾರ ಕಂಡುಕೊಳ್ಳಲು ಯತ್ನಿಸಿ.
  • ಡೇಟಾ ಆಧರಿತ ನಿರ್ಧಾರ ತಗೊಳ್ಳಿ: ಊಹೆ ಆಧಾರದಲ್ಲಿ ಅಲ್ಲ, ಅಂಕಿ–ಅಂಶ ಮತ್ತು ಸಾಕ್ಷಿ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಿ
  • ಸೃಜನಶೀಲ ಚಿಂತನೆ ಅಭ್ಯಾಸ ಮಾಡಿ: ಔಟ್‌ ಆಫ್‌ ಬಾಕ್ಸ್‌ ಪರಿಹಾರಗಳನ್ನು ಹುಡುಕಿ.
  • ಸಹನೆ ಮತ್ತು ತಾಳ್ಮೆಯಿಂದ ಸಮಸ್ಯೆ ಬಗೆಹರಿಸಲು ಯತ್ನಿಸಿ. ತಕ್ಷಣ ಫಲ ಸಿಗದಿದ್ದರೂ ಹೊಸ ಪ್ರಯತ್ನಗಳನ್ನು ಮುಂದುವರಿಸಿ.
  • ತಪ್ಪುಗಳಿಂದ ಕಲಿಯಿರಿ: ವಿಫಲವಾದಾಗ ಆತ್ಮವಿಶ್ವಾಸ ಕಳೆದುಕೊಳ್ಳದೆ, ಅದನ್ನು ಮುಂದಿನ ಪರಿಹಾರಕ್ಕೆ ಪಾಠವನ್ನಾಗಿ ಬಳಸಿಕೊಳ್ಳಿ.
  • ತಂಡದೊಂದಿಗೆ ಚರ್ಚಿಸಿ: ನಾನು ಹೇಳಿದ್ದೇ ಫೈನಲ್‌ ಎಂದುಕೊಳ್ಳಬೇಡಿ. ಎಲ್ಲರ ಅಭಿಪ್ರಾಯಪಡೆಯಿರಿ.
  • ಪ್ರತಿ ದಿನ ಮೆದುಳಿಗೆ ವ್ಯಾಯಾಮ ಕೊಡಿ – ಪಜಲ್‌, ಚೆಸ್‌, ಕ್ವಿಜ್‌, ಬರವಣಿಗೆ ಇತ್ಯಾದಿಗಳ ಮೂಲಕ ನಿಮ್ಮ ಮೆದುಳಿಗೆ ವ್ಯಾಯಾಮ ಮಾಡಿಸಿ.
error: Content is protected !!